ಮುಂಬೈ: ನಿತೀಶ್ ತಿವಾರಿ ನಿರ್ದೇಶನದ ಬಹುನಿರೀಕ್ಷಿತ 'ರಾಮಾಯಣ' (Ramayana) ಚಿತ್ರದ ಟೀಸರ್ ಬಿಡುಗಡೆಯಾಗಿ ಎಲ್ಲರಿಂದ ಮೆಚ್ಚುಗೆ ಪಡೆದುಕೊಂಡಿದೆ. ಇದೀಗ ಈ ಸಿನಿಮಾದ ಬಗ್ಗೆ ಕೆಲ ವಿಚಾರಗಳು ಬಹಿರಂಗವಾಗಿದೆ.
4,000 ಕೋಟಿ ಬಜೆಟ್ ಸಿನಿಮಾ
ರಾಮಾಯಣ ಸಿನಿಮಾದ ಕಡೆ ಎಲ್ಲರ ದೃಷ್ಟಿ ಇದೆ. ಹನುಮ ಜಯಂತಿಯಂದು ಸಿನಿಮಾದ ಟೀಸರ್ ರಿಲೀಸ್ ಆಗಿ ಅದ್ಭುತವಾದ ರೆಸ್ಪಾನ್ಸ್ ಸಹ ಪಡೆದುಕೊಂಡಿದೆ. ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಅತ್ಯಂತ ಅದ್ದೂರಿ ಎನ್ನಲಾದ ಈ ಚಿತ್ರ ಸುಮಾರು 4,000 ಕೋಟಿ ರೂಪಾಯಿಗಳ ಬೃಹತ್ ಬಜೆಟ್‌ನಲ್ಲಿ ಸಿದ್ಧವಾಗುತ್ತಿದೆ. ಇದೀಗ ಚಿತ್ರದ ಪ್ರಮುಖ ನಟರು ಪಡೆದಿರುವ ಸಂಭಾವನೆಯ ವಿವರಗಳು ಹೊರಬಿದ್ದಿದ್ದು, ಎಲ್ಲರ ಹುಬ್ಬೇರಿಸುವಂತಿವೆ. ವರದಿಗಳ ಪ್ರಕಾರ, ರಾಮನ ಪಾತ್ರಧಾರಿ ರಣಬೀರ್ ಕಪೂರ್ ಪ್ರತಿ ಭಾಗಕ್ಕೆ 75 ಕೋಟಿ ರೂಪಾಯಿಯಂತೆ ಒಟ್ಟು 150 ಕೋಟಿ ರೂ. ಸಂಭಾವನೆ ಪಡೆಯುತ್ತಿದ್ದಾರೆ. ಇದು ಅವರ ಹಿಂದಿನ ಸೂಪರ್ ಹಿಟ್ ಚಿತ್ರಗಳಾದ 'ಅನಿಮಲ್' (35 ಕೋಟಿ ರೂ.) ಮತ್ತು 'ಬ್ರಹ್ಮಾಸ್ತ್ರ' (30 ಕೋಟಿ ರೂ.) ಚಿತ್ರಗಳಿಗಿಂತಲೂ ದುಪ್ಪಟ್ಟು ಮೊತ್ತವಾಗಿದೆ. ವಿಶೇಷವೆಂದರೆ, ಲಂಕೇಶನ ಪಾತ್ರದಲ್ಲಿ ನಟಿಸುತ್ತಿರುವ ಕನ್ನಡಿಗರ ನೆಚ್ಚಿನ ಯಶ್ ಪ್ರತಿ ಭಾಗಕ್ಕೆ 50 ಕೋಟಿ ರೂ.ನಂತೆ ಒಟ್ಟು 100 ಕೋಟಿ ರೂ. ಸಂಭಾವನೆ ಪಡೆಯುತ್ತಿದ್ದಾರೆ ಎನ್ನಲಾಗಿದೆ. ಸಾಯಿ ಪಲ್ಲವಿ ಮತ್ತು ಇತರ ನಟರ ಗಳಿಕೆ ಸೀತೆಯ ಪಾತ್ರದಲ್ಲಿ ನಟಿಸುತ್ತಿರುವ ಸಾಯಿ ಪಲ್ಲವಿ ಅವರು ದಕ್ಷಿಣ ಭಾರತದ ಸಿನಿಮಾಗಳಿಗೆ ಹೋಲಿಸಿದರೆ ಈ ಚಿತ್ರಕ್ಕಾಗಿ ತಮ್ಮ ಸಂಭಾವನೆಯನ್ನು ಗಣನೀಯವಾಗಿ ಹೆಚ್ಚಿಸಿಕೊಂಡಿದ್ದಾರೆ. ಪ್ರತಿ ಭಾಗಕ್ಕೆ 6 ಕೋಟಿ ರೂಪಾಯಿಯಂತೆ ಅವರು ಒಟ್ಟು 12 ಕೋಟಿ ರೂ. ಪಡೆಯುತ್ತಿದ್ದಾರೆ. ಇನ್ನು ಹನುಮಂತನ ಪಾತ್ರದಲ್ಲಿ ಮಿಂಚಲಿರುವ ಸನ್ನಿ ಡಿಯೋಲ್ 40 ಕೋಟಿ ರೂ. ಹಾಗೂ ಲಕ್ಷ್ಮಣನ ಪಾತ್ರಕ್ಕೆ ಟಿವಿ ತಾರೆ ರವಿ ದುಬೆ 4 ಕೋಟಿ ರೂ. ಸಂಭಾವನೆ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ. ಯಾವಾಗ ಬರಲಿದೆ ರಾಮಾಯಣ?
ಈ ಸಿನಿಮಾ ಎರಡು ಭಾಗಗಳಲ್ಲಿ ಮೂಡಿಬರಲಿದ್ದು, ಮೊದಲ ಭಾಗವು 2026ರ ಅಕ್ಟೋಬರ್‌ನಲ್ಲಿ ದೀಪಾವಳಿ ಹಬ್ಬದ ಸಮಯದಲ್ಲಿ ವಿಶ್ವಾದ್ಯಂತ ತೆರೆಗೆ ಬರಲಿದೆ. ಎರಡನೇ ಭಾಗವು 2027ರ ದೀಪಾವಳಿಗೆ ಬಿಡುಗಡೆಯಾಗಲಿದೆ. ಎ.ಆರ್. ರೆಹಮಾನ್ ಮತ್ತು ಆಸ್ಕರ್ ವಿಜೇತ ಹ್ಯಾನ್ಸ್ ಜಿಮ್ಮರ್ ಅವರ ಸಂಗೀತ ಸಂಯೋಜನೆ ಈ ಚಿತ್ರಕ್ಕೆ ಮತ್ತಷ್ಟು ಮೆರುಗು ನೀಡಲಿದೆ. ಈ ದೊಡ್ಡ ಸಿನಿಮಾದಲ್ಲಿ ಯಶ್ ಕೇವಲ ನಟನಾಗಿ ಮಾತ್ರವಲ್ಲದೆ ಸಹ-ನಿರ್ಮಾಪಕರಾಗಿಯೂ ತೊಡಗಿಸಿಕೊಂಡಿರುವುದು ಚಿತ್ರದ ಮೇಲಿನ ನಿರೀಕ್ಷೆಯನ್ನು ಹೆಚ್ಚು ಮಾಡಿದೆ.

