Dailyhunt Logo
  • Light mode
    Follow system
    Dark mode
    • Play Story
    • App Story
RAM MANDIR : ಇಂದು ಅಯೋಧ್ಯೆ ರಾಮ ಮಂದಿರ ಟ್ರಸ್ಟ್ ಮಹತ್ವದ ಸಭೆ -  ದೇಣಿಗೆ ಹಗರಣದ ಬಗ್ಗೆ ಚರ್ಚೆ

RAM MANDIR : ಇಂದು ಅಯೋಧ್ಯೆ ರಾಮ ಮಂದಿರ ಟ್ರಸ್ಟ್ ಮಹತ್ವದ ಸಭೆ - ದೇಣಿಗೆ ಹಗರಣದ ಬಗ್ಗೆ ಚರ್ಚೆ

Navasamaja.com 1 week ago

ಯೋಧ್ಯೆ: ಉತ್ತರ ಪ್ರದೇಶದ ಅಯೋಧ್ಯೆಯ (Ayodhya) ರಾಮಮಂದಿರದ (Ram mandir) ದೇಣಿಗೆಯಲ್ಲಿ ನಡೆದಿದೆ (Donation scandal) ಎನ್ನಲಾದ ಅವ್ಯವಹಾರದ ತನಿಖೆ ತೀವ್ರಗೊಳ್ಳುತ್ತಿರುವ ಬೆನ್ನಲ್ಲೇ, ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಇಂದು ಮಹತ್ವದ ಸಭೆಯನ್ನು ಹಮ್ಮಿಕೊಂಡಿದೆ.

ರಾಮಮಂದಿರ ಆವರಣದಲ್ಲಿರುವ ಅತಿಥಿಗೃಹದಲ್ಲಿ ಮಧ್ಯಾಹ್ನ 3 ಗಂಟೆಗೆ ಈ ಸಭೆ ಆರಂಭವಾಗಲಿದ್ದು, ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಮತ್ತು ಟ್ರಸ್ಟಿ ಅನಿಲ್ ಮಿಶ್ರಾ ಅವರ ರಾಜೀನಾಮೆಗಳ ಕುರಿತು ಇಲ್ಲಿ ಪ್ರಮುಖವಾಗಿ ಚರ್ಚೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

ಮಾಧ್ಯಮಗಳ ಉಪಸ್ಥಿತಿ ಹಾಗೂ ಗೌಪ್ಯತೆಯ ಕಾರಣಗಳಿಗಾಗಿ ಸಭೆಯ ಸ್ಥಳವನ್ನು ಮಣಿರಾಮ್ ಚಾವಣಿಯಿಂದ ಮಂದಿರದ ಒಳಗಿರುವ ಅತಿಥಿಗೃಹಕ್ಕೆ ಕೊನೆ ಕ್ಷಣದಲ್ಲಿ ಬದಲಾಯಿಸಲಾಗಿದೆ.

ದೇಣಿಗೆ ಹಣದ ಅವ್ಯವಹಾರದ ನೈತಿಕ ಹೊಣೆ ಹೊತ್ತು ಚಂಪತ್ ರಾಯ್ ಮತ್ತು ಅನಿಲ್ ಮಿಶ್ರಾ ಈಗಾಗಲೇ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದಾರೆ. ಒಂದು ವೇಳೆ ಇಂದಿನ ಸಭೆಯಲ್ಲಿ ಟ್ರಸ್ಟ್ ಇವರ ರಾಜೀನಾಮೆಯನ್ನು ಅಂಗೀಕರಿಸಿದರೆ, ಮುಂದಿನ ಆಡಳಿತಾತ್ಮಕ ಬದಲಾವಣೆಗಳು ಮತ್ತು ಹೊಸ ವ್ಯವಸ್ಥೆಯನ್ನು ರೂಪಿಸುವ ಕುರಿತು ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಾಗುತ್ತದೆ. ಇತ್ತೀಚೆಗಷ್ಟೇ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿ ಬಿಡುಗಡೆಯಾಗಿರುವ ಟ್ರಸ್ಟ್‌ನ 89 ವರ್ಷದ ಅಧ್ಯಕ್ಷ ನೃತ್ಯ ಗೋಪಾಲ್ ದಾಸ್ ಅವರು ಈ ಸಭೆಯಲ್ಲಿ ಪಾಲ್ಗೊಳ್ಳುವ ಸಾಧ್ಯತೆಯಿದೆ. ವಯೋಸಹಜ ಕಾರಣಗಳಿಂದಾಗಿ ಅಯೋಧ್ಯೆಗೆ ಬರಲು ಸಾಧ್ಯವಾಗದ ಹಿರಿಯ ಟ್ರಸ್ಟಿ ಕೆ. ಪರಾಶರನ್ ಅವರು ಆನ್‌ಲೈನ್ (ವರ್ಚುವಲ್) ಮೂಲಕ ಸಭೆಯಲ್ಲಿ ಭಾಗವಹಿಸಲಿದ್ದಾರೆ.

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಸರ್ಕಾರವು ಈ ಪ್ರಕರಣದ ತನಿಖೆಗಾಗಿ ರಚಿಸಿರುವ ವಿಶೇಷ ತನಿಖಾ ತಂಡದ (ಎಸ್‌ಐಟಿ) ವರದಿಯ ಕುರಿತೂ ಸಭೆಯಲ್ಲಿ ಗಂಭೀರ ಚರ್ಚೆ ನಡೆಯಲಿದೆ. ಇದುವರೆಗೆ ಎಸ್‌ಐಟಿ ತಂಡವು ಚಂಪತ್ ರಾಯ್ ಅವರ ನಿಕಟವರ್ತಿ ತಿನ್ನು ಯಾದವ್ ಸೇರಿದಂತೆ ಎಂಟು ಜನರನ್ನು ಬಂಧಿಸಿದೆ. ಎಸ್‌ಐಟಿ ಮತ್ತು ಪೊಲೀಸರು ಚಂಪತ್ ರಾಯ್, ಅನಿಲ್ ಮಿಶ್ರಾ ಮತ್ತು ವಿಶೇಷ ಆಮಂತ್ರಿತ ಗೋಪಾಲ್ ರಾವ್ ಅವರ ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದರೂ, ಸದ್ಯಕ್ಕೆ ಯಾರ ವಿರುದ್ಧವೂ ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ದಾಖಲಾಗಿಲ್ಲ. ಮುಂಬರುವ ದಿನಗಳಲ್ಲಿ ಟ್ರಸ್ಟ್‌ನ ಕಳೆದ ಕೆಲವು ವರ್ಷಗಳ ಹಣಕಾಸು ಲೆಕ್ಕಪರಿಶೋಧನೆ (ಆಡಿಟ್) ವರದಿಗಳನ್ನು ಕೂಡ ಎಸ್‌ಐಟಿ ಪರಿಶೀಲಿಸುವ ಸಾಧ್ಯತೆಯಿದೆ.

ಟ್ರಸ್ಟ್‌ನ ಖಜಾಂಚಿ ಸ್ವಾಮಿ ಗೋವಿಂದ ದೇವ್ ಗಿರಿ ಮಹಾರಾಜ್ ಅವರು ಟ್ರಸ್ಟ್‌ನ ಹಣಕಾಸು ವ್ಯವಸ್ಥೆಯು ಸಂಪೂರ್ಣ ಪಾರದರ್ಶಕವಾಗಿದೆ ಎಂದು ಸಮರ್ಥಿಸಿಕೊಂಡಿದ್ದಾರಾದರೂ, ತಪ್ಪು ಮಾಡಿದವರಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದ್ದಾರೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಕೂಡ ಈ ಪ್ರಕರಣದಲ್ಲಿ ಯಾವುದೇ ಕಾರಣಕ್ಕೂ ರಾಜಿ ಮಾಡಿಕೊಳ್ಳುವುದಿಲ್ಲ ಮತ್ತು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ. ಹೀಗಾಗಿ ಇಡೀ ದೇಶದ ಗಮನ ಸೆಳೆದಿರುವ ಈ ಪ್ರಕರಣದಲ್ಲಿ ಇಂದಿನ ಟ್ರಸ್ಟ್ ಸಭೆಯು ತೀವ್ರ ಕುತೂಹಲ ಮೂಡಿಸಿದೆ.

Dailyhunt
Disclaimer: This content has not been generated, created or edited by Dailyhunt. Publisher: Navasamaja