ಬೆಂಗಳೂರು: ರಾಜ್ಯ ಸಚಿವ ಸಂಪುಟ ಪುನರ್‌ರಚನೆಗೆ ಹೈಕಮಾಂಡ್ (High Command) ಒಪ್ಪಿಗೆ ಪಡೆಯುವ ಉದ್ದೇಶದಿಂದ ನವದೆಹಲಿಗೆ (Delhi) ತೆರಳಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ (CM siddaramaiah) ಅವರಿಗೆ ಅಲ್ಲಿ ನಿರೀಕ್ಷಿಸದ ಭಾರಿ ಆಘಾತ ಎದುರಾಗಿತ್ತು.
ಕಾಂಗ್ರೆಸ್ (Congress) ನಾಯಕ ರಾಹುಲ್ ಗಾಂಧಿ (Rahul Gandhi) ಅವರು ನಡೆಸಿದ ಸಭೆಯಲ್ಲಿ, ನಾವು ರಾಜ್ಯದಲ್ಲಿ ನಾಯಕತ್ವ ಬದಲಾವಣೆಗೆ ಕಟ್ಟುನಿಟ್ಟಿನ ತೀರ್ಮಾನ ಮಾಡಿದ್ದೇವೆ. ನೀವು ಕೂಡಲೇ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ (Resign) ಕೊಡಿ ಎಂದು ನೇರವಾಗಿ ನಿರ್ದೇಶನ ನೀಡಿದಾಗ ಸಿದ್ದರಾಮಯ್ಯ ತೀವ್ರ ದಿಗ್ಭ್ರಮೆಗೊಂಡಿದ್ದರು ಎಂದು ಉನ್ನತ ಮೂಲಗಳು ಬಹಿರಂಗಪಡಿಸಿವೆ. ರಾಹುಲ್ ಗಾಂಧಿ ಅವರಿಂದ ಈ ಮಟ್ಟದ ಆದೇಶ ಬರಬಹುದು ಎಂದು ಸಿದ್ದರಾಮಯ್ಯ ಅವರಾಗಲಿ ಅಥವಾ ಅವರ ಆಪ್ತ ವಲಯವಾಗಲಿ ಕಿಂಚಿತ್ತೂ ನಿರೀಕ್ಷಿಸಿರಲಿಲ್ಲ.
ರಾಹುಲ್ ನಡೆಗೆ ಸಿದ್ದರಾಮಯ್ಯ ಲೆಕ್ಕಾಚಾರ ಉಲ್ಟಾ
ದೇಶಾದ್ಯಂತ ಜಾತಿ ಸಮೀಕ್ಷೆ ನಡೆಸುವುದು ಮತ್ತು ಹಿಂದುಳಿದ ವರ್ಗಗಳ ಸಬಲೀಕರಣದ ಬಗ್ಗೆ ನಿರಂತರವಾಗಿ ಧ್ವನಿ ಎತ್ತುತ್ತಿರುವ ರಾಹುಲ್ ಗಾಂಧಿ ಅವರು, ತಮ್ಮನ್ನು ಪದಚ್ಯುತಿಗೊಳಿಸಲು ಖಂಡಿತ ಒಪ್ಪುವುದಿಲ್ಲ ಎಂಬ ಬಲವಾದ ಧೈರ್ಯ ಸಿದ್ದರಾಮಯ್ಯ ಅವರಿಗೆ ಇತ್ತು. ಇದೇ ಕಾರಣಕ್ಕೆ ಅವರು ರಾಜ್ಯದಲ್ಲೂ ರಾಹುಲ್ ಗಾಂಧಿ ಅವರು ಹೇಳಿದರೆ ನಾನು ಕ್ಷಣಮಾತ್ರದಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ಧ ಎಂದು ಸದಾ ಹೇಳಿಕೆ ನೀಡುತ್ತಾ ಬಂದಿದ್ದರು. ಆದರೆ, ಮಂಗಳವಾರ ದೆಹಲಿಯಲ್ಲಿ ನಡೆದ ಸಭೆಯಲ್ಲಿ ಅವರ ಎಲ್ಲಾ ಲೆಕ್ಕಾಚಾರಗಳು ಉಲ್ಟಾ ಆಗಿವೆ.
15 ದಿನಗಳ ಕಾಲಾವಕಾಶ ಕೇಳಿದ್ದ ಸಿದ್ದರಾಮಯ್ಯ
ರಾಹುಲ್ ಗಾಂಧಿ ಅವರ ಆದೇಶದಿಂದ ಆಘಾತಕ್ಕೊಳಗಾದ ಸಿದ್ದರಾಮಯ್ಯ, ತಕ್ಷಣವೇ ರಾಜೀನಾಮೆ ನೀಡುವುದರಿಂದ ತಪ್ಪಿಸಿಕೊಳ್ಳಲು ಹೊಸದೊಂದು ಪ್ರಸ್ತಾಪ ಮುಂದಿಟ್ಟಿದ್ದರು. ರಾಜ್ಯದಲ್ಲಿ ನಾನು ಜಾರಿಗೆ ತರಲು ಶ್ರಮಿಸಿದ ಜಾತಿ ಸಮೀಕ್ಷೆಯವರದಿ ಬಹುತೇಕ ಸಿದ್ಧವಾಗಿದೆ. ಇದನ್ನು ಅಧಿಕೃತವಾಗಿ ಸ್ವೀಕರಿಸಲು ನನಗೆ ಸ್ವಲ್ಪ ಕಾಲಾವಕಾಶ ಬೇಕು. ಹಾಗಾಗಿ ಮುಖ್ಯಮಂತ್ರಿ ಗಾದಿಯಿಂದ ಗೌರವಯುತವಾಗಿ ನಿರ್ಗಮಿಸಲು ಕನಿಷ್ಠ 15 ದಿನಗಳ ಸಮಯ ನೀಡಿ ಎಂದು ಸಿದ್ದರಾಮಯ್ಯ ವರಿಷ್ಠರಲ್ಲಿ ಮನವಿ ಮಾಡಿಕೊಂಡಿದ್ದರು. ಆದರೆ ಸಿದ್ದರಾಮಯ್ಯ ಅವರ ಈ ಮನವಿಗೂ ರಾಹುಲ್ ಗಾಂಧಿ ಸೊಪ್ಪು ಹಾಕಲಿಲ್ಲ. ಜಾತಿ ಗಣತಿ ವರದಿ ಸ್ವೀಕಾರ ಸೇರಿದಂತೆ ನಿಮ್ಮ ಏನೇ ಬಾಕಿ ಕೆಲಸಗಳಿದ್ದರೂ ಅದನ್ನು ಮುಂದಿನ ಎರಡು ದಿನಗಳ ಒಳಗೆ ಮುಗಿಸಿ ರಾಜೀನಾಮೆ ನೀಡಿ ಎಂದು ಕಟ್ಟುನಿಟ್ಟಾಗಿ ಗಡುವು ವಿಧಿಸಿದರು.
3 ವರ್ಷಗಳ ಹಿಂದಿನ ಒಪ್ಪಂದ ನೆನಪಿಸಿದ ರಾಹುಲ್
2023ರ ವಿಧಾನಸಭಾ ಚುನಾವಣೆಯ ಗೆಲುವಿನ ಬಳಿಕ ದೆಹಲಿಯಲ್ಲಿ ನಡೆದಿದ್ದ ಸುದೀರ್ಘ ಸಂಧಾನದ ವೇಳೆ ಮಾಡಿಕೊಳ್ಳಲಾಗಿದ್ದ ಅಧಿಕಾರ ಹಸ್ತಾಂತರದ ಒಪ್ಪಂದವನ್ನು ರಾಹುಲ್ ಗಾಂಧಿ ಈ ಸಭೆಯಲ್ಲಿ ಸಿದ್ದರಾಮಯ್ಯ ಅವರಿಗೆ ನೆನಪಿಸಿದರು. ಪಕ್ಷದ ಹಿತದೃಷ್ಟಿಯಿಂದ ಆ ಒಪ್ಪಂದಕ್ಕೆ ಗೌರವ ನೀಡಲೇಬೇಕು ಎಂದು ಸ್ಪಷ್ಟಪಡಿಸಿದರು. ಹೈಕಮಾಂಡ್‌ನ ಈ ಕಠಿಣ ನಿಲುವಿಗೆ ಮಣಿದ ಬಳಿಕವೇ ಸಿದ್ದರಾಮಯ್ಯ ಅವರು ಮೇ 28ರ ಗುರುವಾರ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಅಂತಿಮವಾಗಿ ಒಪ್ಪಿಕೊಂಡರು ಎಂದು ಮೂಲಗಳು ತಿಳಿಸಿವೆ. ಇದೇ ಕಾರಣಕ್ಕೆ ಅವರು ಬೆಂಗಳೂರಿಗೆ ವಾಪಸ್ ಆದ ತಕ್ಷಣವೇ ಅತ್ಯಂತ ತುರ್ತಾಗಿ ಜಾತಿ ಜನಗಣತಿ ವರದಿಯನ್ನು ಸ್ವೀಕರಿಸಿ ಹೈಕಮಾಂಡ್ ನೀಡಿದ್ದ ಗಡುವನ್ನು ಪೂರೈಸಿ ಈಗ ರಾಜೀನಾಮೆ ನೀಡಿದ್ದಾರೆ.

