ಮಧ್ಯಪ್ರದೇಶ : ಇಲ್ಲಿನ (Madhya Pradesh) ದಿಂಡೋರಿ ಜಿಲ್ಲೆಯ ಪಡಾರಿಯಾ ಗ್ರಾಮದಲ್ಲಿ ಭಯಾನಕ ಘಟನೆ ನಡೆದಿದೆ. ರಸಗುಲ್ಲಾ (Rasgulla) ಎಂದು ನಂಬಿಸಿ ನೀಡಿದ ನಾಟಿ ಬಾಂಬ್ (Country bomb) ಬಾಯಿಯಲ್ಲಿ ಸ್ಫೋಟಗೊಂಡು ರಾಜೇಂದ್ರ ಬರೋಟಿಯಾ ಎಂಬುವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಈ ಘಟನೆ ನವೆಂಬರ್ 10ರ ಮಂಗಳವಾರ ತಡರಾತ್ರಿ ನಡೆದಿದೆ.
ರಾಜೇಂದ್ರ ತಮ್ಮ ಮನೆಯಲ್ಲಿ ಕುಳಿತಿದ್ದಾಗ ರಾಮ್ ಭಗತ್ ಬರೋಟಿಯಾ ಬಂದಿದ್ದರು. ಮಾತುಕತೆ ನಡುವೆ ಆತ ಒಂದು ವಸ್ತುವನ್ನು ರಸಗುಲ್ಲಾ ಎಂದು ಹೇಳಿ ರಾಜೇಂದ್ರನ ಕೈಗಿಟ್ಟಿದ್ದಾನೆ. ಕತ್ತಲೆಯಲ್ಲಿ ಅದನ್ನು ಸರಿಯಾಗಿ ಗುರುತಿಸಲಾಗದ ರಾಜೇಂದ್ರ ಅದನ್ನು ಬಾಯಿಗಿಟ್ಟು ಕಚ್ಚುತ್ತಿದ್ದಂತೆ ಭಾರಿ ಸ್ಫೋಟ ಸಂಭವಿಸಿದೆ. ಪ್ರಾಣಿಗಳನ್ನು ಕೊಲ್ಲಲು ಬಳಸುವ ಬಾಂಬ್ ಇದಾಗಿತ್ತು ಎಂದು ಪತ್ನಿ ಸುಶೀಲಾ ಬಾಯಿ ತಿಳಿಸಿದ್ದಾರೆ.
ಈ ಘಟನೆ ಬಳಿಕ ಪೊಲೀಸರು ಸ್ಥಳಕ್ಕೆ ತಲುಪಿ ರಾಮ್ ಭಗತ್ ಸೇರಿ ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ. ಒಬ್ಬ ಹುಡುಗ ಈ ಬಾಂಬ್ ನೀಡಿದ್ದ ಎಂದು ಆರೋಪಿ ಹೇಳಿಕೊಂಡಿದ್ದು, ಆ ಹುಡುಗನನ್ನೂ ವಿಚಾರಣೆ ನಡೆಸಲಾಗುತ್ತಿದೆ. ವೈಯಕ್ತಿಕ ದ್ವೇಷದ ಕೋನದಿಂದಲೂ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

