ಬೆಂಗಳೂರು: ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ (H. D. Kumaraswamy)ಅವರು ದ್ವೇಷದ ರಾಜಕಾರಣದಲ್ಲಿ ತೊಡಗಿದ್ದು, ಸಚಿವ ಪ್ರಿಯಾಂಕ್ ಖರ್ಗೆ ಅವರ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ಕೆಪಿಸಿಸಿ ಮಾಧ್ಯಮ ಮತ್ತು ಸಂವಹನ ವಿಭಾಗದ ಅಧ್ಯಕ್ಷ ರಮೇಶ್ ಬಾಬು (mlc ramesh babu ) ಟೀಕಿಸಿದ್ದಾರೆ.
ಕೆಪಿಸಿಸಿ ಮಾಧ್ಯಮ ಮತ್ತು ಸಂವಹನ ವಿಭಾಗದ ಅಧ್ಯಕ್ಷ ರಮೇಶ್ ಬಾಬು ಮಾತನಾಡಿ, ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ರಾಜ್ಯ ಸರ್ಕಾರ ಹಾಗೂ ಸಚಿವ ಪ್ರಿಯಾಂಕ್ ಖರ್ಗೆ ಅವರ ವಿರುದ್ಧ ದ್ವೇಷದ ರಾಜಕಾರಣ ಮಾಡುತ್ತಿದ್ದು, ತಮ್ಮ ಸಚಿವ ಸ್ಥಾನ ಉಳಿಸಿಕೊಳ್ಳಲು ಸಂಘ ಪರಿವಾರವನ್ನು ಓಲೈಸುವ ಹತಾಶ ಪ್ರಯತ್ನ ನಡೆಸುತ್ತಿದ್ದಾರೆ ಎಂದಿದ್ದಾರೆ. ಕುಮಾರಸ್ವಾಮಿ ಅವರು ಫೆಬ್ರವರಿ 2021ರಲ್ಲಿ ರಾಮಮಂದಿರ ದೇಣಿಗೆ ವಿಚಾರದಲ್ಲಿ ಆರ್‌ಎಸ್‌ಎಸ್ ಅನ್ನು ಜರ್ಮನಿಯ ನಾಜಿಗಳಿಗೆ ಹೋಲಿಸಿದ್ದರು. ಅಕ್ಟೋಬರ್ 2021ರಲ್ಲಿ ದೇಶವನ್ನು ಬಿಜೆಪಿ ಬದಲು ಆರ್‌ಎಸ್‌ಎಸ್ ಆಳುತ್ತಿದೆ ಎಂದು ಆರೋಪಿಸಿ ಸಂಘ ಪರಿವಾರವನ್ನು 'ವಿಷಕಾರಿ' ಎಂದು ಕರೆದಿದ್ದರು. 2023ರ ಚುನಾವಣಾ ಸಮಯದಲ್ಲಿ ಪ್ರಹ್ಲಾದ್ ಜೋಶಿ ಅವರನ್ನು ಸಿಎಂ ಮಾಡಲು ಆರ್‌ಎಸ್‌ಎಸ್ ಸಂಚು ರೂಪಿಸಿದೆ ಎಂದು ಹೇಳಿಕೆ ನೀಡಿದ್ದರು. ಅಂದು ಸಂಘ ಪರಿವಾರದ ವಿರುದ್ಧ ತೀವ್ರವಾಗಿ ಮಾತನಾಡುತ್ತಿದ್ದ ಕುಮಾರಸ್ವಾಮಿ ಅವರಿಗೆ ಇಂದು ಏಕಾಏಕಿ ಸಂಘದ ಮೇಲೆ ಎಲ್ಲಿಲ್ಲದ ಪ್ರೀತಿ, ವ್ಯಾಮೋಹ ಉಂಟಾಗಿದೆ. ಇದು ಕೇವಲ ಕೇಂದ್ರದಲ್ಲಿ ತಮ್ಮ ಸಚಿವ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಮಾಡುತ್ತಿರುವ ಗಿಮಿಕ್ ಎಂದು ರಮೇಶ್ ಬಾಬು ವ್ಯಂಗ್ಯವಾಡಿದ್ದಾರೆ. ಕರ್ನಾಟಕ ಲೋಕಸೇವಾ ಆಯೋಗವು (KPSC) 1951 ರಿಂದ ಸಾಂವಿಧಾನಿಕವಾಗಿ ಕಾರ್ಯನಿರ್ವಹಿಸುತ್ತಿದೆ. ಹಿಂದೆ ಗೋಮಾಳ್ ಭೀಮಪ್ಪ ಹಾಗೂ ಹೆಚ್.ಎನ್. ಕೃಷ್ಣ ಅವರ ಅಧ್ಯಕ್ಷತೆಯ ಅವಧಿಯಲ್ಲಿ ನಡೆದ ಹಗರಣಗಳು ಮತ್ತು ಕಂಕಣ ಭಾಗ್ಯದ ನೇಮಕಾತಿ ಅಕ್ರಮಗಳ ಹಿಂದೆ ಯಾರಿದ್ದರು ಎಂಬುದು ಜನರಿಗೆ ಗೊತ್ತಿದೆ. ಪ್ರಸ್ತುತ ಕೆಪಿಎಸ್‌ಸಿ ಅಧ್ಯಕ್ಷರು ಹಿಂದಿನ ಬಿಜೆಪಿ ಸರ್ಕಾರದ ಬಳುವಳಿಯಾಗಿದ್ದು, ಯಾವುದೇ ಆಧಾರವಿಲ್ಲದೆ ಸಚಿವ ಪ್ರಿಯಾಂಕ್ ಖರ್ಗೆ ಅವರ ಹೆಸರನ್ನು ಈ ಪ್ರಕರಣಕ್ಕೆ ಎಳೆದು ತರಲಾಗುತ್ತಿದೆ ಎಂದು ರಮೇಶ್ ಬಾಬು ಸ್ಪಷ್ಟಪಡಿಸಿದ್ದಾರೆ. ಕೇಂದ್ರದ ಬೃಹತ್ ಕೈಗಾರಿಕಾ ಸಚಿವರಾಗಿರುವ ಕುಮಾರಸ್ವಾಮಿ ಅವರು ರಾಜ್ಯದ ಹಿತಾಸಕ್ತಿ ಕಾಪಾಡುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ಕೀಳುಮಟ್ಟದ ರಾಜಕೀಯ ಬಿಟ್ಟು ರಾಜ್ಯದ ಸಮಗ್ರ ಅಭಿವೃದ್ಧಿಗೆ ಶ್ರಮಿಸಲಿ ಎಂದು ಅವರು ಆಗ್ರಹಿಸಿದ್ದಾರೆ.

