ಮುಂಬೈ: ರಣ್ಬೀರ್ ಕಪೂರ್, ರಾಕಿಂಗ್ ಸ್ಟಾರ್ ಯಶ್ ಹಾಗೂ ಸಾಯಿ ಪಲ್ಲವಿ ನಟನೆಯ, ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಅತಿ ದೊಡ್ಡ ಬಜೆಟ್‌ನಲ್ಲಿ ಮೂಡಿಬರುತ್ತಿರುವ 'ರಾಮಾಯಣ' (Ramayana) ಸಿನಿಮಾ ಬಿಡುಗಡೆಗೆ ದಿನಗಣನೆ ಆರಂಭವಾಗಿದೆ. ಆದರೆ, ಸಿನಿಮಾ ತೆರೆಗೆ ಬರಲು ಕೆಲವೇ ತಿಂಗಳು ಬಾಕಿ ಇರುವಾಗಲೇ ಚಿತ್ರದ ನಿರ್ಮಾಪಕರಿಗೆ ವಿತರಣೆಯ ದೊಡ್ಡ ತಲೆನೋವು ಶುರುವಾಗಿದೆ.
ಚಿತ್ರದ ಥಿಯೇಟರ್ ಹಕ್ಕುಗಳನ್ನು ಖರೀದಿಸಲು ದೇಶದ ಪ್ರಮುಖ ವಿತರಕರು ಮುಂದೆ ಬರುತ್ತಿಲ್ಲ ಎಂಬ ಸುದ್ದಿ ಈಗ ಗಾಂಧಿನಗರದಿಂದ ಬಾಲಿವುಡ್‌ವರೆಗೆ ಭಾರಿ ಚರ್ಚೆಗೆ ಗ್ರಾಸವಾಗಿದೆ. ಯೋಜನೆಯ ಪ್ರಕಾರ, 'ರಾಮಾಯಣ' ಚಿತ್ರದ ಮೊದಲ ಭಾಗವು ಈ ವರ್ಷದ ದೀಪಾವಳಿ ಹಬ್ಬದ ಉಡುಗೊರೆಯಾಗಿ ನವೆಂಬರ್ 6 ರಂದು ವಿಶ್ವದಾದ್ಯಂತ ಬಿಡುಗಡೆಯಾಗಬೇಕಿದೆ. 500 ಕೋಟಿಯ ಆಸೆಗೆ ಬಿದ್ದಿದ್ದು 250 ಕೋಟಿಯ ಆಫರ್! ನಿರ್ಮಾಪಕ ನಮಿತ್ ಮಲ್ಹೋತ್ರಾ ಅವರ ಪ್ರಕಾರ, ಈ ಚಿತ್ರದ ಎರಡು ಭಾಗಗಳನ್ನು ಬರೋಬ್ಬರಿ 4,000 ಕೋಟಿ ರೂಪಾಯಿಗಳ ಭಾರಿ ಬಜೆಟ್‌ನಲ್ಲಿ ನಿರ್ಮಿಸಲಾಗುತ್ತಿದೆ. ಇಷ್ಟು ಬೃಹತ್ ಚಿತ್ರದ ಹಕ್ಕುಗಳಿಗೆ ಇಷ್ಟು ಕಡಿಮೆ ಮೊತ್ತದ ಆಫರ್ ಬಂದಿರುವುದು ಇಡೀ ಚಿತ್ರತಂಡಕ್ಕೆ ಶಾಕ್ ನೀಡಿದೆ. ಚಿತ್ರದ ಬಗ್ಗೆ ಸದ್ಯಕ್ಕೆ ಮಾರುಕಟ್ಟೆಯಲ್ಲಿ ನಿರೀಕ್ಷಿತ ಮಟ್ಟದ ಹೈಪ್ ಕ್ರಿಯೇಟ್ ಆಗದೇ ಇರುವುದೇ ಇದಕ್ಕೆ ಪ್ರಮುಖ ಕಾರಣ ಎನ್ನಲಾಗುತ್ತಿದೆ. ವಿತರಕರನ್ನು ಕಾಡುತ್ತಿದೆಯೇ 'ಆದಿಪುರುಷ್' ಶಾಪ? ಈ ಹಿಂದೆ ಪ್ರಭಾಸ್ ನಟನೆಯ 'ಆದಿಪುರುಷ್' ಸಿನಿಮಾ ಕೂಡ ಇದೇ ಹಾದಿ ಹಿಡಿದಿತ್ತು. ರಾಮಾಯಣ ಆಧಾರಿತ ಆ ಚಿತ್ರದ ಸಂಭಾಷಣೆ ಮತ್ತು ಪಾತ್ರಗಳ ಚಿತ್ರಣಕ್ಕೆ ದೇಶಾದ್ಯಂತ ಭಾರಿ ಆಕ್ರೋಶ ವ್ಯಕ್ತವಾಗಿತ್ತು. ನ್ಯಾಯಾಲಯದಿಂದಲೂ ಛೀಮಾರಿ ಹಾಕಿಸಿಕೊಂಡಿದ್ದ ಆ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಹೀನಾಯವಾಗಿ ಸೋತಿತ್ತು. ಆ ಕಹಿ ನೆನಪು ಮತ್ತು ನಷ್ಟದ ಭಯ ಈಗ ದೊಡ್ಡ ದೊಡ್ಡ ವಿತರಕರನ್ನು ಕಾಡುತ್ತಿದ್ದು, 'ರಾಮಾಯಣ'ದ ಹಕ್ಕುಗಳನ್ನು ಖರೀದಿಸಲು ಅವರು ಹಿಂದೇಟು ಹಾಕುತ್ತಿದ್ದಾರೆ. ನಿತೇಶ್ ತಿವಾರಿ ನಿರ್ದೇಶನದ ಈ ದೃಶ್ಯ ವೈಭವದಲ್ಲಿ ರಣ್ಬೀರ್ ಕಪೂರ್ ಶ್ರೀರಾಮನಾಗಿ ಕಾಣಿಸಿಕೊಂಡರೆ, ಸ್ಯಾಂಡಲ್‌ವುಡ್ ಸ್ಟಾರ್ ಯಶ್ ಲಂಕಾಧಿಪತಿ ರಾವಣನ ಪಾತ್ರದಲ್ಲಿ ಅಬ್ಬರಿಸಲಿದ್ದಾರೆ. ಸೀತೆಯಾಗಿ ಸಾಯಿ ಪಲ್ಲವಿ ನಟಿಸಿದ್ದು, ಉಳಿದಂತೆ ಸನ್ನಿ ಡಿಯೋಲ್ ಹಾಗೂ ಕಾಜಲ್ ಅಗರ್ವಾಲ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ನಮಿತ್ ಮಲ್ಹೋತ್ರಾ ಅವರೊಂದಿಗೆ ನಟ ಯಶ್ ಕೂಡ ಈ ಚಿತ್ರಕ್ಕೆ ಜಂಟಿಯಾಗಿ ಬಂಡವಾಳ ಹೂಡಿದ್ದಾರೆ. ಇನ್ನುಳಿದಂತೆ ಆಸ್ಕರ್ ವಿಜೇತರಾದ ಎ.ಆರ್. ರೆಹಮಾನ್ ಮತ್ತು ಹಾನ್ಸ್ ಜೀಮರ್ ಅವರ ಜುಗಲ್‌ಬಂದಿಯಲ್ಲಿ ಸಿನಿಮಾದ ಸಂಗೀತ ಮೂಡಿಬರುತ್ತಿದೆ. ಇಷ್ಟೆಲ್ಲಾ ಸ್ಟಾರ್ ಬಲವಿದ್ದರೂ ವಿತರಕರ ಈ ನಿರಾಸಕ್ತಿ ಚಿತ್ರವನ್ನು ಯಾವ ತಿರುವಿಗೆ ಕೊಂಡೊಯ್ಯಲಿದೆ ಎಂಬುದನ್ನು ಕಾದು ನೋಡಬೇಕಿದೆ.
ಇತ್ತೀಚೆಗೆ ಚಿತ್ರದ ನಿರ್ಮಾಪಕರು ದೇಶದ ಕೆಲವು ಪ್ರಮುಖ ಕಾರ್ಪೊರೇಟ್ ಕಂಪನಿಗಳು ಮತ್ತು ವಿತರಣಾ ಸಂಸ್ಥೆಗಳಿಗೆ ಸಿನಿಮಾದ ಕೆಲವು ವಿಶೇಷ ದೃಶ್ಯಗಳನ್ನು ಪ್ರದರ್ಶಿಸಿದ್ದರು. ಈ ವೇಳೆ ಚಿತ್ರದ ಥಿಯೇಟರ್ ಹಕ್ಕುಗಳನ್ನು ಸುಮಾರು 500 ಕೋಟಿ ರೂಪಾಯಿಗೆ ಹರಾಜು ಮಾಡಲು ನಿರ್ಮಾಪಕರು ಯೋಜನೆ ಹಾಕಿಕೊಂಡಿದ್ದರು. ಆದರೆ, ದೃಶ್ಯಗಳನ್ನು ನೋಡಿದ ಪ್ರಮುಖ ಸಂಸ್ಥೆಯೊಂದು ಕೇವಲ 250 ಕೋಟಿ ರೂಪಾಯಿಗಳ ಆಫರ್ ನೀಡಿದೆ ಎನ್ನಲಾಗಿದೆ.
ರಾಮಾಯಣದಂತಹ ಪವಿತ್ರ ಕಾವ್ಯವನ್ನು ಸಿನಿಮಾ ರೂಪಕ್ಕೆ ತಂದಾಗ ಭಾರತೀಯ ಪ್ರೇಕ್ಷಕರು ಅತ್ಯಂತ ಸೂಕ್ಷ್ಮವಾಗಿ ವಿಮರ್ಶಿಸುತ್ತಾರೆ. ಸ್ವಲ್ಪ ಎಚ್ಚರ ತಪ್ಪಿ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾದರೂ ಇಡೀ ದೇಶಾದ್ಯಂತ ಸಿನಿಮಾ ನಿಷೇಧಕ್ಕೊಳಗಾಗುವ ಅಪಾಯವಿರುತ್ತದೆ.

