Dailyhunt Logo
  • Light mode
    Follow system
    Dark mode
    • Play Story
    • App Story
RAIN SHORTAGE : ಮುನಿದ ಮುಂಗಾರು - ಶೇ 26 ರಷ್ಟು ಮಾತ್ರ ಬಿತ್ತನೆ, ಆತಂಕದಲ್ಲಿ ಕೃಷಿ ವಲಯ!

RAIN SHORTAGE : ಮುನಿದ ಮುಂಗಾರು - ಶೇ 26 ರಷ್ಟು ಮಾತ್ರ ಬಿತ್ತನೆ, ಆತಂಕದಲ್ಲಿ ಕೃಷಿ ವಲಯ!

Navasamaja.com 4 months ago

ಬೆಂಗಳೂರು : ಕರ್ನಾಟಕದಲ್ಲಿ ಮುಂಗಾರು ಮಳೆಯ (Rain ) ತೀವ್ರ ಕೊರತೆಯಿಂದಾಗಿ (Shortage ) ಕೃಷಿ ವಲಯ ಸಂಪೂರ್ಣ ಕಂಗಾಲಾಗಿದೆ. ಅನ್ನದಾತರು (Farmers ) ಸಂಕಷ್ಟದಲ್ಲಿದ್ದಾರೆ.

ಜೂನ್ ತಿಂಗಳು ಕಳೆದರೂ ವಾಡಿಕೆಯಂತೆ ಮಳೆಯಾಗದ ಕಾರಣ ಕೃಷಿ ಚಟುವಟಿಕೆಗಳು ಕುಂಠಿತಗೊಂಡಿದ್ದು, ಅನ್ನದಾತರು ಆಕಾಶದ ಮುಖ ನೋಡಿ ಕುಳಿತುಕೊಳ್ಳುವಂತಾಗಿದೆ.

ವರುಣನ ಈ ಮುನಿಸು ಮುಂಬರುವ ದಿನಗಳಲ್ಲಿ ರಾಜ್ಯದ ಒಟ್ಟಾರೆ ಆಹಾರ ಧಾನ್ಯಗಳ ಉತ್ಪಾದನೆಯ ಮೇಲೆ ಭಾರಿ ಭೀತಿಯನ್ನು ಮೂಡಿಸಿದೆ.

ಕೃಷಿ ಇಲಾಖೆಯ ಅಂಕಿ-ಅಂಶಗಳ ಪ್ರಕಾರ, ಪ್ರಸ್ತುತ ಮುಂಗಾರು ಹಂಗಾಮಿನಲ್ಲಿ ಆಹಾರ ಧಾನ್ಯಗಳು, ಎಣ್ಣೆಕಾಳುಗಳು ಹಾಗೂ ವಾಣಿಜ್ಯ ಬೆಳೆಗಳು ಸೇರಿದಂತೆ ಒಟ್ಟು 84.10 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡುವ ಬೃಹತ್ ಗುರಿ ಹೊಂದಲಾಗಿತ್ತು. ಸಾಮಾನ್ಯವಾಗಿ ಜೂನ್ ಅಂತ್ಯದ ವೇಳೆಗೆ 46.29 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಬೇಕಿತ್ತಾದರೂ, ಮಳೆ ಅಭಾವದಿಂದಾಗಿ ಕೇವಲ ಶೇ. 26 ರಷ್ಟು ಅಂದರೆ 13.33 ಲಕ್ಷ ಹೆಕ್ಟೇರ್‌ನಲ್ಲಿ ಮಾತ್ರ ಪ್ರಗತಿ ದಾಖಲಾಗಿದೆ.

ರಾಜ್ಯದ ಜಿಲ್ಲಾವಾರು ಸ್ಥಿತಿಗತಿಯನ್ನು ಗಮನಿಸಿದರೆ, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಚಿಕ್ಕಬಳ್ಳಾಪುರ, ಕೋಲಾರ, ಮಂಡ್ಯ ಮತ್ತು ಬೆಂಗಳೂರು ದಕ್ಷಿಣ ಜಿಲ್ಲೆಗಳಲ್ಲಿ ಬಿತ್ತನೆ ಪ್ರಮಾಣ ಅತ್ಯಂತ ಕನಿಷ್ಠ ಮಟ್ಟದಲ್ಲಿದೆ. ಈಗಾಗಲೇ ಬಿತ್ತನೆ ಮಾಡಲಾದ ಜಮೀನಿನಲ್ಲೂ ಮಳೆ ಇಲ್ಲದೆ ಮೊಳಕೆ ಒಡೆದ ಬೆಳೆಗಳು ಮುರುಟಿ ಹೋಗುತ್ತಿವೆ. ಮತ್ತೊಂದೆಡೆ ಉತ್ತರ ಕರ್ನಾಟಕ ಹಾಗೂ ಬಯಲುಸೀಮೆ ಭಾಗದ ರೈತರು ಬಿತ್ತನೆ ಬೀಜ ಮತ್ತು ಗೊಬ್ಬರದ ದಾಸ್ತಾನು ಕೈಯಲ್ಲಿದ್ದರೂ ಮುಂಗಾರು ಮಳೆಗಾಗಿ ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ.

ಹವಾಮಾನ ಇಲಾಖೆಯ ಮುನ್ಸೂಚನೆಯು ರೈತರ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ. ಜುಲೈ ತಿಂಗಳಿನಲ್ಲೂ ವಾಡಿಕೆಗಿಂತ ಕಡಿಮೆ ಮಳೆಯಾಗುವ ಸಾಧ್ಯತೆಯಿದ್ದು, ಸುಮಾರು ಶೇ. 60 ರಷ್ಟು ಮಳೆ ಕೊರತೆಯಾಗುವ ಭೀತಿ ಎದುರಾಗಿದೆ. ಇಂತಹ ಕಠಿಣ ಅನಾವುಷ್ಟಿ ಪರಿಸ್ಥಿತಿಯಲ್ಲಿ ರಾಜ್ಯ ಸರ್ಕಾರವು ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ ಅಡಿಯಲ್ಲಿ ರೈತರಿಂದ ವಿಮಾ ಮೊತ್ತವನ್ನು ಪಾವತಿಸಿಕೊಳ್ಳುವ ಬದಲಿಗೆ, ತಾವೇ ಉಚಿತವಾಗಿ ವಿಮಾ ಸೌಲಭ್ಯ ಕಲ್ಪಿಸಿ ಕೃಷಿಕರ ನೆರವಿಗೆ ಧಾವಿಸಬೇಕು ಎಂದು ಜೋಳ ಬೆಳೆಗಾರರ ಒಕ್ಕೂಟದ ಪ್ರಮುಖರು ಒತ್ತಾಯಿಸಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Navasamaja