ಸೂರತ್: ಮೊಬೈಲ್ ಬಳಕೆಯಲ್ಲಿ ಮಗ್ನರಾಗಿದ್ದ ತಾಯಿಯ ನಿರ್ಲಕ್ಷ್ಯದಿಂದಾಗಿ ಚಲಿಸುತ್ತಿದ್ದ ಬಸ್ಸಿನಿಂದ ಮೂರು ವರ್ಷದ ಮಗು (Child falls ) ರಸ್ತೆಗೆ ಬಿದ್ದಿದೆ. ಆದರೆ, ಚಾಲಕನ ಸಮಯೋಚಿತ ಎಚ್ಚರಿಕೆಯಿಂದ ಮಗು ಪ್ರಾಣಾಪಾಯದಿಂದ ಪಾರಾಗಿರುವ (viral) ರೋಚಕ ಘಟನೆ ಸೂರತ್‌ನಲ್ಲಿ (Surat) ನಡೆದಿದೆ.
ಫೋನ್ ಮಾತುಕತೆಯಲ್ಲಿ ಮಗ್ನರಾಗಿದ್ದ ತಾಯಿ
ಸೌರಾಷ್ಟ್ರದಿಂದ ಸೂರತ್‌ಗೆ ಪ್ರಯಾಣಿಸುತ್ತಿದ್ದ ಖಾಸಗಿ ಐಷಾರಾಮಿ ಬಸ್ಸಿನಲ್ಲಿ ಮಹಿಳೆಯೊಬ್ಬರು ತಮ್ಮ ಇಬ್ಬರು ಮಕ್ಕಳೊಂದಿಗೆ ಪ್ರಯಾಣಿಸುತ್ತಿದ್ದರು. ಪ್ರಯಾಣದ ವೇಳೆ ಮಹಿಳೆ ಮೊಬೈಲ್ ಫೋನ್‌ನಲ್ಲಿ ಮಾತನಾಡಲು ತೀವ್ರವಾಗಿ ಮಗ್ನರಾಗಿದ್ದರಿಂದ ಮಕ್ಕಳ ಮೇಲಿನ ಗಮನ ತಪ್ಪಿತ್ತು.
ತಾಯಿಯ ಈ ನಿರ್ಲಕ್ಷ್ಯದ ನಡುವೆ ಪುಟ್ಟ ಬಾಲಕ, ಬಸ್ಸಿನ ಸೀಟುಗಳ ನಡುವೆ ನಡೆದುಕೊಂಡು ಹೋಗಿ ನೇರವಾಗಿ ಚಾಲಕರ ಕ್ಯಾಬಿನ್ ಬಳಿಗೆ ತಲುಪಿದ್ದಾನೆ. ಅಲ್ಲಿ ಸೀಟಿನ ಮೇಲೆ ಹತ್ತಿ ಕುಳಿತುಕೊಳ್ಳಲು ಯತ್ನಿಸುವಾಗ ಆಟವಾಡುತ್ತಾ ಸಮತೋಲನ ಕಳೆದುಕೊಂಡು, ಬಸ್ಸಿನ ಬಾಗಿಲಿನ ಹತ್ತಿರದಿಂದ ಚಲಿಸುತ್ತಿದ್ದ ವಾಹನದಿಂದ ರಸ್ತೆಗೆ ಉರುಳಿಬಿದ್ದಿದ್ದಾನೆ.
ಚಾಲಕನ ಜಾಣ್ಮೆ
ಮುಂಭಾಗದಲ್ಲಿ ಮಗು ತೆರಳುವುದನ್ನು ಗಮನಿಸಿದ ತಕ್ಷಣ ಚಾಲಕ ಎಚ್ಚೆತ್ತುಕೊಂಡಿದ್ದಾರೆ. ಬಸ್ ಚಲಾಯಿಸುತ್ತಲೇ ಮಗುವನ್ನು ಹಿಡಿಯಲು ಕೈ ಚಾಚಿದರೂ ಅಂತರ ಹೆಚ್ಚಿದ್ದರಿಂದ ಸಾಧ್ಯವಾಗಿಲ್ಲ. ಕೂಡಲೇ ಎಚ್ಚೆತ್ತ ಚಾಲಕ ಯಾವುದೇ ಆತಂಕಕ್ಕೆ ಒಳಗಾಗದೆ, ಗಂಟೆಗೆ 25-30 ಕಿ.ಮೀ ವೇಗದಲ್ಲಿದ್ದ ಬಸ್ಸಿಗೆ ತಕ್ಷಣವೇ ಬ್ರೇಕ್ ಹಾಕಿ ನಿಲ್ಲಿಸಿದ್ದಾರೆ. ಬಸ್ ಕಡಿಮೆ ವೇಗದಲ್ಲಿದ್ದುದ್ದು ಮತ್ತು ಚಾಲಕ ಸಮಯೋಚಿತವಾಗಿ ಬ್ರೇಕ್ ಹಾಕಿದ್ದರಿಂದ ಮಗುವಿಗೆ ಯಾವುದೇ ಗಂಭೀರ ಗಾಯಗಳಾಗಿಲ್ಲ, ಕೇವಲ ಸಣ್ಣಪುಟ್ಟ ಗೀರುಗಳು ಮಾತ್ರ ಉಂಟಾಗಿವೆ.
ಬಸ್ ಹಿಂದೆ ಬರುತ್ತಿದ್ದ ಕಾರಿನಲ್ಲಿದ್ದ ವೈದ್ಯರೊಬ್ಬರು ಕೂಡಲೇ ಸ್ಥಳಕ್ಕೆ ಧಾವಿಸಿ ಮಗುವನ್ನು ಪ್ರಾಥಮಿಕ ತಪಾಸಣೆಗೆ ಒಳಪಡಿಸಿದ್ದು, ಮಗು ಸಂಪೂರ್ಣ ಸುರಕ್ಷಿತವಾಗಿದೆ ಎಂದು ಖಚಿತಪಡಿಸಿದ್ದಾರೆ. ಬಸ್ಸಿನಲ್ಲಿದ್ದ ಸಿಸಿಟಿವಿ ದೃಶ್ಯಾವಳಿಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪ್ರಯಾಣದ ವೇಳೆ ಪೋಷಕರು ಮಕ್ಕಳ ಬಗ್ಗೆ ಎಷ್ಟು ಎಚ್ಚರವಹಿಸಬೇಕು ಎಂಬುದಕ್ಕೆ ಈ ಘಟನೆ ಕನ್ನಡಿ ಹಿಡಿದಿದೆ.

