Dailyhunt Logo
  • Light mode
    Follow system
    Dark mode
    • Play Story
    • App Story
SIDDARAMAIAH: ಹೈಕಮಾಂಡ್ ಮಾತು ಕೇಳುವೆ ಎಂದಿದ್ದ ಸಿದ್ದರಾಮಯ್ಯ! ತವರು ಜಿಲ್ಲೆಯಲ್ಲೇ ಸಿಎಂ ನೀಡಿದ್ದ ಆ ಹೇಳಿಕೆಗಳ ಮರ್ಮ ಏನು

SIDDARAMAIAH: ಹೈಕಮಾಂಡ್ ಮಾತು ಕೇಳುವೆ ಎಂದಿದ್ದ ಸಿದ್ದರಾಮಯ್ಯ! ತವರು ಜಿಲ್ಲೆಯಲ್ಲೇ ಸಿಎಂ ನೀಡಿದ್ದ ಆ ಹೇಳಿಕೆಗಳ ಮರ್ಮ ಏನು

Navasamaja.com 1 week ago

ಮೈಸೂರು: ರಾಜ್ಯ ರಾಜಕಾರಣದಲ್ಲಿ ಹೈಕಮಾಂಡ್ ಆದೇಶದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಆದರೆ, ನಾಯಕತ್ವ ಬದಲಾವಣೆ ವಿಷಯದಲ್ಲಿ ಹೈಕಮಾಂಡ್‌ ಹೇಳಿದಂತೆ ಕೇಳುವೆ ಎಂದು ಸಿದ್ದರಾಮಯ್ಯ (Siddaramaiah) ಅವರು ಕಳೆದ ಕೆಲವು ತಿಂಗಳುಗಳಿಂದ ಅತಿ ಹೆಚ್ಚು ಬಾರಿ ಮತ್ತು ಮುಕ್ತವಾಗಿ ಹೇಳಿಕೆ ನೀಡಿದ್ದು ತಮ್ಮ ಸ್ವಂತ ತವರೂರಾದ ಮೈಸೂರಿನಲ್ಲೇ ಎನ್ನುವುದು ವಿಶೇಷ.

ಇತ್ತೀಚಿನ ತಿಂಗಳುಗಳಲ್ಲಿ ಅವರು ಮೈಸೂರು ಅಥವಾ ವರುಣಾ ಕ್ಷೇತ್ರಕ್ಕೆ ಭೇಟಿ ನೀಡಿದಾಗೆಲ್ಲಾ ಮಾಧ್ಯಮಗಳು ಸಿಎಂ ಕುರ್ಚಿಯ ಬದಲಾವಣೆ ಕುರಿತು ಕೇಳಿದ ಪ್ರಶ್ನೆಗಳಿಗೆ ಹೈಕಮಾಂಡ್ ಮತ್ತು ರಾಹುಲ್ ಗಾಂಧಿ ಅವರತ್ತಲೇ ಕೈ ತೋರಿಸುತ್ತಾ ಬಂದಿದ್ದರು.

ಮೇ 6: ಮಂಡಕಳ್ಳಿ ವಿಮಾನನಿಲ್ದಾಣದಲ್ಲಿ ನೀಡಿದ್ದ ಐದು ವರ್ಷದ ಹೇಳಿಕೆ
ಮೇ 6ರಂದು ಮೈಸೂರಿನ ಮಂಡಕಳ್ಳಿ ವಿಮಾನನಿಲ್ದಾಣಕ್ಕೆ ಆಗಮಿಸಿದ್ದ ಸಿದ್ದರಾಮಯ್ಯ ಅವರು ಮಾಧ್ಯಮಗಳೊಂದಿಗೆ ಮಾತನಾಡಿ, ನಾನು ಹೈಕಮಾಂಡ್ ಮಾತನ್ನು ಮಾತ್ರವೇ ಕೇಳುವುದು. ಅವರು ಹೇಳಿದರೆ ಐದು ವರ್ಷವೂ ನಾನೇ ಮುಖ್ಯಮಂತ್ರಿ ಆಗಿರುತ್ತೇನೆ. ರಾಜ್ಯದಲ್ಲಿ ಐದು ವರ್ಷವೂ ಕಾಂಗ್ರೆಸ್ ಸರ್ಕಾರ ಇರುತ್ತದೆ, ಅದರಲ್ಲಿ ಯಾವುದೇ ಸಂಶಯವಿಲ್ಲ. ವರಿಷ್ಠರು ನೀವೇ ಇರಿ ಎಂದರೆ ಇರುತ್ತೇನೆ. ಎಲ್ಲಾ ತೀರ್ಮಾನವನ್ನೂ ಮಾಡುವುದು ಹೈಕಮಾಂಡ್‌. ಬೇರೆ ಯಾರೇ ಏನೇ ಹೇಳಿಕೆಗಳನ್ನು ನೀಡಿದರೂ ಅದು ಅವರ ವೈಯಕ್ತಿಕ ಅಭಿಪ್ರಾಯವಷ್ಟೆ ಎಂದು ಸಿಎಂ ಕುರ್ಚಿಯ ಆಕಾಂಕ್ಷಿಗಳಿಗೆ ಟಾಂಗ್ ನೀಡಿದ್ದರು.
ಅದೇ ವೇಳೆ ದೆಹಲಿ ಪ್ರವಾಸದ ಕುರಿತು ಉತ್ತರಿಸಿದ್ದ ಅವರು, ರಾಹುಲ್ ಗಾಂಧಿ ನನ್ನನ್ನು ಈವರೆಗೂ ನವದೆಹಲಿಗೆ ಕರೆದಿಲ್ಲ. ಅವರಾಗಿಯೇ ಕರೆದರೆ ಹೋಗುತ್ತೇನೆ. ನಾನಾಗಿಯೇ ಹೋಗಬೇಕಾದಲ್ಲಿ ರಾಹುಲ್ ಗಾಂಧಿ ಅವರು ಸಮಯ ಕೊಟ್ಟಾಗ ಹೋಗಿ, ಸಚಿವ ಸಂಪುಟ ಪುನರ್‌ರಚನೆಯೋ ಅಥವಾ ವಿಸ್ತರಣೆಯೋ ಎಂಬುದನ್ನು ಚರ್ಚಿಸಿ ತೀರ್ಮಾನಿಸುತ್ತೇನೆ ಎಂದಿದ್ದರು.

ಮಾರ್ಚ್‌ 7: ಪಿಲ್ಲಹಳ್ಳಿ ಹೆಲಿಪ್ಯಾಡ್‌ನಲ್ಲಿ ರಾಹುಲ್ ಜಪ

ಮಾರ್ಚ್ 7ರಂದು ತಮ್ಮ ಸ್ವಕ್ಷೇತ್ರ ವರುಣಾ ವಿಧಾನಸಭಾ ಕ್ಷೇತ್ರದ ವರುಣಾ ಹೋಬಳಿಯ ಪಿಲ್ಲಹಳ್ಳಿ ಗ್ರಾಮದ ಹೆಲಿಪ್ಯಾಡ್‌ನಲ್ಲಿ ಮಾತನಾಡಿದ್ದ ಸಿದ್ದರಾಮಯ್ಯ, ಹೈಕಮಾಂಡ್ ಮೇಲಿನ ತಮ್ಮ ಬಲವಾದ ವಿಶ್ವಾಸವನ್ನು ವ್ಯಕ್ತಪಡಿಸಿದ್ದರು. ಹೈಕಮಾಂಡ್ ಬಿಡು ಅಂದ್ರೆ ಬಿಡ್ತಿನಿ, ಮುಂದುವರಿಯಿರಿ ಎಂದರೆ ಮುಂದುವರಿಯುತ್ತೇನೆ. ಯಾರೋ ಏನೋ ಹೇಳುವುದು ನನಗೆ ಮುಖ್ಯವಲ್ಲ. ಅವಕಾಶ ಕೊಟ್ಟರೆ ಮತ್ತೆರಡು ಬಜೆಟ್ ಮಂಡಿಸುತ್ತೇನೆ. ಇಡೀ ನಾಡಿನ ಜನರು ನಾನು ಮುಖ್ಯಮಂತ್ರಿಯಾಗಿ ಮುಂದುವರಿಯಬೇಕು ಎಂದು ಬಯಸಿದ್ದಾರೆ. ಆದರೆ, ಅಂತಿಮ ತೀರ್ಮಾನಿಸುವುದು ಹೈಕಮಾಂಡ್. ರಾಹುಲ್‌ ಗಾಂಧಿ ಹೇಳಿದಂತೆ ಕೇಳುತ್ತೇನೆ ಎಂದು ಸ್ಪಷ್ಟಪಡಿಸಿದ್ದರು.

ಮಾರ್ಚ್‌ 13: ವರಕೋಡು ಗ್ರಾಮದಲ್ಲಿ ಪುತ್ರ ಯತೀಂದ್ರನಿಗೆ ರಾಜಕೀಯ ಶ್ರೀರಕ್ಷೆ

ಮಾರ್ಚ್ 13ರಂದು ವರುಣಾ ಹೋಬಳಿಯ ವರಕೋಡು ಗ್ರಾಮದಲ್ಲಿ ಶ್ರೀ ಬೀರೇಶ್ವರಸ್ವಾಮಿ ದೇವಸ್ಥಾನವನ್ನು ಉದ್ಘಾಟಿಸಿ ಮಾತನಾಡಿದ್ದ ಸಿದ್ದರಾಮಯ್ಯ, ತಮ್ಮ ಭಾವನಾತ್ಮಕ ಮತ್ತು ಭವಿಷ್ಯದ ರಾಜಕೀಯದ ನಡೆಗಳ ಬಗ್ಗೆ ಸುಳಿವು ನೀಡಿದ್ದರು. ಕೊನೆಯ ಉಸಿರು ಇರುವವರೆಗೂ ರಾಜೀಕೀಯದಲ್ಲಿ ಇರುತ್ತೇನೆ. ರಾಜಕೀಯದಲ್ಲಿ ಗೆಲುವು, ಸೋಲು ಎರಡನ್ನೂ ಕಂಡಿದ್ದೇನೆ. ಆದರೆ, ಜನ ಸೇವೆ ಮಾಡುವುದನ್ನು ಮರೆತಿಲ್ಲ ಎಂದಿದ್ದರು.

ಅದೇ ವೇದಿಕೆಯಲ್ಲಿ ತಮ್ಮ ಪುತ್ರನ ರಾಜಕೀಯ ಭವಿಷ್ಯದ ಕುರಿತು ಮಾತನಾಡಿದ್ದ ಅವರು, ನಾನು‌ ಕ್ಷೇತ್ರಕ್ಕೆ ಈಗ ಜಾಸ್ತಿ ಬರಲು ಆಗುತ್ತಿಲ್ಲ. ನನ್ನ ಪುತ್ರ, ವಿಧಾನಪರಿಷತ್‌ ಸದಸ್ಯ ಡಾ. ಯತೀಂದ್ರ ಸಿದ್ದರಾಮಯ್ಯ ಕ್ಷೇತ್ರವನ್ನು ನೋಡಿಕೊಳ್ಳುತ್ತಾನೆ. ಅಭಿವೃದ್ಧಿಗಾಗಿ ಅವನು ಹೇಳಿದ ಕೆಲಸವನ್ನೆಲ್ಲ ಮಾಡಿಕೊಡುತ್ತೇನೆ. ನೀವೆಲ್ಲರೂ ನನ್ನನ್ನು ಹೇಗೆ ಬೆಳೆಸಿದಿರೋ, ಅದೇ ರೀತಿ ಮುಂದೆಯೂ ಯತೀಂದ್ರನನ್ನೂ ಬೆಳೆಸಬೇಕು ಎಂದು ವರುಣಾ ಕ್ಷೇತ್ರದ ಜನರಲ್ಲಿ ಮನವಿ ಮಾಡಿದ್ದರು. ತಮ್ಮ ತವರು ಜಿಲ್ಲೆಯ ಜನರ ಮುಂದೆ ಹೈಕಮಾಂಡ್ ಮತ್ತು ರಾಹುಲ್ ಗಾಂಧಿ ಹೇಳಿದಂತೆ ಕೇಳುವೆ ಎಂದು ಸಿದ್ದರಾಮಯ್ಯ ಪದೇ ಪದೇ ಹೇಳುತ್ತಿದ್ದ ಮಾತುಗಳು, ಕೊನೆಗೂ ದೆಹಲಿಯಲ್ಲಿ ರಾಹುಲ್ ಗಾಂಧಿ ನೀಡಿದ ಕಡಕ್ ಆದೇಶದ ಬೆನ್ನಲ್ಲೇ ನಿಜವಾಗಿದೆ. ಇಂದು ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ತಮ್ಮ ಮಾತಿಗೆ ಬದ್ಧರಾಗಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Navasamaja