ಮುಂಬೈ: ಬಾಲಿವುಡ್ ನಟ ಸಲ್ಮಾನ್ ಖಾನ್(Salman Khan) ಅವರ ನಿವಾಸದ ಮೇಲಿನ ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ, ಸದ್ಯ ದೆಹಲಿಯ(Delhi) ತಿಹಾರ್ ಜೈಲಿನಲ್ಲಿರುವ ಕುಖ್ಯಾತ ಗ್ಯಾಂಗ್‌ಸ್ಟರ್ ಅನ್ಮೋಲ್ ಬಿಷ್ಣೋಯ್(Anmol Bishnoi) ಮುಂಬೈನ ವಿಶೇಷ ನ್ಯಾಯಾಲಯಕ್ಕೆ ಮಹತ್ವದ ಅರ್ಜಿಯೊಂದನ್ನು ಸಲ್ಲಿಸಿದ್ದಾನೆ.
"ಪ್ರಕರಣದಲ್ಲಿ ನಿಷ್ಪಕ್ಷಪಾತ ವಿಚಾರಣೆ ಮತ್ತು ನ್ಯಾಯ ಸಿಗಬೇಕು" ಎಂಬ ಉದ್ದೇಶದಿಂದ ತಾನು ಈ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಶರಣಾಗಲು ಸಿದ್ಧ ಎಂದು ಆತ ಕೋರಿದ್ದಾನೆ. ಜೈಲಿನಲ್ಲೇ ಇರುವ ಲಾರೆನ್ಸ್ ಬಿಷ್ಣೋಯ್ ಅವರ ಸಹೋದರನಾಗಿರುವ ಅನ್ಮೋಲ್‌ನ ಈ ನಡೆ ಈಗ ಕಾನೂನು ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ. ಜೈಲಿನಲ್ಲಿರುವಾಗಲೇ ಮತ್ತೊಂದು ಪ್ರಕರಣದಲ್ಲಿ ಶರಣಾಗತಿ ಏಕೆ? ಕಳೆದ ವರ್ಷದ ನವೆಂಬರ್‌ನಲ್ಲಿ ಅಮೆರಿಕದಿಂದ ಭಾರತಕ್ಕೆ ಗಡಿಪಾರು ಮಾಡಲ್ಪಟ್ಟ ಅನ್ಮೋಲ್ ಬಿಷ್ಣೋಯ್‌ನನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಬೇರೆ ಪ್ರಕರಣವೊಂದರಲ್ಲಿ ಬಂಧಿಸಿತ್ತು. ಸದ್ಯ ಆತ ದೆಹಲಿಯ ಜೈಲಿನಲ್ಲೇ ಇರುವುದರಿಂದ, ಮುಂಬೈನಲ್ಲಿ ನಡೆಯುತ್ತಿರುವ ಸಲ್ಮಾನ್ ಖಾನ್ ಮನೆ ಮೇಲಿನ ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಆತನನ್ನು ನೇರವಾಗಿ ವಿಚಾರಣೆಗೆ ಒಳಪಡಿಸಲು ಕಾನೂನು ತೊಡಕುಗಳಿದ್ದವು. ಇದೇ ಕಾರಣಕ್ಕೆ ಆತನ ಪರ ವಕೀಲರು ಮುಂಬೈನ ವಿಶೇಷ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು, ಆತನನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಅಥವಾ ಖುದ್ದಾಗಿ ಹಾಜರುಪಡಿಸಲು 'ಪ್ರೊಡಕ್ಷನ್ ವಾರಂಟ್' ಹೊರಡಿಸುವಂತೆ ಮನವಿ ಮಾಡಿದ್ದಾರೆ. ಕಾನೂನು ಸಮರಕ್ಕೆ ಸಜ್ಜಾದ ಅನ್ಮೋಲ್ ಬಿಷ್ಣೋಯ್ ಕಳೆದ 2024ರ ಏಪ್ರಿಲ್ 14ರಂದು ಮುಂಬೈನ ಗ್ಯಾಲಕ್ಸಿ ಅಪಾರ್ಟ್‌ಮೆಂಟ್‌ನಲ್ಲಿರುವ ಸಲ್ಮಾನ್ ಖಾನ್ ನಿವಾಸದ ಮುಂದೆ ಬೈಕ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದರು. ಈ ಪ್ರಕರಣದ ವಿಚಾರಣೆ ಈಗಾಗಲೇ ಮುಂಬೈ ನ್ಯಾಯಾಲಯದಲ್ಲಿ ಆರಂಭವಾಗಿದ್ದು, ಮೂವರು ಪ್ರಮುಖ ಸಾಕ್ಷಿಗಳ ವಿಚಾರಣೆಯೂ ಮುಗಿದಿದೆ. ತನ್ನ ಗೈರುಹಾಜರಿಯಲ್ಲಿ ಸಾಕ್ಷಿಗಳ ವಿಚಾರಣೆ ನಡೆದಿರುವುದರಿಂದ, ತನಗೆ ನ್ಯಾಯ ಸಿಗಲು ತಕ್ಷಣವೇ ಈ ಪ್ರಕರಣದ ಕಾನೂನು ಪ್ರಕ್ರಿಯೆಯಲ್ಲಿ ಭಾಗಿಯಾಗುವುದು ಅಗತ್ಯ ಎಂದು ಅನ್ಮೋಲ್ ತನ್ನ ಅರ್ಜಿಯಲ್ಲಿ ವಾದಿಸಿದ್ದಾನೆ. ಅಲ್ಲದೆ, ಇದರಿಂದ ಕಾನೂನಿನ ದುರ್ಬಳಕೆಯನ್ನು ತಡೆಯಬಹುದು ಮತ್ತು ಪ್ರಕರಣದ ವಿಚಾರಣೆಯನ್ನು ವೇಗಗೊಳಿಸಬಹುದು ಎಂದು ಆತ ಹೇಳಿಕೊಂಡಿದ್ದಾನೆ. ಮುಂದಿನ ಹಂತವೇನು? ಅನ್ಮೋಲ್ ಬಿಷ್ಣೋಯ್ ಸಲ್ಲಿಸಿರುವ ಈ ಆಘಾತಕಾರಿ ಶರಣಾಗತಿ ಅರ್ಜಿಗೆ ಸಂಬಂಧಿಸಿದಂತೆ ಮುಂಬೈನ ವಿಶೇಷ ನ್ಯಾಯಾಲಯವು ಸರ್ಕಾರಿ ಅಭಿಯೋಜಕರಿಗೆ (ಪಬ್ಲಿಕ್ ಪ್ರಾಸಿಕ್ಯೂಟರ್) ನೋಟಿಸ್ ನೀಡಿದ್ದು, ಅಧಿಕೃತ ಪ್ರತಿಕ್ರಿಯೆ ಸಲ್ಲಿಸುವಂತೆ ಸೂಚಿಸಿದೆ. ಈಗಾಗಲೇ ಗುಂಡು ಹಾರಿಸಿದ್ದ ಇಬ್ಬರು ಆರೋಪಿಗಳಾದ ವಿಕ್ಕಿ ಗುಪ್ತಾ ಮತ್ತು ಸಾಗರ್ ಪಾಲ್ ನ್ಯಾಯಾಂಗ ವಶದಲ್ಲಿದ್ದು, ಅನ್ಮೋಲ್ ಬಿಷ್ಣೋಯ್ ಎಂಟ್ರಿಯಿಂದಾಗಿ ಈ ಹೈಪ್ರೊಫೈಲ್ ಪ್ರಕರಣ ಈಗ ಹೊಸ ತಿರುವು ಪಡೆದುಕೊಂಡಿದೆ.

