ನವದೆಹಲಿ: ಇರಾನ್ ಮತ್ತು ಅಮೆರಿಕ ನಡುವಿನ ಕದನ ವಿರಾಮ ಘೋಷಣೆಯಿಂದ ಹರ್ಮೂಜ್ ಜಲಸಂಧಿಯ ಬಿಕ್ಕಟ್ಟು ಸದ್ಯಕ್ಕೆ ನಿವಾರಣೆ ಆಗಿದೆ. ಇದರಿಂದ ಅನೇಕ ದೇಶಗಳು ನಿಟ್ಟುಸಿರು ಬಿಟ್ಟಿವೆ. ಭಾರತಕ್ಕೆ ಸಹ ಇದು ದೊಡ್ಡ ಮಟ್ಟದಲ್ಲಿ ಸಹಾಯ ಮಾಡುತ್ತದೆ. ಜಗತ್ತಿನ ತೈಲ ಮತ್ತು ಅನಿಲ ಪೂರೈಕೆ ವಿಚಾರವಾಗಿ ಇದ್ದ ಸಮಸ್ಯೆಗೆ ತಾತ್ಕಾಲಿಕ ಪರಿಹಾರ ಸಿಕ್ಕಿದೆ.
ಅದರೆ ಭಾರತಕ್ಕೆ ಮಾತ್ರ (Shocking) ಮತ್ತೊಂದು ದೊಡ್ಡ ಸಂಕಷ್ಟ ಎದುರಾಗಿದೆ. ಭಾರತವನ್ನ ಕಾಡಲಿದೆಯಾ ಬರಗಾಲ? ಈ ವರ್ಷ ದೇಶದಲ್ಲಿ ದೀರ್ಘಾವಧಿಯ ಸರಾಸರಿ (LPA) ಮಳೆಯ ಕೇವಲ ಶೇ. 94ರಷ್ಟು ಮಾತ್ರ ಮಳೆಯಾಗುವ ನಿರೀಕ್ಷೆಯಿದೆ. ಅಂದರೆ, ಜೂನ್‌ನಿಂದ ಸೆಪ್ಟೆಂಬರ್‌ವರೆಗೆ ಸರಾಸರಿ 868 ಮಿಮೀ ಮಳೆಯಾಗುವ ಬದಲು ಕೇವಲ 816 ಮಿಮೀ ಮಳೆಯಾಗಬಹುದು. ಜೂನ್‌ನಲ್ಲಿ ಉತ್ತಮ ಮಳೆಯಾಗಿ (ಶೇ. 101) ಮಳೆಗಾಲ ಆರಂಭವಾದರೂ, ಜುಲೈ (ಶೇ. 95), ಆಗಸ್ಟ್ (ಶೇ. 92) ಮತ್ತು ಸೆಪ್ಟೆಂಬರ್ (ಶೇ. 89) ತಿಂಗಳುಗಳಲ್ಲಿ ಮಳೆ ಕ್ರಮೇಣ ಕಡಿಮೆಯಾಗುತ್ತಾ ಹೋಗಲಿದೆ. ರೈತರ ಪಾಲಿನ ವಿಲನ್ 'ಎಲ್ ನಿನೊ' ಮಳೆಯ ಈ ಕುಸಿತಕ್ಕೆ ಪೆಸಿಫಿಕ್ ಮಹಾಸಾಗರದಲ್ಲಿ ಮತ್ತೆ ಸಕ್ರಿಯವಾಗುತ್ತಿರುವ 'ಎಲ್ ನಿನೊ' ಪ್ರಭಾವವೇ ಮುಖ್ಯ ಕಾರಣ ಎನ್ನಲಾಗಿದೆ. ಮುಂಗಾರಿನ ಆರಂಭಿಕ ಹಂತದಲ್ಲಿ ಇದು ಸಾಧಾರಣವಾಗಿದ್ದರೂ, ಮಳೆಗಾಲದ ದ್ವಿತೀಯಾರ್ಧದಲ್ಲಿ ಅಂದರೆ ಆಗಸ್ಟ್ ಮತ್ತು ಸೆಪ್ಟೆಂಬರ್‌ನಲ್ಲಿ ಹೆಚ್ಚು ಬಲಗೊಳ್ಳಲಿದೆ. ಇದು ಮಾನ್ಸೂನ್ ಮಾರುತಗಳನ್ನು ದುರ್ಬಲಗೊಳಿಸುವುದರಿಂದ ದೇಶದ ವಾಯುವ್ಯ ಮತ್ತು ಮಧ್ಯ ಭಾರತದ ರಾಜ್ಯಗಳಲ್ಲಿ ಮಳೆಯ ಕೊರತೆ ತೀವ್ರವಾಗಿ ಕಾಡಲಿದೆ. ಆದರೆ ಬಿಹಾರ, ಪಶ್ಚಿಮ ಬಂಗಾಳದಂತಹ ಪೂರ್ವ ರಾಜ್ಯಗಳಲ್ಲಿ ಮಳೆ ಉತ್ತಮವಾಗಿರುವ ಸಾಧ್ಯತೆಯಿದೆ. ಆರ್ಥಿಕವಾಗಿ ಭಾರತಕ್ಕೆ ಹೊಡೆತ
ಖಾಸಗಿ ಹವಾಮಾನ ಮುನ್ಸೂಚನಾ ಸಂಸ್ಥೆ 'ಸ್ಕೈಮೆಟ್ ವೆದರ್' ನೀಡಿರುವ ಎಚ್ಚರಿಕೆ ಪ್ರಕಾರ, ಈ ವರ್ಷ ದೇಶದಲ್ಲಿ ಮುಂಗಾರು ಮಳೆ ಕ್ಷೀಣಿಸಲಿದ್ದು, ಬರಗಾಲದ ಭೀತಿ ಎದುರಾಗಲಿದೆ ಎನ್ನಲಾಗುತ್ತಿದೆ. ಇದರಿಂದ ಭಾರತದ ಕೃಷಿ ವಲಯವನ್ನು ನಂಬಿರುವ ಸುಮಾರು 400 ಮಿಲಿಯನ್ (40 ಕೋಟಿ) ಜನರು ಪರದಾಡಬೇಕಾಗುತ್ತದೆ. ಮಾರ್ಚ್ ಮತ್ತು ಏಪ್ರಿಲ್‌ನಲ್ಲಿ ತಂಪಾದ ಹವಾಮಾನವಿದ್ದರೂ, ನಿಜವಾದ ಮಳೆಗಾಲ ಆರಂಭವಾದಾಗ ಮಳೆಯ ಕೊರತೆ ಕಾಡಲಿದೆ. 2026ರ ಮುಂಗಾರು ಹಂಗಾಮಿನಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಲಿದ್ದು, ಬರಗಾಲದ ಸಾಧ್ಯತೆ ಶೇ. 30ರಷ್ಟಿದೆ ಎಂದು ಹೇಳಲಾಗುತ್ತಿದೆ.
ಭಾರತದ ಕೃಷಿ ಭೂಮಿಯ ಶೇ. 51ರಷ್ಟು ಭಾಗ ಮಳೆಯನ್ನೇ ಅವಲಂಬಿಸಿದೆ. ಮಳೆ ಕೊರತೆಯಾದಲ್ಲಿ ಭತ್ತ ಸೇರಿದಂತೆ ಪ್ರಮುಖ ಬೆಳೆಗಳ ಉತ್ಪಾದನೆ ಕುಂಠಿತಗೊಳ್ಳಲಿದ್ದು, ಇದು ಆಹಾರ ಪದಾರ್ಥಗಳ ಬೆಲೆ ಏರಿಕೆಗೆ ಕಾರಣವಾಗಬಹುದು. ಗ್ರಾಮೀಣ ಭಾಗದ ಆರ್ಥಿಕತೆಯ ಮೇಲೆ ಇದು ನೇರ ಪರಿಣಾಮ ಬೀರಲಿದ್ದು, ಇಂಧನ ಮತ್ತು ರಸಗೊಬ್ಬರ ಪೂರೈಕೆಯ ಮೇಲೂ ಯುದ್ಧದ ಪ್ರಭಾವ ಇರುವುದರಿಂದ ರೈತರ ಪರಿಸ್ಥಿತಿ ಮತ್ತಷ್ಟು ಹದಗೆಡುವ ಆತಂಕ ಮೂಡಿದೆ. ಭಾರತೀಯ ಹವಾಮಾನ ಇಲಾಖೆ (IMD) ಕೂಡ ಜೂನ್ ನಂತರ ಎಲ್ ನಿನೊ ಪ್ರಭಾವ ಹೆಚ್ಚಾಗುವ ಬಗ್ಗೆ ಸಮ್ಮತಿ ಸೂಚಿಸಿದ್ದು, ಏಪ್ರಿಲ್ 15ರೊಳಗೆ ತನ್ನ ಅಧಿಕೃತ ವರದಿಯನ್ನು ಬಿಡುಗಡೆ ಮಾಡಲಿದೆ

