ಕೇರಳ : ತಿರುವನಂತಪುರಂನಲ್ಲಿ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ (India vs West Indies) ಮೊದಲ ಏಕದಿನ ಪಂದ್ಯದ ಬಳಿಕ ರೋಹಿತ್ ಶರ್ಮಾ (Rohit Sharma) ಅವರಿಗೆ ಅನಿರೀಕ್ಷಿತವಾಗಿ ಅವಘಡ ಸಂಭವಿಸಿದೆ. ಹೋಟೆಲ್‌ಗೆ ತೆರಳಲು ಬಸ್‌ನಿಂದ ಕೆಳಗಿಳಿಯುತ್ತಿದ್ದ ವೇಳೆ ಮೆಟ್ಟಿಲಿನಲ್ಲಿ ಆಯತಪ್ಪಿ ಅವರು ಕೆಳಗೆ ಬಿದ್ದಿದ್ದಾರೆ.
ಕೈಯಲ್ಲಿ ಬ್ಯಾಗ್ ಹಾಗೂ ಕೆಲವು ಕಾಗದಗಳನ್ನು ಹಿಡಿದಿದ್ದ ರೋಹಿತ್‌ಗೆ ಸ್ಥಳದಲ್ಲಿದ್ದ ಪೊಲೀಸರು (Police) ತಕ್ಷಣ ನೆರವು ನೀಡಿ ಎಬ್ಬಿಸಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ದೃಶ್ಯ ಕಂಡ ಅಭಿಮಾನಿಗಳಲ್ಲಿ ಆತಂಕ ಮೂಡಿದೆ. ಪೊಲೀಸರು ನೆರವಾದ ಬಳಿಕ ರೋಹಿತ್ ಚೇತರಿಸಿಕೊಂಡು ಅಲ್ಲಿಂದ ಹೋಟೆಲ್‌ಗೆ ತೆರಳಿದ್ದಾರೆ. ಪಂದ್ಯ ಮುಗಿಸಿ ತಂಡ ಹೋಟೆಲ್‌ಗೆ ಮರಳುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ.
ಇನ್ನು ಪಂದ್ಯದ ಫಲಿತಾಂಶದಲ್ಲಿ ಭಾರತ 8 ವಿಕೆಟ್‌ಗಳಿಂದ ವೆಸ್ಟ್ ಇಂಡೀಸ್ ತಂಡವನ್ನು ಮಣಿಸಿತು. ಮೊದಲು ಬ್ಯಾಟಿಂಗ್ ಮಾಡಿದ ವೆಸ್ಟ್ ಇಂಡೀಸ್ 295 ರನ್ ಗಳಿಸಿತ್ತು. ಗುರಿ ಬೆನ್ನಟ್ಟಿದ ಭಾರತ ಪರ ರೋಹಿತ್ 32 ರನ್ ಗಳಿಸಿದರೆ, ವಿರಾಟ್ ಕೊಹ್ಲಿ 139 ರನ್‌ಗಳ ಭರ್ಜರಿ ಇನ್ನಿಂಗ್ಸ್ ಆಡಿ ತಂಡದ ಗೆಲುವಿಗೆ ಮಹತ್ವದ ಕೊಡುಗೆ ನೀಡಿದರು.

