ಬೆಂಗಳೂರು: ಕನ್ನಡ ಚಿತ್ರರಂಗದ (Sandalwood) ಕರುನಾಡ ಚಕ್ರವರ್ತಿ ಡಾ. ಶಿವರಾಜ್‌ಕುಮಾರ್ (Shivaraj Kumar) ಅವರು ವಯಸ್ಸನ್ನು ಮರೆತು ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ನಟಿಸುತ್ತಾ ಸದಾ ಸುದ್ದಿಯಲ್ಲಿರುತ್ತಾರೆ. ಕೇವಲ ಸ್ಯಾಂಡಲ್‌ವುಡ್ ಮಾತ್ರವಲ್ಲದೆ ಇಡೀ ದಕ್ಷಿಣ ಭಾರತ ಸೇರಿದಂತೆ ಪ್ಯಾನ್ ಇಂಡಿಯಾ (Pan India) ಮಟ್ಟದಲ್ಲಿ ತಮ್ಮದೇ ಆದ ಛಾಪು ಮೂಡಿಸುತ್ತಿದ್ದಾರೆ.
ಸದ್ಯ ಚಿತ್ರರಂಗದ ಖ್ಯಾತ ನಿರ್ದೇಶಕ ಹಾಗೂ ನಿರ್ಮಾಪಕ ಆರ್. ಚಂದ್ರು (R Chandru) ಅವರೊಂದಿಗೆ ಶಿವಣ್ಣ ಕೈಜೋಡಿಸುತ್ತಿರುವುದು ಸಿನಿಮಾ ಪ್ರೇಕ್ಷಕರಲ್ಲಿ ಭಾರಿ ಕುತೂಹಲ ಮೂಡಿಸಿದೆ. ಈ ಹಿಂದೆ ಸೂಪರ್ ಹಿಟ್ 'ಮೈಲಾರಿ' ಮತ್ತು ಬಿಗ್ ಬಜೆಟ್ ಸಿನಿಮಾ 'ಕಬ್ಜ' ಚಿತ್ರದಲ್ಲಿ ಅತಿಥಿ ಪಾತ್ರದ ಮೂಲಕ ಅಬ್ಬರಿಸಿದ್ದ ಈ ಜೋಡಿ, ಈಗ ಮೂರನೇ ಬಾರಿಗೆ ಹೊಸ ಇತಿಹಾಸ ಸೃಷ್ಟಿಸಲು ಸಜ್ಜಾಗಿದೆ.ಹೊಸ ಚಿತ್ರದ ಜೊತೆಗೆ ಹ್ಯಾಟ್ರಿಕ್ ಹೀರೋ ಅವರ ಕೈಯಲ್ಲಿ ಸದ್ಯ ಪ್ರಮುಖ ಸಿನಿಮಾಗಳ ದೊಡ್ಡ ಪಟ್ಟಿಯೇ ಇದೆ. ಪವನ್ ಒಡೆಯರ್ ನಿರ್ದೇಶನದ 'ಬೇಲ್' ಸಿನಿಮಾ ಬಿಡುಗಡೆಗೆ ಸಿದ್ಧವಾಗುತ್ತಿದ್ದರೆ, ಶ್ರೀನಿ ಅವರ ಸಾರಥ್ಯದ 'ಎ ಫಾರ್ ಆನಂದ್' ಚಿತ್ರೀಕರಣಕ್ಕೆ ಶಿವಣ್ಣ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಇದರೊಂದಿಗೆ ಬಹುನಿರೀಕ್ಷಿತ ಚಿತ್ರಗಳಾದ 'ಡಿಎಡಿ' (DAD) ಮತ್ತು ಹೇಮಂತ್ ರಾವ್ ಅವರ '666 ಆಪರೇಷನ್ ಡ್ರೀಮ್ ಥಿಯೇಟರ್' ಚಿತ್ರಗಳಲ್ಲಿಯೂ ಪ್ರಮುಖ ಪಾತ್ರಗಳನ್ನು ನಿರ್ವಹಿಸುತ್ತಿದ್ದಾರೆ. ತಮಿಳಿನ ಸೂಪರ್ ಸ್ಟಾರ್ ರಜನಿಕಾಂತ್ ಜೊತೆಗಿನ 'ಜೈಲರ್ 2' ಹಾಗೂ ತೆಲುಗಿನ ರಾಮ್ ಚರಣ್ ಅಭಿನಯದ 'ಪೆದ್ದಿ' ಸೇರಿದಂತೆ ಪರಭಾಷೆಗಳಲ್ಲೂ ಅವರ ಹವಾ ಮುಂದುವರಿದಿದೆ. ಆರ್. ಚಂದ್ರು ಹಾಗೂ ಶಿವರಾಜ್‌ಕುಮಾರ್ ಕಾಂಬಿನೇಷನ್‌ನಲ್ಲಿ ಮೂಡಿಬರಲಿರುವ ಈ ಹೊಸ ಚಿತ್ರವನ್ನು ಕೇವಲ ಪ್ರಾದೇಶಿಕ ಮಟ್ಟಕ್ಕೆ ಸೀಮಿತಗೊಳಿಸುತ್ತಿಲ್ಲ. 'ಕಬ್ಜ' ಸಿನಿಮಾದ ನಂತರ ದೀರ್ಘ ಬಿಡುವು ತಗೆದುಕೊಂಡು ಕಥೆ ಸಿದ್ಧಪಡಿಸಿರುವ ಚಂದ್ರು, ಇದನ್ನು ಅತಿ ದೊಡ್ಡ ಕ್ಯಾನ್ವಾಸ್‌ನಲ್ಲಿ ಬಹುಭಾಷೆಗಳಲ್ಲಿ ಜಾಗತಿಕ ಮಟ್ಟವನ್ನು ಗುರಿಯಾಗಿಸಿಕೊಂಡು ನಿರ್ಮಿಸಲು ಯೋಜನೆ ರೂಪಿಸಿದ್ದಾರೆ. ಈ ಚಿತ್ರದ ಮತ್ತೊಂದು ಪ್ರಮುಖ ಹೈಲೈಟ್ ಎಂದರೆ, ಇದರಲ್ಲಿ ಕೇವಲ ಕನ್ನಡದ ಕಲಾವಿದರಷ್ಟೇ ಅಲ್ಲದೆ ವಿವಿಧ ಭಾಷೆಗಳ ಜನಪ್ರಿಯ ಸ್ಟಾರ್ ನಟರನ್ನು ಒಳಗೊಂಡ ಬೃಹತ್ ತಾರಾಗಣವಿರಲಿದೆ.

