ಆಂಧ್ರಪ್ರದೇಶ : ಇಲ್ಲಿನ ಪಲ್ನಾಡು ಜಿಲ್ಲೆಯ ಮಾಚೆರ್ಲಾ (Macherla) ಪಟ್ಟಣದಲ್ಲಿ ಮನಕಲಕುವ ಘಟನೆಯೊಂದು ನಡೆದಿದ್ದು, ಒಂಟಿಯಾಗಿದ್ದ ಸರ್ಕಾರಿ ಮಹಿಳಾ ಉದ್ಯೋಗಿಯ (Woman) ಮೇಲೆ ದುಷ್ಕರ್ಮಿಯೊಬ್ಬ ಕ್ರೂರವಾಗಿ ದೌರ್ಜನ್ಯ (Assault) ಎಸಗಿದ್ದಾನೆ. ಕುಡಿಯಲು ನೀರು ಕೇಳುವ ನೆಪದಲ್ಲಿ ಮನೆಗೆ ನುಗ್ಗಿದ ಅಪರಿಚಿತ ವ್ಯಕ್ತಿ, ಆಕೆಯನ್ನು ಕಟ್ಟಿಹಾಕಿ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾನೆ.
ಈ ಸಂದರ್ಭದಲ್ಲಿ ಸಂತ್ರಸ್ತೆಯು ತನ್ನ ರಕ್ಷಣೆಗಾಗಿ ತನಗೆ ಎಚ್‌ಐವಿ ಸೋಂಕಿದೆ ಎಂದು ಸುಳ್ಳು ಹೇಳಿದ್ದಾಳೆ. ಇದರಿಂದ ಕುಪಿತಗೊಂಡ ಆರೋಪಿ, ಕಬ್ಬಿಣದ ಸಲಾಕೆಯನ್ನು ಬಳಸಿ ಆಕೆಯ ಮೇಲೆ ವಿಕೃತವಾಗಿ ಹಲ್ಲೆ ನಡೆಸಿ, ಆಕೆಯ ಮರ್ಮಾಂಗಕ್ಕೆ ರಾಡ್ ತುರುಕಿ ಅಲ್ಲಿಂದ ಪರಾರಿಯಾಗಿದ್ದಾನೆ. ತೀವ್ರ ಹಲ್ಲೆಯಿಂದ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ. ಈ ಘಟನೆಯು ಸ್ಥಳೀಯರಲ್ಲಿ ಆತಂಕ ಮೂಡಿಸಿದ್ದು, ಪೊಲೀಸರು ಆರೋಪಿಯ ಪತ್ತೆಗಾಗಿ ತೀವ್ರ ತನಿಖೆ ಕೈಗೊಂಡಿದ್ದಾರೆ. ಸಂತ್ರಸ್ತೆ ಫೋನ್ ಕರೆ ಸ್ವೀಕರಿಸದಿದ್ದಾಗ ಸಂಶಯಗೊಂಡ ಆಕೆಯ ಸಂಬಂಧಿ, ತಕ್ಷಣ ಪರಿಚಯಸ್ಥರನ್ನು ಮನೆಗೆ ಕಳುಹಿಸಿದ್ದಾನೆ. ಸ್ಥಳೀಯರು ಮನೆಗೆ ಭೇಟಿ ನೀಡಿದಾಗ ಮಹಿಳೆ ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡುಬಂದಿದೆ. ಕೂಡಲೇ ಆಕೆಯನ್ನು ಆಸ್ಪತ್ರೆಗೆ ಸಾಗಿಸಿ ಪ್ರಾಣಾಪಾಯದಿಂದ ಪಾರು ಮಾಡಲಾಗಿದೆ.

