ಬೆಂಗಳೂರು: ಕಾರ್ಯಕ್ರಮವೊಂದರಲ್ಲಿ ಕುಸಿದು ಬಿದ್ದು ಆಸ್ಪತ್ರೆ ಸೇರಿದ್ದ ರಾಜ್ಯದ ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಎನ್. ಸಂತೋಷ್ ಹೆಗಡೆ (Santhosh Hegde) ಅವರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ಆರೋಗ್ಯದಲ್ಲಿ ಚೇತರಿಕೆ
ವಿಕ್ರಂ ಆಸ್ಪತ್ರೆಯ ವೈದ್ಯರು ಸಂತೋಷ್ ಹೆಗಡೆ ಅವರಿಗೆ ತುರ್ತು ಚಿಕಿತ್ಸೆ ನೀಡಿದ್ದು, ವಯೋ ಸಹಜ ಕಾಯಿಲೆ ಹಾಗೂ ರಕ್ತದೊತ್ತಡ ಸಮಸ್ಯೆಯಿಂದ ಅವರು ಕುಸಿದು ಬಿದ್ದಿದ್ದರು ಎನ್ನಲಾಗಿದೆ.
ಸದ್ಯ ಅವರ ಆರೋಗ್ಯದಲ್ಲಿ ಚೇತರಿಕೆ ಆಗಿದ್ದು, ಇದೀಗ ಅವರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ. ಏನಿದು ಘಟನೆ? ಈ ಕಾರ್ಯಕ್ರಮದ ಆರಂಭದಲ್ಲಿ ಅವರು ಬಹಳ ಚೆನ್ನಾಗಿಯೇ ಇದ್ದರೂ, ಆದರೆ ಏಕಾಏಕಿ ಅವರಲ್ಲಿ ತಲೆಸುತ್ತು ಕಾಣಿಸಿಕೊಂಡಿದೆ ಎನ್ನುವ ಮಾಹಿತಿ ಇದೆ. ಇನ್ನು ಆಸ್ಪತ್ರೆಗೆ ದಾಖಲಿಸುವ ವೇಳೆ ಅವರು ತೀವ್ರ ದೌರ್ಬಲ್ಯಕ್ಕೀಡಾಗಿದ್ದರು. ವೈದ್ಯಕೀಯ ತಪಾಸಣೆಯ ಪ್ರಾಥಮಿಕ ವರದಿಯ ಪ್ರಕಾರ, ರಕ್ತದಲ್ಲಿನ ಸಕ್ಕರೆ ಪ್ರಮಾಣ ದಿಢೀರ್ ಕುಸಿತ ಆಗಿದೆ. ಇದರಿಂದ ಬಿಪಿ ಸಹ ವ್ಯತ್ಯಾಸ ಆಗಿದೆ. ಹಾಗಾಗಿ ಅವರು ತಲೆಸುತ್ತಿ ಬಿದ್ದಿದ್ದಾರೆ ಎನ್ನಲಾಗಿದೆ. ಇನ್ನು ಘಟನೆ ನಡೆದ ಸಮಯದಲ್ಲಿ ಸಭಾಂಗಣದಲ್ಲಿದ್ದ ವಿಧಾನಸಭಾಧ್ಯಕ್ಷರಾದ ಯು.ಟಿ. ಖಾದರ್ ಅವರು ತಕ್ಷಣವೇ ಸ್ಪಂದಿಸಿದ್ದು, ಆಂಬ್ಯುಲೆನ್ಸ್ ಬರುವವರೆಗೆ ಕಾಯದೆ, ತಮ್ಮದೇ ಕಾರಿನಲ್ಲಿ ಸಂತೋಷ್ ಹೆಗಡೆ ಅವರನ್ನು ಕೂರಿಸಿಕೊಂಡು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ ಎನ್ನಲಾಗಿದೆ. ಅಲ್ಲದೇ, ಖಾದರ್ ಅವರೇ ಸ್ವತಃ ಜೊತೆಯಲ್ಲಿದ್ದು, ಹೆಗಡೆ ಅವರನ್ನು ವಿಕ್ರಂ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಗೆ ವ್ಯವಸ್ಥೆ ಮಾಡಿದ್ದಾರೆ.
ಮಾಹಿತಿಗಳ ಪ್ರಕಾರ, ಇಂದು ಬೆಂಗಳೂರಿನಲ್ಲಿ ನಡೆಯುತ್ತಿದ್ದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಈ ಘಟನೆ ನಡೆದಿದೆ. ನಗರದ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಮಯದಲ್ಲಿ ಅವರು ವೇದಿಕೆಯ ಮೇಲೆ ಕುಸಿದು ಬಿದ್ದಿದ್ದಾರೆ. ತಕ್ಷಣವೇ ಆಯೋಜಕರು ಅವರನ್ನ ಸಮೀಪದ ಮಣಿಪಾಲ್ ಆಸ್ಪತ್ರೆಗೆ ಸೇರಿಸಿದ್ದರು.

