ನವದೆಹಲಿ: ಬಾಲಿವುಡ್ ನಟ ರಣವೀರ್ ಸಿಂಗ್ (Ranveer Singh) ಮತ್ತು ಚಲನಚಿತ್ರ ಕಾರ್ಮಿಕರ ಒಕ್ಕೂಟದ ನಡುವೆ ಇದ್ದ ಭಿನ್ನಾಭಿಪ್ರಾಯ ಸದ್ಯಕ್ಕೆ ತಣ್ಣಗಾಗುವ ಲಕ್ಷಣಗಳು ಕಾಣುತ್ತಿವೆ. 'ಡಾನ್ 3' ಸಿನಿಮಾದಿಂದ ರಣವೀರ್ ಸಿಂಗ್ ಹೊರಬಂದ ವಿಚಾರವಾಗಿ ಅವರ ವಿರುದ್ಧ ಬ್ಯಾನ್‌ಗೆ ಕರೆ ನೀಡಿದ್ದ 'ವೆಸ್ಟರ್ನ್ ಇಂಡಿಯಾ ಸಿನೆ ಎಂಪ್ಲಾಯೀಸ್ ಒಕ್ಕೂಟ' (FWICE), ಇದೀಗ ತನ್ನ ನಿರ್ಧಾರವನ್ನು ಅಧಿಕೃತವಾಗಿ ಹಿಂಪಡೆದಿದೆ.
ಹಳೆಯ ಆದೇಶ ರದ್ದು ಮಾಡಿದ FWICE ವಿವಿಧ ನಿರ್ಮಾಪಕರ ಸಂಘಟನೆಗಳ ಜೊತೆ ಈ ಕುರಿತು ಇನ್ನು ಕೂಡ ಮಾತುಕತೆಗಳು ನಡೆಯುತ್ತಿವೆ ಎಂದು ತಿಳಿಸಿರುವ ಒಕ್ಕೂಟ, ಸಮಸ್ಯೆ ನಿವಾರಣೆಗೆ ಕೈಜೋಡಿಸುವಂತೆ ನಟ ರಣವೀರ್ ಸಿಂಗ್ ಅವರಿಗೂ ಮನವಿ ಮಾಡಿದೆ. ರಣವೀರ್ ಸಿಂಗ್ ಅವರ ಸ್ಟಾರ್‌ಗಿರಿ ಹಾಗೂ ಜನಪ್ರಿಯತೆಯನ್ನು ನಾವು ಗೌರವಿಸುತ್ತೇವೆ. ಚಿತ್ರರಂಗದಲ್ಲಿ ಯಾರ ಮೇಲೆಯೂ ನಿಷೇಧ ಹೇರುವ ಅಧಿಕಾರ ನಮಗಿಲ್ಲ. ಆದ್ದರಿಂದ ರಣವೀರ್ ಅವರು ನಮ್ಮೊಂದಿಗೆ ಕುಳಿತು ಮಾತನಾಡಿ ಸಮಸ್ಯೆಗೆ ಸೂಕ್ತ ಪರಿಹಾರ ಕಂಡುಕೊಳ್ಳಲಿದ್ದಾರೆ ಎಂಬ ಭರವಸೆ ನಮಗಿದೆ ಎಂದು ಒಕ್ಕೂಟದ ಮುಖ್ಯ ಸಲಹೆಗಾರ ಅಶೋಕ್ ಪಂಡಿತ್ ತಿಳಿಸಿದ್ದಾರೆ. ಲೀಗಲ್ ನೋಟೀಸ್ ಕಳುಹಿಸಿದ್ದ ರಣವೀರ್
ಭಾರತೀಯ ಚಲನಚಿತ್ರ ನಿರ್ಮಾಪಕರ ಸಂಘದ (IMPPA) ಮಧ್ಯಸ್ಥಿಕೆ ಹಾಗೂ ಸರಣಿ ಮಾತುಕತೆಗಳ ನಂತರ ಈ ತೀರ್ಮಾನಕ್ಕೆ ಬರಲಾಗಿದೆ ಎಂದು ಒಕ್ಕೂಟವು ಜೂನ್ 3 ರಂದು ಪ್ರಕಟಣೆಯಲ್ಲಿ ತಿಳಿಸಿದೆ. ಚಿತ್ರರಂಗದ ಒಗ್ಗಟ್ಟು ಮತ್ತು ಶಾಂತಿಯನ್ನು ಕಾಪಾಡುವ ನಿಟ್ಟಿನಲ್ಲಿ ಈ ವಿವಾದವನ್ನು ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳುವುದು ಸೂಕ್ತ ಎಂದು ಒಕ್ಕೂಟದ ಪದಾಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ. ಚಿತ್ರರಂಗದ ಒಳಗಿನ ಭಿನ್ನಾಭಿಪ್ರಾಯಗಳನ್ನು ದೀರ್ಘಕಾಲದ ಸಂಘರ್ಷದ ಬದಲಿಗೆ ಪರಸ್ಪರ ಮಾತುಕತೆಯ ಮೂಲಕ ಪರಿಹರಿಸಿಕೊಳ್ಳಬೇಕು ಎಂದು ಒಕ್ಕೂಟ ಹೇಳಿದ್ದು, ರಣವೀರ್ ವಿರುದ್ಧದ ಅಸಹಕಾರ ಆದೇಶವನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ರದ್ದುಗೊಳಿಸಿದೆ.
ತಮ್ಮ ವಿರುದ್ಧ ಅಸಹಕಾರ ಆದೇಶ ಹೊರಡಿಸಿದ್ದನ್ನು ಪ್ರಶ್ನಿಸಿ ರಣವೀರ್ ಸಿಂಗ್ ಅವರು ಒಕ್ಕೂಟಕ್ಕೆ ಕಾನೂನು ನೋಟಿಸ್ ಕಳುಹಿಸಿದ ಬೆನ್ನಲ್ಲೇ ಈ ಮಹತ್ವದ ಬೆಳವಣಿಗೆ ನಡೆದಿದೆ. ರಣವೀರ್ ಕಳುಹಿಸಿರುವ ಲೀಗಲ್ ನೋಟಿಸ್ ತಮಗೆ ತಲುಪಿದ್ದು, ಅದಕ್ಕೆ ಕಾನೂನು ಚೌಕಟ್ಟಿನಲ್ಲೇ ಸೂಕ್ತ ಉತ್ತರ ನೀಡುವುದಾಗಿ ಒಕ್ಕೂಟ ಸ್ಪಷ್ಟಪಡಿಸಿದೆ. ಅಲ್ಲದೆ, ಈ ಬಿಕ್ಕಟ್ಟನ್ನು ನಿವಾರಿಸಲು ಶ್ರಮಿಸಿದ ನಿರ್ಮಾಪಕರ ಸಂಘಕ್ಕೆ (IMPPA) ಒಕ್ಕೂಟ ಧನ್ಯವಾದ ಅರ್ಪಿಸಿದ್ದು, ಚಿತ್ರರಂಗದ ಯಶಸ್ಸು ಪರಸ್ಪರ ಗೌರವ ಮತ್ತು ಒಗ್ಗಟ್ಟಿನ ಮೇಲೆ ನಿಂತಿದೆ ಎಂದು ನೆನಪಿಸಿದೆ. ನಿರ್ದೇಶಕ ಫರ್ಹಾನ್ ಅಖ್ತರ್ ಅವರ 'ಡಾನ್ 3' ಚಿತ್ರದಿಂದ ರಣವೀರ್ ಸಿಂಗ್ ಹಠಾತ್ ಹೊರನಡೆದಿದ್ದು ಚಿತ್ರರಂಗದಲ್ಲಿ ಭಾರಿ ಚರ್ಚೆಗೆ ಕಾರಣವಾಗಿತ್ತು, ಇದೀಗ ವಿವಾದ ತಿಳಿಯಾಗುವತ್ತ ಹೆಜ್ಜೆ ಇಟ್ಟಿದೆ.

