ವಿಜಯನಗರ: ವಿಜಯನಗರ (Vijayanagar )ಸಹೋದರನ ಸಾವಿನ ಸುದ್ದಿ ಕೇಳಿ ಆಘಾತ ತಾಳಲಾರದೆ ಅಕ್ಕನೂ ಹೃದಯಾಘಾತದಿಂದ (Heart attack )ಮೃತಪಟ್ಟ ಅತ್ಯಂತ ಕರುಣಾಜನಕ ಘಟನೆ ಜಿಲ್ಲೆಯ ಮುಂಡರಗಿ ಬೂದಿಹಾಳದಲ್ಲಿ ನಡೆದಿದೆ.
ಹಿರೇಮಲ್ಲನಕೆರೆ ಲೈನ್ ಮೆನ್ ಎಸ್. ನಿಂಗಪ್ಪ (35) ಶನಿವಾರ ಕರ್ತವ್ಯ ಮುಗಿಸಿ ಬೈಕ್‌ನಲ್ಲಿ ವಾಪಸ್ ತೆರಳುವಾಗ ಕಾಗನೂರು ಸಮೀಪ ನಾಯಿ ಅಡ್ಡ ಬಂದಿದೆ.
ಈ ವೇಳೆ ನಿಯಂತ್ರಣ ತಪ್ಪಿ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಇತ್ತ ಹೂವಿನಹಡಗಲಿ ತಹಶೀಲ್ದಾರ್ ಕಚೇರಿಯಲ್ಲಿ ದ್ವಿತೀಯ ದರ್ಜೆ ಸಹಾಯಕಿಯಾಗಿದ್ದ ಅಕ್ಕ ಮಲ್ಲಮ್ಮ (48) ಅನಾರೋಗ್ಯದ ಕಾರಣ ರಜೆಯಲ್ಲಿದ್ದರು.
ಮುನ್ನಾದಿನವಷ್ಟೇ ತಮ್ಮ ನಿಂಗಪ್ಪ ಅಕ್ಕನನ್ನು ಆಸ್ಪತ್ರೆಗೆ ಕರೆದೊಯ್ದು ಆರೈಕೆ ಮಾಡಿ ಮನೆಗೆ ಬಿಟ್ಟಿದ್ದರು. ಆದರೆ, ಶನಿವಾರ ರಾತ್ರಿ ತಮ್ಮನ ಅಪಘಾತದ ದಾರುಣ ಸುದ್ದಿ ಕೇಳಿದ ಮಲ್ಲಮ್ಮ ಅವರಿಗೆ ತೀವ್ರ ಹೃದಯಾಘಾತವಾಗಿದ್ದು, ಕೊನೆಯುಸಿರೆಳೆದಿದ್ದಾರೆ.
ಭಾನುವಾರ ಇಬ್ಬರ ಅಂತ್ಯಕ್ರಿಯೆಯೂ ಒಂದೇ ಸ್ಮಶಾನದಲ್ಲಿ ನೆರವೇರಿದ್ದು, ವಿಧಿಯ ಕ್ರೂರ ಆಟಕ್ಕೆ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಕಂಬನಿ ಮಿಡಿದಿದ್ದಾರೆ.

