Dailyhunt Logo
  • Light mode
    Follow system
    Dark mode
    • Play Story
    • App Story
RAM MANDIR: ರಾಮ ಮಂದಿರ ದೇಣಿಗೆ ವಿವಾದ, ರಾಮನ ಅಸ್ತಿತ್ವ ಪ್ರಶ್ನಿಸಿದವರಿಂದ ಮೊಸಳೆ ಕಣ್ಣೀರು: ನಿತಿನ್ ನಬಿನ್

RAM MANDIR: ರಾಮ ಮಂದಿರ ದೇಣಿಗೆ ವಿವಾದ, ರಾಮನ ಅಸ್ತಿತ್ವ ಪ್ರಶ್ನಿಸಿದವರಿಂದ ಮೊಸಳೆ ಕಣ್ಣೀರು: ನಿತಿನ್ ನಬಿನ್

Navasamaja.com 3 months ago

ಲಖನೌ: ಅಯೋಧ್ಯೆಯ ಶ್ರೀರಾಮ ಮಂದಿರದ (Ram mandir) ದೇಣಿಗೆ ಲೂಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತೀಯ ಜನತಾ ಪಾರ್ಟಿಯ (Bjp) ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಅವರು (Nithin nambin) ಇದೇ ಮೊದಲ ಬಾರಿಗೆ ಪ್ರತಿಕ್ರಿಯಿಸಿದ್ದಾರೆ. ಈ ಪ್ರಕರಣವನ್ನೇ ನೆಪ ಮಾಡಿಕೊಂಡು ಹಿಂದೂ ವಿರೋಧಿ ಶಕ್ತಿಗಳು ದೇಶದಲ್ಲಿ ರಾಜಕೀಯ ಲಾಭ ಗಳಿಸುವ ದೊಡ್ಡ ಷಡ್ಯಂತ್ರ ನಡೆಸುತ್ತಿವೆ ಎಂದು ಅವರು ಆರೋಪ ಮಾಡಿದ್ದಾರೆ.

ಲಖನೌನಲ್ಲಿ ಆಯೋಜಿಸಲಾಗಿದ್ದ ಶಕ್ತಿ ಕೇಂದ್ರ ಸಂಯೋಜಕ ಸಮ್ಮೇಳನದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಈ ಹಿಂದೆ ಪ್ರಭು ಶ್ರೀರಾಮನ ಅಸ್ತಿತ್ವವನ್ನೇ ಪ್ರಶ್ನಿಸಿದ ವಿರೋಧ ಪಕ್ಷಗಳ ನಾಯಕರು, ಇಂದು ದೇಣಿಗೆ ಕಳ್ಳತನದ ಹೆಸರಿನಲ್ಲಿ ಮೊಸಳೆ ಕಣ್ಣೀರು ಸುರಿಸುತ್ತಾ ಹಿಂದೂಗಳ ನಂಬಿಕೆಯ ಪರವಾಗಿ ಮಾತನಾಡುತ್ತಿರುವುದು ಹಾಸ್ಯಾಸ್ಪದ ಎಂದು ಹರಿಹಾಯ್ದಿದ್ದಾರೆ.

ರಾಮಸೇತುವಿನ ಅಸ್ತಿತ್ವವನ್ನು ನಿರಾಕರಿಸಿದವರು ಇವರೇ

ಅಯೋಧ್ಯೆ ಮಂದಿರದ ಕುರಿತು ಟೀಕೆ ಮಾಡುತ್ತಿರುವ ವಿಪಕ್ಷಗಳ ಇತಿಹಾಸವನ್ನು ನೆನಪಿಸಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು, ಪ್ರಭು ಶ್ರೀರಾಮ ಮತ್ತು ರಾಮಸೇತುವಿನ ಅಸ್ತಿತ್ವವನ್ನು ನಿರಾಕರಿಸಿದವರು ಇದೇ ನಾಯಕರು. ಹಿಂದೆ ಅಯೋಧ್ಯೆಯಲ್ಲಿ ಕರಸೇವಕರ ಮೇಲೆ ಗುಂಡಿನ ದಾಳಿ ನಡೆಸಿ ರಕ್ತದ ಹೊಳೆಯನ್ನೇ ಹರಿಸಿದವರೂ ಇವರೇ ಆಗಿದ್ದಾರೆ. ಇಂತಹ ಹಿಂದೂ ವಿರೋಧಿ ಶಕ್ತಿಗಳು ಇಂದು ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಈ ವಿವಾದವನ್ನು ಬಳಸಿಕೊಳ್ಳುತ್ತಿದ್ದಾರೆ.

ರಾಹುಲ್ ಗಾಂಧಿ, ಅಖಿಲೇಶ್ ಯಾದವ್ ಮತ್ತು ಅರವಿಂದ್ ಕೇಜ್ರಿವಾಲ್ ಅವರಿಗೆ ನಾನು ಸ್ಪಷ್ಟವಾಗಿ ಹೇಳಬಯಸುತ್ತೇನೆ, ನಿಮ್ಮ ವಂಚನೆಗಳ ತಂತ್ರಗಳಿಗೆ ನಾವು ಬಲಿಯಾಗುವುದಿಲ್ಲ ಹಾಗೂ ನಿಮ್ಮ ದಾರಿತಪ್ಪಿಸುವ ಮಾತುಗಳಿಂದ ಹಿಂದೂ ಧರ್ಮವನ್ನು ಕಡಿಮೆ ಅಂದಾಜು ಮಾಡಬೇಡಿ ಎಂದು ಅವರು ಎಚ್ಚರಿಕೆ ನೀಡಿದ್ದಾರೆ. ಶ್ರೀರಾಮ ಮಂದಿರಕ್ಕೆ ಸಂಬಂಧಿಸಿದ ಭಕ್ತರ ನಂಬಿಕೆಯೊಂದಿಗೆ ಯಾರೂ ಆಟವಾಡದಂತೆ ತಡೆಯಲು ನಾವು ನಮ್ಮ ರಕ್ತವನ್ನು ಚೆಲ್ಲಲು ಹಾಗೂ ಪ್ರಭು ಶ್ರೀರಾಮನ ಗೌರವ ಕಾಪಾಡಲು ಯಾವುದೇ ರೀತಿಯ ತ್ಯಾಗಕ್ಕೂ ಸಿದ್ಧರಿದ್ದೇವೆ ಎಂದು ನಿತಿನ್ ನಬಿನ್ ನುಡಿದರು.

ಶ್ರೀರಾಮನಿಗೆ ಅಪಮಾನ ಮಾಡಿದರೆ ಸಹಿಸುವುದಿಲ್ಲ
ಇನ್ನು ಈ ಭಾರಿ ದೇಣಿಗೆ ಲೂಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್‌ಎಸ್‌ಎಸ್ ನಾಯಕರು ವ್ಯಕ್ತಪಡಿಸಿರುವ ಕಳವಳವನ್ನು ಉಲ್ಲೇಖಿಸಿದ ಅವರು, ಇತ್ತೀಚೆಗಷ್ಟೇ ರಾಷ್ಟ್ರೀಯ ಸ್ವಯಂಸೇವಕ ಸಂಘವು ರಾಮ ಮಂದಿರ ದೇಣಿಗೆ ಲೂಟಿ ನಡೆದಿರುವುದು ಅತ್ಯಂತ ದುರದೃಷ್ಟಕರ ಎಂದು ಹೇಳಿತ್ತು. ಸಂಘದ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಅವರು ಸಹ ಈ ದೇಣಿಗೆ ಲೂಟಿಯ ನೆಪದಲ್ಲಿ ರಾಷ್ಟ್ರವಿರೋಧಿಗಳಿಂದ ಹಿಂದೂ ಧರ್ಮಕ್ಕೆ ಅವಹೇಳನ ಮಾಡುವ ವ್ಯವಸ್ಥಿತ ಪ್ರಯತ್ನ ನಡೆದಿದೆ ಎಂದು ಆಕ್ರೋಶ ಹೊರಹಾಕಿದ್ದರು.

ಈ ಎಲ್ಲಾ ಬೆಳವಣಿಗೆಗಳ ಬೆನ್ನಲ್ಲೇ ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಸರ್ಕಾರವು ಪ್ರಕರಣದ ಕುರಿತು ವಿಶೇಷ ತನಿಖಾ ತಂಡದಿಂದ (SIT) ಅತ್ಯಂತ ನಿಷ್ಪಕ್ಷಪಾತ ತನಿಖೆ ನಡೆಸುತ್ತಿದೆ. ತನಿಖೆಯಲ್ಲಿ ಯಾರೇ ತಪ್ಪಿತಸ್ಥರು ಎಂದು ಸಾಬೀತಾದರೂ ಅವರಿಗೆ ಕಾನೂನಿನಡಿ ಕಠಿಣ ಶಿಕ್ಷೆ ಆಗುವುದು ಖಚಿತ. ಆದರೆ, ಇದನ್ನೇ ನೆಪವಾಗಿಟ್ಟುಕೊಂಡು ಹಿಂದೂ ವಿರೋಧಿಗಳು ಪ್ರಭು ಶ್ರೀರಾಮನಿಗೆ ಅಪಮಾನ ಮಾಡಲು ಹೊರಟರೆ ಅದನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ನಿತಿನ್ ನಬಿನ್ ಗುಡುಗಿದ್ದಾರೆ. ರಾಮ ಮಂದಿರ ದೇಣಿಗೆ ಕಳ್ಳತನದ ವಿಚಾರವಾಗಿ ದೇಶಾದ್ಯಂತ ರಾಜಕೀಯ ವಾಕ್ಸಮರ ತಾರಕಕ್ಕೇರಿದ್ದು, ಎಸ್‌ಐಟಿ ತನಿಖೆಯ ವರದಿ ಬಂದ ಬಳಿಕವಷ್ಟೇ ಅಸಲಿ ಸತ್ಯ ಏನೆಂಬುದು ಹೊರಬರಬೇಕಿದೆ.

Dailyhunt
Disclaimer: This content has not been generated, created or edited by Dailyhunt. Publisher: Navasamaja