ಬೆಂಗಳೂರು: ಕರ್ನಾಟಕದಲ್ಲಿ(Karnataka) ನೆಲೆಸಿರುವ ಸಾರ್ವಜನಿಕರಿಗೆ ಸ್ಥಳೀಯ ಭಾಷೆಯಲ್ಲಿಯೇ ಸೇವೆ ನೀಡುವುದು ಮತ್ತು ಬ್ಯಾಂಕುಗಳಲ್ಲಿ ಕನ್ನಡಿಗರನ್ನೇ(Kannadigas) ನೇಮಕ ಮಾಡುವುದು ಪ್ರತಿಯೊಂದು ಸಂಸ್ಥೆಯ ಕರ್ತವ್ಯ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ(Shivaraja Thangadagi) ಪ್ರತಿಪಾದಿಸಿದ್ದಾರೆ.
ರಾಜ್ಯದ ಬ್ಯಾಂಕ್‌ಗಳಲ್ಲಿ ಸ್ಥಳೀಯ ಭಾಷೆ ಬಲ್ಲ ಅಧಿಕಾರಿಗಳನ್ನೇ ನೇಮಿಸಲು ಮುಂದಾಗಿರುವ 'ಬ್ಯಾಂಕ್ ಆಫ್ ಬರೋಡಾ' ನಿರ್ಧಾರವನ್ನು ಅವರು ಮುಕ್ತವಾಗಿ ಸ್ವಾಗತಿಸಿದ್ದಾರೆ. ಕನ್ನಡಪರ ಹೋರಾಟಗಾರರಿಗೆ ಅಭಿನಂದನೆ
ಕನ್ನಡ ಭಾಷಾ ಹಕ್ಕಿಗಾಗಿ ನಿರಂತರವಾಗಿ ಧ್ವನಿ ಎತ್ತಿದ ಕನ್ನಡಪರ ಸಂಘಟನೆಗಳು ಹಾಗೂ ಕನ್ನಡಿಗರಿಗೆ ಸಚಿವರು ಅಭಿನಂದನೆ ಸಲ್ಲಿಸಿದ್ದಾರೆ. "ಕನ್ನಡಿಗರು ತಮ್ಮದೇ ನೆಲದಲ್ಲಿ ಬ್ಯಾಂಕಿಂಗ್ ಸೇರಿದಂತೆ ಯಾವುದೇ ಸೇವೆ ಪಡೆಯುವಾಗ ಭಾಷೆಯ ಅಡೆತಡೆ ಎದುರಿಸಬಾರದು. ಕನ್ನಡದಲ್ಲಿ ಸೇವೆ ಪಡೆಯುವುದು ಕನ್ನಡಿಗರ ಹಕ್ಕು. ಅದನ್ನು ಖಾತ್ರಿಪಡಿಸುವುದು ಪ್ರತಿಯೊಂದು ಸಂಸ್ಥೆಯ ಆದ್ಯ ಕರ್ತವ್ಯವಾಗಿದೆ" ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಕೇಂದ್ರ ಸರ್ಕಾರಕ್ಕೆ ಒತ್ತಾಯ ಹಾಗೂ ಭಾಷಾ ಸ್ವಾಭಿಮಾನ
ರಾಜ್ಯದಲ್ಲಿ ಕಾರ್ಯನಿರ್ವಹಿಸುವ ಎಲ್ಲಾ ಬ್ಯಾಂಕ್‌ಗಳು ಕನ್ನಡಿಗರೊಂದಿಗೆ ಕನ್ನಡದಲ್ಲೇ ವ್ಯವಹರಿಸುವಂತೆ ಕೇಂದ್ರ ಹಣಕಾಸು ಸಚಿವಾಲಯ ಸೂಕ್ತ ನಿಯಮ ರೂಪಿಸಬೇಕು ಎಂದು ತಂಗಡಗಿ ಒತ್ತಾಯಿಸಿದ್ದಾರೆ.
"ಇದು ಕೇವಲ ಉದ್ಯೋಗದ ಪ್ರಶ್ನೆಯಲ್ಲ, ಬದಲಿಗೆ ಕನ್ನಡಿಗರ ಭಾಷಾ ಹಕ್ಕು ಮತ್ತು ಆತ್ಮಗೌರವದ ಸಂಕೇತ. ಕರ್ನಾಟಕದಲ್ಲಿ ಸೇವೆ ನೀಡುವ ಪ್ರತಿಯೊಂದು ಸಂಸ್ಥೆಯ ಸಿಬ್ಬಂದಿಗೂ ಕನ್ನಡ ತಿಳಿದಿರಲೇಬೇಕು. ಉದ್ಯೋಗ ನೇಮಕಾತಿಯಲ್ಲಿ ಕನ್ನಡ ಬಲ್ಲ ಅಭ್ಯರ್ಥಿಗಳಿಗೇ ಮೊದಲ ಆದ್ಯತೆ ನೀಡಬೇಕು" ಎಂದು ಸಚಿವರು ಖಡಕ್ ಆಗಿ ತಿಳಿಸಿದ್ದಾರೆ.

