ಮುಂಬೈ : ಮುಂಬೈನಲ್ಲಿ (Mumbai) ವರುಣನ ಆರ್ಭಟ ಮುಂದುವರಿದಿದ್ದು, ಭಾರಿ ಮಳೆಯಿಂದಾಗಿ (Heavy rain) ಭಾನುವಾರ ರಾತ್ರಿ ನಗರದ ಮಂಖುರ್ದ್ ಪ್ರದೇಶದಲ್ಲಿ ನಾಲ್ಕು ಅಂತಸ್ತಿನ ಚಾಳ್ (ವಸತಿ ಗೃಹ) ಭಾಗಶಃ ಕುಸಿದು (Collapse) ಬಿದ್ದಿದೆ. ಈ ಭೀಕರ ಅವಘಡದಲ್ಲಿ ಆರು ಮಂದಿ ಉಸಿರುಗಟ್ಟಿ ( 6 killed) ಸಾವನ್ನಪ್ಪಿದ್ದಾರೆ.
ಮಂಖುರ್ದ್‌ನ ಜನತಾ ನಗರದಲ್ಲಿರುವ ಹನುಮಾನ್ ಮಂದಿರದ ಹಿಂಭಾಗದ 5ನೇ ನಂಬರ್ ಚಾಲ್‌ನಲ್ಲಿ ರಾತ್ರಿ ಸುಮಾರು 8:30ರ ವೇಳೆಗೆ ಈ ಘಟನೆ ನಡೆದಿದೆ. ನೆಲಮಹಡಿ ಸೇರಿದಂತೆ ಒಟ್ಟು ನಾಲ್ಕು ಅಂತಸ್ತು ಹೊಂದಿದ್ದ ಈ ಕಟ್ಟಡದ ಕೆಲವು ವಸತಿ ಮನೆಗಳು ಇದ್ದಕ್ಕಿದ್ದಂತೆ ಕುಸಿದು ಬಿದ್ದಿವೆ. ಇದರ ಪರಿಣಾಮವಾಗಿ ಕಟ್ಟಡದಲ್ಲಿದ್ದ ಹಲವರು ಅವಶೇಷಗಳ ಅಡಿಯಲ್ಲಿ ಸಿಲುಕಿಕೊಂಡರು. ಘಟನೆ ನಡೆದ ತಕ್ಷಣವೇ ಸ್ಥಳಕ್ಕೆ ಧಾವಿಸಿದ ಮುಂಬೈ ಅಗ್ನಿಶಾಮಕ ದಳ, ಮುಂಬೈ ಪೊಲೀಸರು ಹಾಗೂ ಬೃಹನ್ಮುಂಬೈ ಮಹಾನಗರ ಪಾಲಿಕೆ (ಬಿಎಂಸಿ) ಸಿಬ್ಬಂದಿ ಜಂಟಿಯಾಗಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದರು. ಅವಶೇಷಗಳ ಅಡಿ ಸಿಲುಕಿದ್ದವರನ್ನು ಹೊರತೆಗೆಯಲು ತೀವ್ರ ಶ್ರಮ ವಹಿಸಲಾಯಿತು. 108 ಆಂಬ್ಯುಲೆನ್ಸ್ ಮೂಲಕ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ರಕ್ಷಣೆ ಪ್ರಕ್ರಿಯೆ ಚುರುಕಾಗಿ ಸಾಗಿದೆ. ಮುಂಬೈನಲ್ಲಿ ಕಳೆದ 24 ಗಂಟೆಗಳಿಂದ ಸತತವಾಗಿ ಸುರಿಯುತ್ತಿರುವ ಮುಂಗಾರು ಮಳೆ ಜನಜೀವನವನ್ನು ಸಂಪೂರ್ಣವಾಗಿ ಅಸ್ತವ್ಯಸ್ತಗೊಳಿಸಿದೆ. ನಗರದ ಹಲವೆಡೆ ಮರಗಳು ಉರುಳಿಬಿದ್ದ ಘಟನೆಗಳು ವರದಿಯಾಗಿದ್ದು, ಕುರ್ಲಾದಲ್ಲಿ ಅಂಗಡಿಯೊಂದರ ಮೇಲೆ ಬೃಹತ್ ಮರ ಬಿದ್ದು 63 ವರ್ಷದ ವೃದ್ಧರೊಬ್ಬರು ಪ್ರಾಣ ಕಳೆದುಕೊಂಡಿದ್ದಾರೆ. ಇನ್ನು ಬಾಂದ್ರಾ ಈಸ್ಟ್ ಮತ್ತು ವರ್ಲಿ ಭಾಗದಲ್ಲಿಯೂ ಚಲಿಸುತ್ತಿದ್ದ ಕಾರು ಹಾಗೂ ರಸ್ತೆಯ ಮೇಲೆ ಮರಗಳು ಬಿದ್ದು ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಮರಗಳನ್ನು ತೆರವುಗೊಳಿಸಿ ಸಂಚಾರ ಯೋಗ್ಯ ಮಾಡಲು ಅಧಿಕಾರಿಗಳು ಶ್ರಮಿಸುತ್ತಿದ್ದಾರೆ. ಹವಾಮಾನ ಇಲಾಖೆಯು ಮುಂಬೈಗೆ ಈಗಾಗಲೇ 'ರೆಡ್ ಅಲರ್ಟ್' ಘೋಷಿಸಿದ್ದು, ಹಲವು ಭಾಗಗಳಲ್ಲಿ ಒಂದೇ ದಿನದಲ್ಲಿ 200 ರಿಂದ 300 ಮಿಲಿಮೀಟರ್‌ನಷ್ಟು ದಾಖಲೆ ಪ್ರಮಾಣದ ಮಳೆಯಾಗಿದೆ. ಮುಂಬರುವ ಗಂಟೆಗಳಲ್ಲೂ ಭಾರಿ ಮಳೆ ಮುಂದುವರಿಯುವ ಮುನ್ಸೂಚನೆ ಇರುವುದರಿಂದ ಮುಂಬೈ ರಸ್ತೆಗಳು ಜಲಾವೃತಗೊಂಡಿದ್ದು, ವಾಹನ ಸವಾರರು ತೀವ್ರ ಟ್ರಾಫಿಕ್ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಸಾರ್ವಜನಿಕರು ಎಚ್ಚರಿಕೆಯಿಂದ ಇರುವಂತೆ ಬಿಎಂಸಿ ಅಧಿಕಾರಿಗಳು ಮನವಿ ಮಾಡಿದ್ದಾರೆ.

