ಮುಂಬೈ: ಚರ್ಚ್‌ಗೇಟ್‌ನಿಂದ ನಲ್ಲಸೋಪಾರಾಗೆ ಸಂಚರಿಸುತ್ತಿದ್ದ ಮುಂಬೈ (Mumbai) ಲೋಕಲ್ ರೈಲಿನಲ್ಲಿ (Local train) ಜೂನ್ 23ರಂದು ತಡರಾತ್ರಿ ಈ ದಾರುಣ ಘಟನೆ ಸಂಭವಿಸಿದೆ. ಭಾರಿ ಮಳೆಯಾಗುತ್ತಿದ್ದ ಕಾರಣ ರೈಲಿನ ಬೋಗಿಯ ಬಾಗಿಲು ಮುಚ್ಚುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಯಾಣಿಕರ ನಡುವೆ ವಾಗ್ವಾದ ನಡೆದಿದೆ.
ಈ ಜಗಳ ವಿಕೋಪಕ್ಕೆ ತಿರುಗಿ, 22 ವರ್ಷದ ಮಯಾಂಕ್ ಲೋಹರ್ ಎಂಬ ಯುವಕನ ಹೊಟ್ಟೆಗೆ ಸಹಪ್ರಯಾಣಿಕನೊಬ್ಬ ಚಾಕುವಿನಿಂದ ಇರಿದಿದ್ದಾನೆ (Stabbed). ಅಂಧೇರಿ ಮತ್ತು ಬೋರಿವಲಿ ನಿಲ್ದಾಣಗಳ ಮಧ್ಯೆ ಚಲಿಸುತ್ತಿದ್ದ ರೈಲಿನಲ್ಲಿ ಈ ಘಟನೆ ನಡೆದಿದ್ದು, ರೈಲು ಬೋರಿವಲಿ ನಿಲ್ದಾಣ ತಲುಪುತ್ತಿದ್ದಂತೆ ಅದು ಪೂರ್ಣವಾಗಿ ನಿಲ್ಲುವ ಮುನ್ನವೇ ಆರೋಪಿ ಅಲ್ಲಿಂದ ಇಳಿದು ಪರಾರಿಯಾಗಿದ್ದಾನೆ. ಈ ಘಟನೆ ನಡೆದ ತಕ್ಷಣ ಪಶ್ಚಿಮ ರೈಲ್ವೆ ಇಲಾಖೆ ಹಾಗೂ ಭದ್ರತಾ ಪಡೆಗಳು ರೈಲು ಬೋರಿವಲಿ ತಲುಪುತ್ತಿದ್ದಂತೆ, ಕೇವಲ ಮೂರೇ ನಿಮಿಷಗಳಲ್ಲಿ ಅಂದರೆ 11:07ಕ್ಕೆ ರೈಲ್ವೆ ರಕ್ಷಣಾ ಪಡೆ (RPF), ಸರ್ಕಾರಿ ರೈಲ್ವೆ ಪೊಲೀಸ್ (GRP) ಮತ್ತು ವೈದ್ಯಕೀಯ ತಂಡ ಸ್ಥಳಕ್ಕೆ ಧಾವಿಸಿವೆ. 11:12ಕ್ಕೆ ಗಾಯಾಳುವನ್ನು ತುರ್ತು ಚಿಕಿತ್ಸೆಗಾಗಿ ಕರೆದೊಯ್ಯಲಾಯಿತಾದರೂ, 11:22ರ ಸುಮಾರಿಗೆ ನಿಲ್ದಾಣದ ತುರ್ತು ಚಿಕಿತ್ಸಾ ಕೊಠಡಿಯ ವೈದ್ಯರು ಯುವಕ ಮೃತಪಟ್ಟಿರುವುದಾಗಿ ಘೋಷಿಸಿದರು. ಆ ಬಳಿಕ 11:42ಕ್ಕೆ ಮೃತದೇಹವನ್ನು ಕಾಂದಿವಲಿಯ ಶತಾಬ್ದಿ ಆಸ್ಪತ್ರೆಗೆ ರವಾನಿಸಲಾಗಿದೆ. ಸದ್ಯ ಜಿಆರ್‌ಪಿ ಮತ್ತು ಆರ್‌ಪಿಎಫ್ ಅಧಿಕಾರಿಗಳು ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿದ್ದು, ರೈಲ್ವೆ ನಿಲ್ದಾಣದ ಸಿಸಿಟಿವಿ ದೃಶ್ಯಾವಳಿಗಳನ್ನು ವಶಕ್ಕೆ ಪಡೆದುಕೊಂಡು ಆರೋಪಿಗಾಗಿ ತೀವ್ರ ಹುಡುಕಾಟ ನಡೆಸುತ್ತಿದ್ದಾರೆ. ಮೃತರ ಕುಟುಂಬಕ್ಕೆ ಪಶ್ಚಿಮ ರೈಲ್ವೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದು, ಪ್ರಯಾಣಿಕರ ಸುರಕ್ಷತೆಗೆ ಬದ್ಧವಾಗಿರುವುದಾಗಿ ಪುನರುಚ್ಚರಿಸಿದ್ದಾರೆ.

