ನವದೆಹಲಿ: ರಾಜ್ಯ ವಿಪತ್ತು ಸ್ಪಂದನಾ ಪಡೆಗಳನ್ನು (SDRF) ಬಲಪಡಿಸಲು ಮತ್ತು ಮೇಲ್ದರ್ಜೆಗೇರಿಸಲು ಕೇಂದ್ರ ಸರ್ಕಾರ(Central Government) ಹಾಗೂ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ (NDMA) ನೂತನ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.
ಮುಂಬರುವ 5 ವರ್ಷಗಳಲ್ಲಿ ಎಸ್‌ಡಿಆರ್‌ಎಫ್ ಪಡೆಗಳ ಸ್ಥಾಪನೆ, ತರಬೇತಿ ಮತ್ತು ಕಾರ್ಯಾಚರಣೆಗೆ ಸಂಬಂಧಿಸಿದಂತೆ ಈ ನಿರ್ದೇಶನ ನೀಡಲಾಗಿದ್ದು, ನೇರ ನೇಮಕಾತಿಯಲ್ಲಿ ಅಗ್ನಿವೀರರು ಮತ್ತು ಎನ್‌ಸಿಸಿ (NCC) ಪ್ರಮಾಣಪತ್ರ ಹೊಂದಿರುವವರಿಗೆ ಆದ್ಯತೆ ನೀಡಲು ನಿರ್ಧರಿಸಲಾಗಿದೆ. ಅಲ್ಲದೆ ಶೇಕಡಾ 15ರಷ್ಟು ಹುದ್ದೆಗಳನ್ನು ಮಹಿಳೆಯರಿಗೆ ಮೀಸಲಿಡಲಾಗಿದೆ. ರಾಷ್ಟ್ರೀಯ ವಿಪತ್ತು ಸ್ಪಂದನಾ ಪಡೆ (NDRF) ಮಾದರಿಯಲ್ಲಿ ಅಭಿವೃದ್ಧಿ ಬಟಾಲಿಯನ್ ಮಾದರಿಯ ರಚನೆ ಮತ್ತು ಸಂಘಟನೆ ತಂಡಗಳ ವಿಂಗಡಣೆ: ಪ್ರತಿಯೊಂದು ಬಟಾಲಿಯನ್ ಅನ್ನು 9 ರಿಂದ 10 ಬಹು-ವಿಷಯಾಧಾರಿತ ತಂಡಗಳಾಗಿ ವಿಂಗಡಿಸಲಾಗುತ್ತದೆ. ಪ್ರತಿ ತಂಡದಲ್ಲಿ 45 ರಿಂದ 50 ರಕ್ಷಣಾ ಕಾರ್ಯಕರ್ತರು, ವೈದ್ಯಕೀಯ, ಸಂವಹನ ಮತ್ತು ಲಾಜಿಸ್ಟಿಕ್ಸ್ ಸಿಬ್ಬಂದಿ ಇರುತ್ತಾರೆ. ವಯಸ್ಸಿನ ಮಿತಿ: ಪಡೆಗೆ 50 ವರ್ಷಕ್ಕಿಂತ ಕಡಿಮೆ ವಯಸ್ಸಿನ ಯುವ ಹಾಗೂ ದೈಹಿಕವಾಗಿ ಕ್ಷಮತೆಯುಳ್ಳ ಸಿಬ್ಬಂದಿಯನ್ನು ಮಾತ್ರ ರಕ್ಷಣಾ ಕಾರ್ಯಕರ್ತರಾಗಿ ನೇಮಿಸಿಕೊಳ್ಳಲಾಗುತ್ತದೆ.
ನೈಸರ್ಗಿಕ ಹಾಗೂ ಮಾನವ ನಿರ್ಮಿತ ವಿಕೋಪಗಳನ್ನು ದಕ್ಷತೆಯಿಂದ ಎದುರಿಸಲು ಎನ್‌ಡಿಆರ್‌ಎಫ್ ಮಾದರಿಯಲ್ಲೇ ರಾಜ್ಯ ಪಡೆಗಳನ್ನು ಸಜ್ಜುಗೊಳಿಸಲಾಗುವುದು. ಕಳೆದ ವರ್ಷ ಸಂಸತ್ತಿನಲ್ಲಿ ಅಂಗೀಕಾರಗೊಂಡ 'ವಿಕೋಪ ನಿರ್ವಹಣಾ ಕಾಯ್ದೆ, 2025'ರ ತಿದ್ದುಪಡಿಯ ಪ್ರಕಾರ, ಪ್ರತಿಯೊಂದು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶವು ತನ್ನದೇ ಆದ ವಿಶೇಷ ವಿಪತ್ತು ಸ್ಪಂದನಾ ಪಡೆಯನ್ನು ಹೊಂದಿರುವುದು ಕಡ್ಡಾಯವಾಗಿದೆ.
ಸಿಬ್ಬಂದಿ ಬಲ: ಪ್ರತಿಯೊಂದು ಎಸ್‌ಡಿಆರ್‌ಎಫ್ ಬಟಾಲಿಯನ್‌ನಲ್ಲಿ 600 ರಿಂದ 1200 ಸಿಬ್ಬಂದಿ ಇರಲಿದ್ದು, ಇವುಗಳ ಮುಖ್ಯಸ್ಥರಾಗಿ ಪೊಲೀಸ್ ಮಹಾನಿರ್ದೇಶಕರ (DGP) ಹಂತದ ಅಧಿಕಾರಿ ಇರುತ್ತಾರೆ.
ಸಣ್ಣಪುಟ್ಟ ವಿಕೋಪಗಳಿಗೆ ಎನ್‌ಡಿಆರ್‌ಎಫ್ ಮೇಲಿನ ಅವಲಂಬನೆಗೆ ಕಡಿತ
ಪ್ರಸ್ತುತ ಹಲವು ರಾಜ್ಯಗಳಲ್ಲಿ ಎಸ್‌ಡಿಆರ್‌ಎಫ್ ಪಡೆಗಳು ಕೇವಲ ಹೆಸರಿಗಷ್ಟೇ ಇರುವುದರಿಂದ ಸಣ್ಣಪುಟ್ಟ ವಿಪತ್ತುಗಳಿಗೂ ಎನ್‌ಡಿಆರ್‌ಎಫ್ ಮೇಲೆ ಅತಿಯಾಗಿ ಅವಲಂಬಿತವಾಗಬೇಕಾಗಿದೆ. ಹೊಸ ಮಾರ್ಗಸೂಚಿಯ ಪ್ರಕಾರ, ಸ್ಥಳೀಯ ಮಟ್ಟದಲ್ಲಿ ತಕ್ಷಣವೇ ಪ್ರಾಣರಕ್ಷಣೆ ಮಾಡಲು ಎಸ್‌ಡಿಆರ್‌ಎಫ್ ಶಕ್ತವಾಗಲಿದ್ದು, ಎನ್‌ಡಿಆರ್‌ಎಫ್ ಬೃಹತ್ ಮಟ್ಟದ (L-3) ಭೀಕರ ವಿಕೋಪಗಳ ಮೇಲೆ ಮಾತ್ರ ಗಮನಹರಿಸಲು ಸಾಧ್ಯವಾಗಲಿದೆ. ಈ ಪಡೆಗಳ ನೇಮಕಾತಿಗೆ ರಾಜ್ಯ ಸಶಸ್ತ್ರ ಪಡೆ, ಪೊಲೀಸ್, ಸಿಎಪಿಎಫ್, ಮಾಜಿ ಸೈನಿಕರು (ವಿಶೇಷವಾಗಿ ಎಂಜಿನಿಯರ್‌ಗಳು) ಮತ್ತು ಮಾಜಿ ಎನ್‌ಡಿಆರ್‌ಎಫ್ ಸಿಬ್ಬಂದಿಯನ್ನು ಪ್ರಮುಖವಾಗಿ ಪರಿಗಣಿಸಲಾಗುತ್ತದೆ.

