ಮುಂಬೈ: ಖ್ಯಾತ ನಿರ್ದೇಶಕ ನಿತೇಶ್ ತಿವಾರಿ ನಿರ್ದೇಶನದ, ಭಾರತೀಯ ಚಿತ್ರರಂಗದ ಅತ್ಯಂತ ಪ್ರತಿಷ್ಠಿತ ಹಾಗೂ ಬಹುನಿರೀಕ್ಷಿತ ಸಿನಿಮಾಗಳಲ್ಲೊಂದಾದ 'ರಾಮಾಯಣ' (Ramayana) ಚಿತ್ರದ ಟ್ರೈಲರ್ ಜುಲೈ 30ರಂದು ಅದ್ಧೂರಿಯಾಗಿ ಬಿಡುಗಡೆಯಾಗಿದೆ. ಟ್ರೈಲರ್ ರಿಲೀಸ್ ಆದಾಗಿನಿಂದಲೂ ಇಂಟರ್ನೆಟ್‌ನಲ್ಲಿ ಈ ಚಿತ್ರದ್ದೇ ಸದ್ದು ಕೇಳಿಬರುತ್ತಿದೆ.
ಕೇವಲ ಭಾರತೀಯ ಪ್ರೇಕ್ಷಕರು ಮಾತ್ರವಲ್ಲದೆ, ನೆರೆಯ ಪಾಕಿಸ್ತಾನದ ವೀಕ್ಷಕರು ಹಾಗೂ ಯುಟ್ಯೂಬರ್‌ಗಳು ಕೂಡ ಈ ಸಿನಿಮಾದ ದೃಶ್ಯಾವಳಿಗಳನ್ನು ಕಂಡು ಸಂಪೂರ್ಣ ನಿಬ್ಬೆರಗಾಗಿದ್ದಾರೆ. ಸಿನಿಮಾದ ವಿಎಫ್‌ಎಕ್ಸ್ ಹೊಗಳಿದ ಪಾಕಿಸ್ತಾನಿ ಯುಟ್ಯೂಬರ್ ಪಾಕಿಸ್ತಾನದ ಮತ್ತೊಬ್ಬ ಯುಟ್ಯೂಬರ್ ಹಸ್ನಾತ್ ಖಾನ್ ಕೂಡ ಟ್ರೈಲರ್‌ನ ಸಾಹಸ ದೃಶ್ಯಗಳು ಹಾಗೂ ಗ್ರಾಫಿಕ್ಸ್ ಕೆಲಸಗಳನ್ನು ನೋಡಿ "ವಾವ್" ಎಂದು ಉದ್ಗರಿಸಿದ್ದಾರೆ. ರಾವಣನ ಪಾತ್ರ ಸಖತ್ ಕ್ರೇಜಿಯಾಗಿದೆ ಎಂದು ಅವರು ಹೊಗಳಿದ್ದಾರೆ. 'ಪಾಕಿಸ್ತಾನಿ ರಿಯಾಕ್ಷನ್ ಬಾಯ್' ಮತ್ತು 'ಇಮಾನ್ ಮೋಝಮ್ ಎಂಟರ್ಟೈನ್‌ಮೆಂಟ್' ಎಂಬ ಯುಟ್ಯೂಬ್ ಚಾನೆಲ್‌ಗಳು ಕೂಡ ಚಿತ್ರದ ತಾರಾಗಣವನ್ನು ಮುಕ್ತಕಂಠದಿಂದ ಶ್ಲಾಘಿಸಿವೆ. ಸೀತೆಯ ಪಾತ್ರದಲ್ಲಿ ಸಾಯಿ ಪಲ್ಲವಿ ಅವರ ಸಾಂಪ್ರದಾಯಿಕ ಲುಕ್ ಮತ್ತು ಸರಳತೆ ಅತ್ಯಂತ ದೈವಿಕವಾಗಿ ಮೂಡಿಬಂದಿದೆ. ಹಿನ್ನೆಲೆ ಸಂಗೀತ ಮತ್ತು ವಿಎಫ್‌ಎಕ್ಸ್ ಗುಣಮಟ್ಟ ಅತ್ಯುತ್ತಮವಾಗಿದೆ ಎಂದು ಗಡಿಯಾಚೆಯ ಸಿನಿಪ್ರೇಕ್ಷಕರು ಅಭಿಪ್ರಾಯಪಟ್ಟಿದ್ದಾರೆ. ಸಖತ್ ಸದ್ದು ಮಾಡುತ್ತಿದೆ ಟ್ರೈಲರ್ ಈ ದೃಶ್ಯಕಾವ್ಯದಲ್ಲಿ ಬಾಲಿವುಡ್ ನಟ ಸನ್ನಿ ಡಿಯೋಲ್ ಹನುಮಂತನಾಗಿ ನಟಿಸುತ್ತಿದ್ದು, ರಾಕುಲ್ ಪ್ರೀತ್ ಸಿಂಗ್, ಅನುಪಮ್ ಖೇರ್ ಮತ್ತು ವಿವೇಕ್ ಒಬೆರಾಯ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ವಿಶೇಷವೆಂದರೆ ನಟ ರಣಬೀರ್ ಕಪೂರ್ ಇಲ್ಲಿ ಶ್ರೀರಾಮ ಮತ್ತು ಪರಶುರಾಮ ಹೀಗೆ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಎರಡು ಭಾಗಗಳಲ್ಲಿ ಬಿಡುಗಡೆಯಾಗಲಿರುವ ಈ ಸಿನಿಮಾ ಸುಮಾರು 4000 ಕೋಟಿ ರೂ. ವೆಚ್ಚದಲ್ಲಿ ತಯಾರಾಗುತ್ತಿದ್ದು, ಭಾರತೀಯ ಚಿತ್ರರಂಗದ ಅತ್ಯಂತ ದುಬಾರಿ ಸಿನಿಮಾ ಎನಿಸಿಕೊಂಡಿದೆ. ಚಿತ್ರದ ಮೊದಲ ಭಾಗವು 2026ರ ದೀಪಾವಳಿ ಹಬ್ಬದ ವಿಶೇಷವಾಗಿ ಚಿತ್ರಮಂದಿರಗಳಲ್ಲಿ ಜಗತ್ತಿನಾದ್ಯಂತ ತೆರೆಕಾಣಲು ಸಜ್ಜಾಗಿದೆ.
ಪಾಕಿಸ್ತಾನದ ಪ್ರಸಿದ್ಧ ಕಂಟೆಂಟ್ ಕ್ರಿಯೇಟರ್ ಮತ್ತು ಯುಟ್ಯೂಬರ್ ಮಾವಿಯಾ ಉಮರ್ ಫಾರೂಕಿ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಟ್ರೈಲರ್ ರಿಯಾಕ್ಷನ್ ವಿಡಿಯೋ ಹಂಚಿಕೊಂಡಿದ್ದು, ಬಾಲಿವುಡ್‌ನ ಈ ದೈತ್ಯ ಬಜೆಟ್ ನೋಡಿ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಭಾರತ ಮತ್ತು ಬಾಲಿವುಡ್ ಬಳಿ ಇಷ್ಟೊಂದು ಹಣ ಎಲ್ಲಿಂದ ಬರುತ್ತದೆ ಎಂದು ಪ್ರಶ್ನಿಸಿರುವ ಅವರು, ಸಾವಿರಾರು ಕೋಟಿ ಬಜೆಟ್‌ನಲ್ಲಿ ಹಾಲಿವುಡ್ ತಂತ್ರಜ್ಞರ ಸಹಾಯದೊಂದಿಗೆ ಮೂಡಿಬಂದಿರುವ ಈ ಸಿನಿಮಾದ ವಿಎಫ್‌ಎಕ್ಸ್ ಮತ್ತು ಭವ್ಯತೆ ಅದ್ಭುತವಾಗಿದೆ ಎಂದಿದ್ದಾರೆ. ಹಿಂದೂ ಧರ್ಮದ ಇತಿಹಾಸ ಆಧಾರಿತ ಈ ಚಿತ್ರದ ಟ್ರೈಲರ್ ನೋಡಿ ಒಬ್ಬ ಪಾಕಿಸ್ತಾನಿಯಾಗಿ ತಮಗೂ ರೋಮಾಂಚನವಾಗಿದೆ ಎಂದು ಅವರು ಹೇಳಿದ್ದಾರೆ. ಅಲ್ಲದೆ, ನಟ ರಣಬೀರ್ ಕಪೂರ್ ಮತ್ತು ರಾಕಿಂಗ್ ಸ್ಟಾರ್ ಯಶ್ ಅವರ ಎಂಟ್ರಿ ಸೀನ್‌ಗಳನ್ನು ಕೊಂಡಾಡಿರುವ ಅವರು, ಇಬ್ಬರಲ್ಲಿ ಯಾರ ನಟನೆ ಉತ್ತಮವಾಗಿರಲಿದೆ ಎಂಬುದನ್ನು ನೋಡಲು ಕಾಯುತ್ತಿರುವುದಾಗಿ ತಿಳಿಸಿದ್ದಾರೆ. ಈ ನಡುವೆ ಕೆಲವು ನೆಟ್ಟಿಗರು ಕಮೆಂಟ್ ಮಾಡಿ, ಚಿತ್ರದ ಒಟ್ಟು ಬಜೆಟ್ 1000 ಕೋಟಿಯಲ್ಲ, ಬರೋಬ್ಬರಿ 4000 ಕೋಟಿ ರೂಪಾಯಿ ಎಂದು ಅವರಿಗೆ ನೆನಪಿಸಿದ್ದಾರೆ.
ಇನ್ನು ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸುತ್ತಿರುವ ಈ ಟ್ರೈಲರ್, ಲಂಕಾಧಿಪತಿ ರಾವಣನ (ಯಶ್) ಅರಮನೆಯ ಪ್ರವೇಶದ ದೃಶ್ಯದೊಂದಿಗೆ ಭರ್ಜರಿಯಾಗಿ ಆರಂಭವಾಗುತ್ತದೆ. ತದನಂತರ ಶ್ರೀರಾಮನಾಗಿ ರಣಬೀರ್ ಕಪೂರ್ ಮತ್ತು ಲಕ್ಷ್ಮಣನಾಗಿ ರವಿ ದುಬೆ ರಾಕ್ಷಸರ ಸಂಹಾರ ಮಾಡುವ ಸಾಹಸ ದೃಶ್ಯಗಳನ್ನು ತೋರಿಸಲಾಗಿದೆ. ಕೈಕೇಯಿಗೆ (ಲಾರಾ ದತ್ತಾ) ನೀಡಿದ ಮಾತಿನಂತೆ ಶ್ರೀರಾಮ 14 ವರ್ಷಗಳ ವನವಾಸಕ್ಕೆ ಹೊರಟಾಗ, ಪತ್ನಿ ಸೀತೆ (ಸಾಯಿ ಪಲ್ಲವಿ) ಕೂಡ ಜೊತೆಗೇ ಸಾಗುವ ಭಾವನಾತ್ಮಕ ದೃಶ್ಯಗಳು ಟ್ರೈಲರ್‌ನಲ್ಲಿವೆ. ಶ್ರೀರಾಮ ಮತ್ತು ರಾವಣನ ನಡುವಿನ ಮಹಾ ಯುದ್ಧದ ಝಲಕ್ ಇಲ್ಲಿದ್ದು, ಕುತೂಹಲದ ಸಂಗತಿಯೆಂದರೆ ಟ್ರೈಲರ್‌ನಲ್ಲಿ ಎಲ್ಲಿಯೂ ಹನುಮಂತನ ಪಾತ್ರವನ್ನು ರಿವೀಲ್ ಮಾಡಲಾಗಿಲ್ಲ.

