Dailyhunt Logo
  • Light mode
    Follow system
    Dark mode
    • Play Story
    • App Story
RAM MANDIR: ರಾಮಮಂದಿರದ 5 ಕೋಟಿ ಮೌಲ್ಯದ ಚಿನ್ನ ಲೇಪಿತ ʻರಾಮಚರಿತಮಾನಸʼ ಪುಸ್ತಕ ನಾಪತ್ತೆ!

RAM MANDIR: ರಾಮಮಂದಿರದ 5 ಕೋಟಿ ಮೌಲ್ಯದ ಚಿನ್ನ ಲೇಪಿತ ʻರಾಮಚರಿತಮಾನಸʼ ಪುಸ್ತಕ ನಾಪತ್ತೆ!

Navasamaja.com 1 week ago

ಯೋಧ್ಯೆ: ದೇಶಾದ್ಯಂತ ತೀವ್ರ ಸಂಚಲನ ಸೃಷ್ಟಿಸಿರುವ ರಾಮಮಂದಿರ ದೇಣಿಗೆ ಲೂಟಿ ಹಗರಣದ (Ram Mandir Donation Row) ಬೆನ್ನಲ್ಲೇ, ಈಗ ಬಾಲರಾಮನಿಗೆ ಅರ್ಪಿಸಲಾಗಿದ್ದ ಕೋಟ್ಯಂತರ ರೂಪಾಯಿ ಮೌಲ್ಯದ ಅಪರೂಪದ ಉಡುಗೊರೆಯೊಂದು ನಾಪತ್ತೆಯಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.

ರಾಮನಿಗೆ ಸಲ್ಲಿಕೆಯಾದ ದೇಣಿಗೆ ಹಣದ ದುರುಪಯೋಗದ ವಿರುದ್ಧ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದ್ದು, ಆರೋಪಿಗಳ ಮನೆಗಳನ್ನು ಬುಲ್ಡೋಜರ್ ಮೂಲಕ ನೆಲಸಮ ಮಾಡಬೇಕು ಎಂಬ ಆಗ್ರಹಗಳು ಕೇಳಿಬರುತ್ತಿರುವ ಬೆನ್ನಲ್ಲೇ ಈ ಹೊಸ ವಿವಾದ ಮುನ್ನೆಲೆಗೆ ಬಂದಿದೆ. ಮಾಜಿ ಕೇಂದ್ರ ಗೃಹ ಕಾರ್ಯದರ್ಶಿ ಎಸ್. ಲಕ್ಷ್ಮಿನಾರಾಯಣ್ (S Laxmi Narayan) ಅವರ ಕುಟುಂಬವು ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ಗೆ ನೀಡಿದ್ದ, ಬರೋಬ್ಬರಿ 5 ಕೋಟಿ ರೂ. ಮೌಲ್ಯದ ಚಿನ್ನದ ಲೇಪಿತ ʻರಾಮಚರಿತಮಾನಸʼ (Ramcharitmanas) ಪುಸ್ತಕ ಈಗ ಕಾಣೆಯಾಗಿದೆ ಎಂದು ಆರೋಪಿಸಲಾಗಿದೆ.

ಈ ಕುರಿತು ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿರುವ ಎಸ್. ಲಕ್ಷ್ಮಿನಾರಾಯಣ್ ಅವರು ಟ್ರಸ್ಟ್‌ನ ನಡೆಗೆ ತೀವ್ರ ಅಸಮಾಧಾನ ಹೊರಹಾಕಿದ್ದಾರೆ. 2024ರ ಏಪ್ರಿಲ್‌ನಲ್ಲಿ ನಾನು ನನ್ನ ಪತ್ನಿ ಸರಸ್ವತಿ ಜೊತೆಗೆ ಅಯೋಧ್ಯೆಗೆ ಭೇಟಿ ನೀಡಿದ್ದೆ. ಆ ಸಂದರ್ಭದಲ್ಲಿ ರಾಮ ಮಂದಿರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಅವರಿಗೆ ಚಿನ್ನಲೇಪಿತ ರಾಮಚರಿತಮಾನಸ ಪುಸ್ತಕವನ್ನು ಹಸ್ತಾಂತರಿಸಿದ್ದೆವು. ಅದನ್ನು ರಾಮ ಮಂದಿರದ ಗರ್ಭಗುಡಿಯಲ್ಲಿ ಇಡಲಾಗುವುದು ಎಂದು ಅವರು ಹೇಳಿದ್ದರು. ಆದರೆ, ಆ ಸಮಯದಲ್ಲಿ ನಮಗೆ ಯಾವುದೇ ಅಧಿಕೃತ ರಶೀದಿ ನೀಡಲಿಲ್ಲ ಎಂದು ಅವರು ತಿಳಿಸಿದ್ದಾರೆ.

ನನ್ನ ದಿವಂಗತ ತಾಯಿಯ ನೆನಪಿನಲ್ಲಿ ಇದನ್ನು ಶ್ರೀರಾಮನಿಗೆ ಕಾಣಿಕೆಯಾಗಿ ನೀಡಿದ್ದೆ. ಏಕೆಂದರೆ ನನ್ನ ತಾಯಿ ತಮ್ಮ ಜೀವನದ 15 ರಿಂದ 18 ವರ್ಷಗಳ ಕಾಲ ನಿರಂತರವಾಗಿ ರಾಮನಾಮ ಬರೆಯುತ್ತಾ ಕಳೆದಿದ್ದರು. ನಮ್ಮ ಕುಟುಂಬ ಕೂಡ ಹಲವು ದಶಕಗಳಿಂದ ರಾಮಜನ್ಮಭೂಮಿ ಚಳವಳಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದೆ ಎಂದು ಲಕ್ಷ್ಮಿನಾರಾಯಣ್ ಅವರು ಭಾವುಕರಾಗಿ ನುಡಿದಿದ್ದಾರೆ.

ಕಾಣಿಕೆ ನೀಡಿದ ಪುಸ್ತಕದ ರಶೀದಿಗಾಗಿ ಅವರು ದೀರ್ಘಕಾಲದ ಬಳಿಕ ಚಂಪತ್ ರಾಯ್ ಅವರನ್ನು ಎರಡು ಬಾರಿ ಭೇಟಿಯಾಗಿದ್ದರು. ಮೊದಲ ಬಾರಿ ಭೇಟಿಯಾದಾಗ 9 ಗಂಟೆ ಹಾಗೂ ಎರಡನೇ ಬಾರಿ ಭೇಟಿಯಾದಾಗ 4 ಗಂಟೆಗಳ ಕಾಲ ಸುದೀರ್ಘವಾಗಿ ಕಾಯಿಸಿದರೂ ಟ್ರಸ್ಟ್‌ನಿಂದ ರಶೀದಿ ಮಾತ್ರ ಸಿಗಲಿಲ್ಲ. ಈ ವಿಷಯವನ್ನು ಆರ್‌ಎಸ್‌ಎಸ್ (RSS) ಮುಖ್ಯಸ್ಥ ಡಾ. ಮೋಹನ್ ಭಾಗವತ್ ಅವರ ಗಮನಕ್ಕೆ ತಂದು ಮನವಿ ಮಾಡಿದ ಹೊರತಾಗಿಯೂ ರಶೀದಿ ನೀಡಲು ನಿರಾಕರಿಸಲಾಗಿದೆ ಎಂದು ಲಕ್ಷ್ಮಿನಾರಾಯಣ್ ಗಂಭೀರವಾಗಿ ಆರೋಪಿಸಿದ್ದಾರೆ.

ಚಿನ್ನದ ಪುಸ್ತಕದ ವಿಶೇಷತೆ?
ನಾಪತ್ತೆಯಾಗಿದೆ ಎನ್ನಲಾದ ಈ ಅಪರೂಪದ ರಾಮಚರಿತಮಾನಸ ಪುಸ್ತಕ ಒಟ್ಟು 147 ಕೆಜಿ ತೂಕ ಹೊಂದಿದ್ದು, ಇದರ ಎಲ್ಲಾ 522 ಪುಟಗಳಿಗೂ ಚಿನ್ನದ ಲೇಪನ ಮಾಡಲಾಗಿದೆ.ಅತ್ಯಂತ ಕಲಾತ್ಮಕವಾಗಿ ಸಿದ್ಧಗೊಂಡಿರುವ ಈ ಪುಸ್ತಕದ ಅಂದಾಜು ಮೌಲ್ಯ ಸರಿಸುಮಾರು 4 ರಿಂದ 5 ಕೋಟಿ ರೂಪಾಯಿಗಳು. ಭಕ್ತರು ಅತ್ಯಂತ ಶ್ರದ್ಧೆ ಹಾಗೂ ಭಾವನಾತ್ಮಕವಾಗಿ ನೀಡಿದ ಕಾಣಿಕೆಗಳಿಗೇ ರಶೀದಿ ಸಿಗುತ್ತಿಲ್ಲ ಮತ್ತು ಅವುಗಳ ರಕ್ಷಣೆ ಬಗ್ಗೆಯೇ ಗೊಂದಲ ಸೃಷ್ಟಿಯಾಗಿರುವುದು ಈಗ ರಾಮಭಕ್ತರ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.

Dailyhunt
Disclaimer: This content has not been generated, created or edited by Dailyhunt. Publisher: Navasamaja