ಬೆಂಗಳೂರು: ರಾಜ್ಯ ಸರ್ಕಾರದ 'ಉದ್ಯಾನವನಗಳ ಸಂರಕ್ಷಣೆ ತಿದ್ದುಪಡಿ ವಿಧೇಯಕ' ಖಂಡಿಸಿ ರಾಜಧಾನಿಯಲ್ಲಿ (Bengaluru ) ಪ್ರತಿಭಟನೆಗಳು ಜೋರಾಗಿವೆ. ಐತಿಹಾಸಿಕ ಲಾಲ್‌ಬಾಗ್‌ನಲ್ಲಿ ನಡೆದ 'ಲಾಲ್‌ಬಾಗ್ ಉಳಿಸಿ' ಅಭಿಯಾನದಲ್ಲಿ ಭಾಗವಹಿಸಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ(Shobhakarandlaje )ಅವರು ರಾಜ್ಯ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಸಾರ್ವಜನಿಕರ ಹಸಿರು ತಾಣಗಳನ್ನು ಬಲಿ ನೀಡಲು ಹೊರಟಿರುವ ಸರ್ಕಾರದ ವಿರುದ್ಧ ಕಿಡಿಕಾರಿದ ಸಚಿವೆ, "ನಿಮ್ಮ ರಿಯಲ್ ಎಸ್ಟೇಟ್ ಧೋರಣೆ ಮತ್ತು ದಂಧೆಯನ್ನು ಕನಕಪುರದಲ್ಲೇ ಇಟ್ಟುಕೊಳ್ಳಿ. ಪಾರ್ಕ್‌ಗಳನ್ನು ವಾಣಿಜ್ಯ ಉದ್ದೇಶಕ್ಕೆ ಬಳಸಲು ನಾವು ಬಿಡುವುದಿಲ್ಲ" ಎಂದು ಸಿಎಂ ಹಾಗೂ ಡಿಸಿಎಂಗೆ ನೇರ ಸವಾಲು ಹಾಕಿದರು. ಉದ್ಯಾನವನಗಳ ಶೇ. 5ರಷ್ಟು ಜಾಗವನ್ನು ಪರಭಾರೆ ಮಾಡಲು ಹಾಗೂ ಕಟ್ಟಡ ನಿರ್ಮಾಣಕ್ಕೆ ಅವಕಾಶ ನೀಡುವ ಈ ತಿದ್ದುಪಡಿ ಕಾಯಿದೆಯು ಬೆಂಗಳೂರಿನ ಪರಿಸರವನ್ನು ಸಂಪೂರ್ಣವಾಗಿ ನಾಶಪಡಿಸಲಿದೆ. ಕೇವಲ ರಿಯಲ್ ಎಸ್ಟೇಟ್ ಹಿತಾಸಕ್ತಿಗಾಗಿ ಈ ವಿಧೇಯಕವನ್ನು ತರಲಾಗಿದೆ ಎಂದು ಅವರು ಗಂಭೀರ ಆರೋಪ ಮಾಡಿದರು. ಈ ಕುರಿತು ಈಗಾಗಲೇ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರಿಗೆ ಪತ್ರ ಬರೆದಿರುವುದಾಗಿ ತಿಳಿಸಿದ ಅವರು, ಪರಿಸರ ವಿರೋಧಿ ಹಾಗೂ ಸಾರ್ವಜನಿಕ ಆಸ್ತಿಗೆ ಧಕ್ಕೆ ತರುವ ಈ ವಿಧೇಯಕಕ್ಕೆ ಯಾವುದೇ ಕಾರಣಕ್ಕೂ ಅಂಕಿತ ಹಾಕಬಾರದು ಎಂದು ವಿನಂತಿಸಿದ್ದಾರೆ.

