ಬೆಂಗಳೂರು: ಪ್ರಜ್ವಲ್ ದೇವರಾಜ್ ಅಭಿನಯದ, ಸದ್ಯ ಸಿನಿರಂಗದಲ್ಲಿ ಭಾರಿ ಕುತೂಹಲ ಮೂಡಿಸಿರುವ 'ಕರಾವಳಿ' ಚಲನಚಿತ್ರ ಈಗ ಹೊಸ ವಿವಾದವೊಂದರ ಮೂಲಕ ಹೆಡ್‌ಲೈನ್‌ನಲ್ಲಿದೆ. ಇತ್ತೀಚೆಗೆ ನಡೆದ ಚಿತ್ರದ ಟ್ರೇಲರ್ ಪ್ರೀಮಿಯರ್ ಪ್ರದರ್ಶನದ ವೇಳೆ ಪ್ರಜ್ವಲ್ ಅವರ ಅಭಿಮಾನಿಗಳು ಚಿತ್ರತಂಡದ ವಿರುದ್ಧ ಆಕ್ರೋಶ ಹೊರಹಾಕಿದ್ದರು.
ಈ ಚಿತ್ರದ ಪಾತ್ರವರ್ಗಕ್ಕೆ ನಟ, ನಿರ್ದೇಶಕ ರಾಜ್ ಬಿ. ಶೆಟ್ಟಿ ಅವರ ಸೇರ್ಪಡೆಯಾದ ಬಳಿಕ ಪ್ರಜ್ವಲ್ ದೇವಾರಾಜ್ ಅವರಿಗೆ ಇರಿಸುಮುರಿಸು ಉಂಟಾಗಿದೆಯೇ ಎಂಬ ಪ್ರಶ್ನೆಗಳು ಹುಟ್ಟಿಕೊಂಡಿದ್ದವು. ಇದೀಗ ಈ ಎಲ್ಲಾ ವದಂತಿಗಳಿಗೆ ಸ್ವತಃ ರಾಜ್ ಬಿ. ಶೆಟ್ಟಿ (Raj B Shetty) ಅವರೇ ತಮ್ಮದೇ ಶೈಲಿಯಲ್ಲಿ (Sandalwood) ಖಡಕ್ ಉತ್ತರ ನೀಡಿದ್ದಾರೆ. ನಾನು ಕೊನೆಯ ಕ್ಷಣದ ಆಯ್ಕೆ, ಆ ಪಾತ್ರ ಮೊದಲೇ ಇತ್ತು! ಸಿನಿಮಾದಲ್ಲಿ ತಮ್ಮ ಪಾತ್ರದ ಕುರಿತು ಸ್ಪಷ್ಟನೆ ನೀಡಿರುವ ರಾಜ್ ಬಿ. ಶೆಟ್ಟಿ, "ಈ ಸಿನಿಮಾದಲ್ಲಿ ನಾನು ಮಾಡುತ್ತಿರುವುದು ಕೇವಲ ಒಂದು ಅತಿಥಿ ಪಾತ್ರ (ಗೆಸ್ಟ್ ಅಪಿಯರೆನ್ಸ್). ಈ ಚಿತ್ರದ ಶೀರ್ಷಿಕೆ ಮತ್ತು ಪೋಸ್ಟರ್ ಎಲ್ಲವೂ ಮೊದಲಿನಿಂದಲೂ ಪ್ರಜ್ವಲ್ ದೇವರಾಜ್ ಅವರ ಹೆಸರಿನಲ್ಲೇ ಇದೆ ಎಂಬುದು ನನಗೂ ಗೊತ್ತು. ನಾನು ಬಂದ ಮೇಲೆ ಪ್ರಜ್ವಲ್ ಅವರಿಗೆ ಬೇಸರವಾಗಿದೆ ಎಂಬ ವಾದದಲ್ಲಿ ಅರ್ಥವಿಲ್ಲ. ಏಕೆಂದರೆ, ಆ ಪಾತ್ರಕ್ಕೆ ನಾನೇನು ಮೊದಲ ಆಯ್ಕೆಯಾಗಿರಲಿಲ್ಲ. ಚಿತ್ರತಂಡ ನನಗಿಂತ ದೊಡ್ಡ ನಟರೊಬ್ಬರನ್ನು ಆ ಪಾತ್ರಕ್ಕೆ ಅಂದುಕೊಂಡಿತ್ತು. ಆದರೆ ಕಾರಣಾಂತರಗಳಿಂದ ಅವರು ಒಪ್ಪದಿದ್ದಾಗ ಕೊನೆಯಲ್ಲಿ ನಾನು ಬಂದೆ ಅಷ್ಟೇ," ಎಂದಿದ್ದಾರೆ. "ನನಗಿಂತ ಸಿನಿಮಾ ದೊಡ್ಡದು, ಯಾರೊಂದಿಗೂ ಪೈಪೋಟಿ ಇಲ್ಲ" "ನಾನು ಇಲ್ಲಿ ಯಾರ ಜೊತೆಯೂ ಸ್ಪರ್ಧೆ ಮಾಡಲು ಬಂದಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ನಾನೊಬ್ಬ ತಂತ್ರಜ್ಞ. ಸಿನಿಮಾ ಮಾಡುವುದರ ಹಿಂದೆ ಎಷ್ಟು ಕಷ್ಟ ಇರುತ್ತದೆ ಎಂಬುದು ನನಗೆ ಚೆನ್ನಾಗಿ ಗೊತ್ತು. ಕೇವಲ ನನ್ನದೇ ಹೆಸರು, ನನ್ನದೇ ಪೈಪೋಟಿ ಎಂಬ ಅಹಂನಲ್ಲಿ ಬದುಕುವವನು ನಾನಲ್ಲ. ನನಗಿಂತಲೂ ಸಿನಿಮಾ ದೊಡ್ಡದು. ಮುಂದಿನ ಚಿತ್ರದಲ್ಲಿ ನನ್ನ ಹೆಸರು ಹಾಕದಿದ್ದರೂ ನನಗೆ ಯಾವುದೇ ತಕರಾರಿಲ್ಲ," ಎಂದು ರಾಜ್ ಬಿ. ಶೆಟ್ಟಿ ಚಿತ್ರರಂಗದ ಇಂದಿನ ಪರಿಸ್ಥಿತಿಯ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಕುಂದಾಪುರದ ಒಬ್ಬ ಸಾಮಾನ್ಯ ಹುಡುಗ, 9ನೇ ತರಗತಿಯಲ್ಲಿದ್ದಾಗ ಮನೆ ಬಿಟ್ಟು ಓಡಿಬಂದು ಇಂದು ಇಡೀ ಭಾರತವೇ ತಿರುಗಿ ನೋಡುವಂತಹ ಗುಣಮಟ್ಟದ ಸಿನಿಮಾ ನಿರ್ದೇಶಿಸಿದ್ದಾನೆ. ನಾವು ಆತನ ಸಾಧನೆ ಮತ್ತು ಶ್ರಮವನ್ನು ಕೊಂಡಾಡುವ ಬದಲು, ಇಂತಹ ಅನಗತ್ಯ ವಿಷಯಗಳ ಬಗ್ಗೆ ಚರ್ಚೆ ಮಾಡುತ್ತಿರುವುದು ನಿಜಕ್ಕೂ ದುರದೃಷ್ಟಕರ ಮತ್ತು ಬೇಸರದ ಸಂಗತಿ ಎಂದು ಅವರು ಹೇಳಿದ್ದಾರೆ. ಚಿತ್ರರಂಗಕ್ಕೇ ಗುಡ್‌ಬೈ ಹೇಳ್ತೀನಿ! ಕನ್ನಡ ಚಿತ್ರರಂಗದಲ್ಲಿ ಒಗ್ಗಟ್ಟಿನ ಕೊರತೆ ಎದ್ದು ಕಾಣುತ್ತಿದೆ ಎಂದಿರುವ ರಾಜ್, "ಯಾಕೆ ನಮ್ಮ ಚಿತ್ರರಂಗ ಉದ್ಧಾರ ಆಗುತ್ತಿಲ್ಲ ಎಂದು ಜನ ಕೇಳುತ್ತಿರುತ್ತಾರಲ್ಲ, ಅದಕ್ಕೆ ಇಂತಹ ಚರ್ಚೆಗಳೇ ಕಾರಣ. ಈ ಸಿನಿಮಾದಲ್ಲಿ ಮಿತ್ರ, ಶ್ರೀಧರ್ ಅವರಂತಹ ಅದ್ಭುತ ಕಲಾವಿದರು ನಟಿಸಿದ್ದಾರೆ. ನಾನೇನು ಅವರಿಗಿಂತ ದೊಡ್ಡವನಾ? ಅವರ ಹೆಸರು ಪೋಸ್ಟರ್‌ನಲ್ಲಿ ಇದೆಯೇ? ಈ ಚಿತ್ರದಿಂದ ಪ್ರಜ್ವಲ್ ಅವರಿಗೆ ದೊಡ್ಡ ಹೆಸರು ಬಂದರೆ ನನಗೆ ಅತಿ ಹೆಚ್ಚು ಸಂತೋಷವಾಗುತ್ತದೆ. ಹಾಗೆಯೇ ಮಿತ್ರ ಅವರಿಗೆ ಹೆಸರು ಬಂದರೆ ಹೆಮ್ಮೆ ಅನಿಸುತ್ತದೆ." "ನಾನು ಈ ಹಿಂದೆ ಹಲವು ಚಿತ್ರಗಳಲ್ಲಿ ವಿಲನ್ ಆಗಿ ಹಾಗೂ ಕಾಮಿಡಿ ಪಾತ್ರಗಳಲ್ಲಿ ನಟಿಸಿದ್ದೇನೆ. ಅಲ್ಲೆಲ್ಲೂ ನನ್ನ ಕಟೌಟ್ ಹಾಕಿ ಅಥವಾ ಪೋಸ್ಟರ್‌ನಲ್ಲಿ ನನ್ನ ಹೆಸರು ಹಾಕಿ ಎಂದು ನಾನು ಹಠ ಹಿಡಿದಿಲ್ಲ, ನನ್ನ ಜೀವನದಲ್ಲಿ ಆ ಕೆಲಸ ಮಾಡುವುದೂ ಇಲ್ಲ. ಒಂದು ವೇಳೆ ಕ್ರೆಡಿಟ್‌ಗಾಗಿ ಕಿತ್ತಾಡುವ ಅಂತಹ ಪರಿಸ್ಥಿತಿ ನನ್ನ ಜೀವನದಲ್ಲಿ ಬಂದರೆ, ಅಂದೇ ನಾನು ಚಿತ್ರರಂಗವನ್ನು ಬಿಟ್ಟುಬಿಡುತ್ತೇನೆ," ಎಂದು ರಾಜ್ ಬಿ. ಶೆಟ್ಟಿ ಅತ್ಯಂತ ಆವೇಶದಿಂದ ಹೇಳಿದ್ದಾರೆ.

