ಬೆಂಗಳೂರು: ನಗರದ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಚೆನ್ನೈ ಸೂಪರ್ ಕಿಂಗ್ಸ್ (CSK) ನಡುವಿನ ಹೈವೋಲ್ಟೇಜ್ ಐಪಿಎಲ್ (IPL) ಪಂದ್ಯದ ಹಿನ್ನೆಲೆಯಲ್ಲಿ ಬೆಂಗಳೂರು ಪೊಲೀಸರು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದ್ದಾರೆ.
ಬೆಂಗಳೂರು ಪೊಲೀಸ್ ಆಯುಕ್ತರಾದ ಸೀಮಂತ್ ಕುಮಾರ್ ಸಿಂಗ್ ಅವರು ಅಭಿಮಾನಿಗಳಿಗೆ ಮಹತ್ವದ ಸೂಚನೆಗಳನ್ನು ನೀಡಿದ್ದು, ಸುರಕ್ಷತೆಯ ದೃಷ್ಟಿಯಿಂದ ಹಲವು ಮಾರ್ಗಸೂಚಿಗಳನ್ನು ಪ್ರಕಟಿಸಿದ್ದಾರೆ. ಪೊಲೀಸ್ ಆಯುಕ್ತರ ಪ್ರಮುಖ ಸೂಚನೆಗಳು ಟಿಕೆಟ್ ಕಡ್ಡಾಯ: ಐಪಿಎಲ್ ಟಿಕೆಟ್ ಇಲ್ಲದವರು ಕ್ರೀಡಾಂಗಣದ ಬಳಿ ಬರುವಂತಿಲ್ಲ. ಒಂದು ವೇಳೆ ಟಿಕೆಟ್ ಇಲ್ಲದೆ ಅನಗತ್ಯವಾಗಿ ಗುಂಪು ಸೇರಿದರೆ ಅಂತಹವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಆಯುಕ್ತರು ಎಚ್ಚರಿಸಿದ್ದಾರೆ. ಕಳೆದ ಪಂದ್ಯದ ವೇಳೆ ಕ್ರೀಡಾಂಗಣದ ಸುತ್ತಮುತ್ತ ಹಲವು ಮೊಬೈಲ್ ಫೋನ್‌ಗಳು ಕಳ್ಳತನವಾಗಿದ್ದವು. ಈ ಸಂಬಂಧ ತನಿಖೆ ನಡೆಸಿರುವ ಪೊಲೀಸರು ಹೊರ ರಾಜ್ಯದ ತಂಡಗಳನ್ನು ಪತ್ತೆಹಚ್ಚಿ, ಈಗಾಗಲೇ 71 ಮೊಬೈಲ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಹೀಗಾಗಿ ಅಭಿಮಾನಿಗಳು ತಮ್ಮ ಬೆಲೆಬಾಳುವ ವಸ್ತುಗಳ ಬಗ್ಗೆ ಜಾಗರೂಕರಾಗಿರಲು ಸೂಚಿಸಲಾಗಿದೆ. ಕ್ರಿಕೆಟ್ ಅಭಿಮಾನಿಗಳ ಅನುಕೂಲಕ್ಕಾಗಿ ಪಂದ್ಯ ನಡೆಯುವ ದಿನದಂದು ನಮ್ಮ ಮೆಟ್ರೋ ರೈಲು ಸಂಚಾರವನ್ನು ರಾತ್ರಿ 11 ಗಂಟೆಯಿಂದಮುಂಜಾನೆ 2 ಗಂಟೆಯತನಕ ವಿಸ್ತರಿಸಲಾಗಿದೆ.

