ಹುಬ್ಬಳ್ಳಿ: ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಕಡ್ಡಾಯವಾಗಿ ಅಧಿಕೃತವಾಗಿ ನೋಂದಣಿ (Registration) ಪ್ರಕ್ರಿಯೆ ಪೂರ್ಣಗೊಳಿಸಬೇಕು ಎಂದು ಸಚಿವ ಪ್ರಿಯಾಂಕ್ ಖರ್ಗೆ ಆರಂಭಿಸಿದ ವಾದಕ್ಕೆ ಈಗ ಕೆಪಿಸಿಸಿ ನೂತನ ಅಧ್ಯಕ್ಷರಾದ ಬಿಕೆ ಹರಿಪ್ರಸಾದ್ (BK Hariprasad) ಅವರೂ ಕೂಡ ಸಂಪೂರ್ಣ ಬೆಂಬಲ ಸೂಚಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಸಂಘಟನೆಯ ಹಣಕಾಸಿನ ಪಾರದರ್ಶಕತೆ ಮತ್ತು ಸಂವಿಧಾನ ಬದ್ಧತೆಯ ಬಗ್ಗೆ ತೀವ್ರವಾಗಿ ಪ್ರಶ್ನಿಸಿದ್ದಾರೆ. ಈ ಹಿಂದೆ ಇದೇ ವಿಚಾರವಾಗಿ ಪ್ರಿಯಾಂಕ್ ಖರ್ಗೆ ಅವರು ಸಂಘದ ಮುಖ್ಯಸ್ಥರಾದ ಮೋಹನ್ ಭಾಗವತ್ ಅವರಿಗೆ ಪತ್ರ ಬರೆದಿದ್ದನ್ನು ಸ್ಮರಿಸಬಹುದಾಗಿದ್ದು, ಪ್ರಸ್ತುತ ಹರಿಪ್ರಸಾದ್ ಅವರು ಕೂಡ ಇದೇ ಆಗ್ರಹವನ್ನು ಮುನ್ನೆಲೆಗೆ ತಂದಿದ್ದಾರೆ. ಆರ್‌ಎಸ್‌ಎಸ್‌ನ ಸದ್ಧಾಂತಿಕ ನಡೆಗಳು ಸಂವಿಧಾನ ಹಾಗೂ ಜ್ಯಾತ್ಯಾತೀತ ತತ್ವಗಳಿಗೆ ಧಕ್ಕೆ ತರುತ್ತಿರುವುದರಿಂದ ಕಾಂಗ್ರೆಸ್ ಪಕ್ಷ ಅದನ್ನು ಎಂದಿಗೂ ಮಾನ್ಯ ಮಾಡುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಸಾಮಾನ್ಯ ಬೀದಿಬದಿ ವ್ಯಾಪಾರಿಗಳು ಕೂಡ ಕಾನೂನಿನ ಚೌಕಟ್ಟಿನಲ್ಲಿ ನೋಂದಣಿ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಇರುವಾಗ, ಆರ್‌ಎಸ್‌ಎಸ್ ಸಂಸ್ಥೆಗೆ ಅಂತಹ ನಿಯಮ ಅನ್ವಯಿಸುವುದಿಲ್ಲವೇ ಎಂದು ಅವರು ಪ್ರಶ್ನಿಸಿದ್ದಾರೆ. ಸಾರ್ವಜನಿಕರಿಂದ ಕೋಟ್ಯಂತರ ರೂಪಾಯಿಗಳ ನಿಧಿ ಸಂಗ್ರಹಿಸುವ ಈ ಸಂಘಟನೆ ತನ್ನ ಆದಾಯ ಮತ್ತು ವೆಚ್ಚದ ಅಧಿಕೃತ ಲೆಕ್ಕಾಚಾರವನ್ನು ಬಹಿರಂಗಪಡಿಸಬೇಕಾದ ಅಗತ್ಯವಿದೆ ಎಂದು ಅವರು ಒತ್ತಿ ಹೇಳಿದ್ದಾರೆ.

