ಬೆಂಗಳೂರು: ಕನ್ನಡ ಚಿತ್ರರಂಗದ (Sandalwood) ಖ್ಯಾತ ನಟಿ ಹಾಗೂ ಬಿಗ್ ಬಾಸ್ ಮಾಜಿ ಸ್ಪರ್ಧಿ ಶುಭಾ ಪೂಂಜಾ (Shubha Poonja) ಸಂಸಾರಿಕ ಜೀವನದಲ್ಲಿ ಬಿರುಗಾಳಿ ಎದ್ದಿದೆಯೇ? ಅವರ ದಾಂಪತ್ಯ ಜೀವನ ಮುರಿದು ಬೀಳುವ ಹಂತಕ್ಕೆ ತಲುಪಿದೆಯೇ? ಇಂತಹದೊಂದು ಗಂಭೀರ ಚರ್ಚೆ ಈಗ ಸ್ಯಾಂಡಲ್‌ವುಡ್ ಅಂಗಳದಲ್ಲಿ ಜೋರಾಗಿ ಕೇಳಿಬರುತ್ತಿದೆ.
ನಟಿ ಶುಭಾ ಪೂಂಜಾ ತಮ್ಮ ಪತಿ ಸುಮಂತ್ ಬಿಲ್ಲವ ಅವರಿಂದ ವಿಚ್ಛೇದನ (ಡಿವೋರ್ಸ್) ಪಡೆಯಲು ಕೋರ್ಟ್ ಮೆಟ್ಟಿಲೇರಿದ್ದಾರೆ ಎಂಬ ಸುದ್ದಿ ಈಗ ಎಲ್ಲೆಡೆ ಹರಿದಾಡುತ್ತಿದೆ.
ಫ್ಯಾಮಿಲಿ ಕೋರ್ಟ್‌ಗೆ ದಂಪತಿ ಆಗಮನ..?
ವಿಶ್ವಸನೀಯ ಮೂಲಗಳ ಪ್ರಕಾರ, ನಟಿ ಶುಭಾ ಪೂಂಜಾ ಹಾಗೂ ಅವರ ಪತಿ ಸುಮಂತ್ ಇಂದು ಬೆಂಗಳೂರಿನ ಫ್ಯಾಮಿಲಿ ಕೋರ್ಟ್‌ಗೆ ಆಗಮಿಸುವ ಸಾಧ್ಯತೆಯಿದೆ ಎನ್ನಲಾಗಿದೆ. ವಿಚ್ಛೇದನ ಅರ್ಜಿಗೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಇಂದು ವಿಚಾರಣೆ (ಹಿಯರಿಂಗ್) ನಡೆಯಲಿದ್ದು, ದಂಪತಿಗಳಿಬ್ಬರೂ ಕೋರ್ಟ್‌ಗೆ ಹಾಜರಾಗಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಬಹುಕಾಲದ ಗೆಳೆಯ, ಉದ್ಯಮಿಯೂ ಆಗಿರುವ ಸುಮಂತ್ ಬಿಲ್ಲವ ಅವರನ್ನು ಶುಭಾ ಪೂಂಜಾ ಅವರು ಜನವರಿ 5, 2022 ರಂದು ಮದುವೆಯಾಗಿದ್ದರು. ಆಗ ಕೊರೊನಾ ನಿಯಮಗಳು ಜಾರಿಯಲ್ಲಿದ್ದ ಕಾರಣ, ಮಂಗಳೂರಿನ ಮಜಲುಬೆಟ್ಟು ಬೀಡಿನಲ್ಲಿ ಅತ್ಯಂತ ಸರಳವಾಗಿ ಇವರ ಕಲ್ಯಾಣ ಮಹೋತ್ಸವ ನಡೆದಿತ್ತು. ಬಿಗ್ ಬಾಸ್ ಕನ್ನಡ ಸೀಸನ್ 8 ರಲ್ಲಿ ಸ್ಪರ್ಧಿಯಾಗಿದ್ದಾಗಲೂ ಶುಭಾ ಪೂಂಜಾ ತಮ್ಮ ಪ್ರೀತಿಯ ಬಗ್ಗೆ ಮುಕ್ತವಾಗಿ ಹಂಚಿಕೊಂಡಿದ್ದರು.
ಸುದ್ದಿಯ ಹಿಂದಿನ ಸತ್ಯಾಸತ್ಯತೆ ಏನು?
ಮದುವೆಯಾಗಿ ನಾಲ್ಕು ವರ್ಷಗಳು ಕಳೆಯುವ ಮುನ್ನವೇ ಈ ದಂಪತಿಗಳ ನಡುವೆ ಭಿನ್ನಾಭಿಪ್ರಾಯ ಮೂಡಿದ್ದು, ಸಂಸಾರದಲ್ಲಿ ಕಿರಿಕಿರಿ ಉಂಟಾಗಿದೆ ಎನ್ನಲಾಗುತ್ತಿದೆ. ಆದರೆ, ಈ ಡಿವೋರ್ಸ್ ಸುದ್ದಿಯ ಹಿಂದಿನ ಅಸಲಿ ಸತ್ಯಾಸತ್ಯತೆ ಏನು? ದಂಪತಿಗಳ ನಡುವೆ ಬಿರುಕು ಮೂಡಲು ಕಾರಣವೇನು? ಎಂಬ ಗೊಂದಲಗಳಿಗೆ ಇನ್ನು ಅಧಿಕೃತ ತೆರೆ ಬಿದ್ದಿಲ್ಲ. ಈ ಕುರಿತು ನಟಿ ಶುಭಾ ಪೂಂಜಾ ಅವರಾಗಲಿ ಅಥವಾ ಪತಿ ಸುಮಂತ್ ಅವರಾಗಲಿ ಇದುವರೆಗೆ ಯಾವುದೇ ಬಹಿರಂಗ ಪ್ರತಿಕ್ರಿಯೆ ನೀಡಿಲ್ಲ

