ಬೆಂಗಳೂರು : ನಗರದ 59ನೇ ಸೆಷನ್ಸ್ ನ್ಯಾಯಾಲಯದಲ್ಲಿ (Sessions court) ನಡೆಯುತ್ತಿರುವ ಚಿತ್ರದುರ್ಗದ ರೇಣುಕಾಸ್ವಾಮಿ ಪ್ರಕರಣದ (Renukaswamy case) ವಿಚಾರಣೆ ಅನಿರೀಕ್ಷಿತ ತಿರುವು ಪಡೆದುಕೊಂಡಿತು. ಪ್ರಕರಣದ ಪ್ರಮುಖ ಪ್ರತ್ಯಕ್ಷದರ್ಶಿ ಪುನೀತ್, ವಿಶೇಷ ಸರ್ಕಾರಿ ಅಭಿಯೋಜಕ ಪ್ರಸನ್ನಕುಮಾರ್ ಅವರ ವಿಚಾರಣೆ ವೇಳೆ ತಮ್ಮ ಹಿಂದಿನ ಹೇಳಿಕೆಯಿಂದ ಸಂಪೂರ್ಣ ಹಿಂದೆ ಸರಿದು ಪ್ರತಿಕೂಲ ಸಾಕ್ಷಿಯಾಗಿ ಮಾರ್ಪಟ್ಟರು.
ಈ ಹಿಂದೆ ಮ್ಯಾಜಿಸ್ಟ್ರೇಟ್ ಎದುರು ಸಿಆರ್‌ಪಿಸಿ 164ರ ಅಡಿ ಹೇಳಿಕೆ ನೀಡಿದ್ದ ಪುನೀತ್, ದರ್ಶನ್ ಹಲ್ಲೆ ಮಾಡಿದ್ದನ್ನು ಕಣ್ಣಾರೆ ಕಂಡಿದ್ದಾಗಿ ಹೇಳಿದ್ದರು. ಆದರೆ ಇಂದು ಕಟಕಟೆಯಲ್ಲಿ, ಮ್ಯಾಜಿಸ್ಟ್ರೇಟ್ ಮುಂದೆ ಏನು ಹೇಳಿದ್ದೆ ಎಂದು ನೆನಪಿಲ್ಲ, ಭಯದಿಂದ ಹಾಗೆ ಹೇಳಿದ್ದೆ ಎಂದು ತಿಳಿಸಿದರು. ಆರೋಪಿಗಳ ಬಂಧನದ ಬಗ್ಗೆ ಟಿವಿಯಲ್ಲಿ ನೋಡಿದ್ದನ್ನೇ ಹೇಳಿದ್ದೆ ಎಂದೂ ಸ್ಪಷ್ಟಪಡಿಸಿದರು. ಇದರಿಂದ ಪ್ರಾಸಿಕ್ಯೂಷನ್‌ಗೆ ದೊಡ್ಡ ಹಿನ್ನಡೆಯಾಯಿತು.
ಇದೇ ವೇಳೆ ವಿಚಾರಣೆ ನಡುವೆ ತಾಂತ್ರಿಕ ಕಾರಣಕ್ಕೆ ವಿಡಿಯೋ ಕಾನ್ಫರೆನ್ಸ್ ಸಂಪರ್ಕ ಕಡಿತವಾಯಿತು. ಸಂಪರ್ಕ ಕಟ್ ಆಗಿದೆ ಎಂದು ಭಾವಿಸಿದ ದರ್ಶನ್ ಮತ್ತು ಪವಿತ್ರಾ ಗೌಡ, ಇತರ ಆರೋಪಿಗಳು ಹೊರಹೋದಾಗ ಪರಸ್ಪರ ಯೋಗಕ್ಷೇಮ ವಿಚಾರಿಸಿಕೊಂಡರು ಎಂದು ವರದಿಯಾಗಿದೆ. ಪವಿತ್ರಾ, ಊಟ ಆಯ್ತಾ ಎಂದು ಕೇಳಿದರೆ, ದರ್ಶನ್ ಬೆನ್ನು ನೋವಿನ ಬಗ್ಗೆ ವಿಚಾರಿಸಿದರು. ಇದಕ್ಕೆ ದರ್ಶನ್, ಬೆನ್ನು ಪೂರ್ತಿ ಮುರಿದಂತಾಗಿದೆ, ನೋವಾಗುತ್ತಿದೆ, ಫಿಸಿಯೋಥೆರಪಿಯ ಒಂದು ಸೆಷನ್ ಮಾತ್ರ ಆಗಿದೆ, ಇನ್ನೂ ಮುಂದುವರಿಸಬೇಕು ಎಂದು ಉತ್ತರಿಸಿದರು ಮತ್ತು ಇದೇ ವೇಳೆ ಜಡ್ಜ್ ಬದಲಾವಣೆ ಬಗ್ಗೆಯೂ ಇಬ್ಬರೂ ಚರ್ಚಿಸಿರುವುದು ಚರ್ಚೆಗೆ ಕಾರಣವಾಗಿದೆ.

