ಬೆಂಗಳೂರು: ದಾವಣಗೆರೆ (Davanagere) ಮತ್ತು ಬಾಗಲಕೋಟೆ (Bgalkot) ಜಿಲ್ಲೆಗಳ ಉಪಚುನಾವಣೆ (BY election)ಸಂದರ್ಭದಲ್ಲಿ ರಾಜ್ಯದ ಗ್ಯಾರಂಟಿ ಯೋಜನೆಗಳ (Guarantee schemes) ಹಣ ಬಿಡುಗಡೆಯ ಬಗ್ಗೆ ಮಾಹಿತಿ ಕೋರಿ ಕೇಂದ್ರ ಚುನಾವಣಾ ಆಯೋಗ (ECI) ಪತ್ರ ಬರೆದಿರುವುದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚುನಾವಣಾ ಆಯೋಗದ ಈ ನಡೆ ಪಕ್ಷಪಾತಿಯಿಂದ ಕೂಡಿದೆ ಮತ್ತು ಇದು ಬಡವರ ಹಾಗೂ ಮಹಿಳೆಯರ ವಿರೋಧಿ ನಿಲುವು ಎಂದು ಅವರು ಕಿಡಿಕಾರಿದ್ದಾರೆ.
ಈ ಕುರಿತು ತಮ್ಮ ಅಭಿಪ್ರಾಯ ಹಂಚಿಕೊಂಡಿರುವ ಮುಖ್ಯಮಂತ್ರಿಗಳು, "ನಮ್ಮ ಗ್ಯಾರಂಟಿ ಯೋಜನೆಗಳು ಈ ಬಾರಿಯ ಉಪಚುನಾವಣೆಗಾಗಿ ಘೋಷಿಸಿದ ಹೊಸ ಯೋಜನೆಗಳಲ್ಲ. ಇವು 2023ರ ವಿಧಾನಸಭಾ ಚುನಾವಣೆಯ ಭರವಸೆಯಂತೆ ಕಳೆದ ಒಂದೂವರೆ ವರ್ಷದಿಂದ ನಿರಂತರವಾಗಿ ಜಾರಿಯಲ್ಲಿರುವ ಕಾರ್ಯಕ್ರಮಗಳು. ಪಾರದರ್ಶಕವಾಗಿ ಫಲಾನುಭವಿಗಳ ಖಾತೆಗೆ ಹಣ ವರ್ಗಾವಣೆ ಮಾಡಲಾಗುತ್ತಿದೆ. ಇದು ಜನಕಲ್ಯಾಣದ ಹೂಡಿಕೆಯೇ ಹೊರತು ಮತದಾರರಿಗೆ ನೀಡುತ್ತಿರುವ ಆಮಿಷವಲ್ಲ" ಎಂದು ಸ್ಪಷ್ಟಪಡಿಸಿದ್ದಾರೆ.
ಇದೇ ಸಂದರ್ಭದಲ್ಲಿ ಬಿಜೆಪಿಯ ಇಬ್ಬಂದಿ ನೀತಿಯನ್ನು ಟೀಕಿಸಿದ ಅವರು, ಕರ್ನಾಟಕದ ಯೋಜನೆಗಳನ್ನು 'ಉಚಿತ' ಎಂದು ಟೀಕಿಸುವ ಬಿಜೆಪಿ, ತಾನು ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಇದೇ ಯೋಜನೆಗಳನ್ನು ನಕಲು ಮಾಡಿ ಜಾರಿಗೊಳಿಸುತ್ತಿದೆ ಎಂದು ವ್ಯಂಗ್ಯವಾಡಿದ್ದಾರೆ. ಕರ್ನಾಟಕದ ಅಭಿವೃದ್ಧಿ ಮಾದರಿ ಇಂದು ಇಡೀ ದೇಶಕ್ಕೆ ಮಾದರಿಯಾಗಿದೆ ಎಂದು ಹೇಳಿದ್ದಾರೆ.
ಚುನಾವಣಾ ಆಯೋಗದ ಕಾರ್ಯವೈಖರಿಯನ್ನು ಪ್ರಶ್ನಿಸಿದ ಸಿದ್ದರಾಮಯ್ಯ, "ಮಹಾರಾಷ್ಟ್ರ ಮತ್ತು ಬಿಹಾರದಂತಹ ರಾಜ್ಯಗಳಲ್ಲಿ ಚುನಾವಣೆಗೂ ಮುನ್ನವೇ ನಗದು ವರ್ಗಾವಣೆ ಯೋಜನೆಗಳನ್ನು ಘೋಷಿಸಿ ಜಾರಿಗೊಳಿಸಿದಾಗ ಸುಮ್ಮನಿದ್ದ ಆಯೋಗ, ಈಗ ಕರ್ನಾಟಕದ ವಿಚಾರದಲ್ಲಿ ಅತಿಯಾದ ಆಸಕ್ತಿ ತೋರಿಸುತ್ತಿರುವುದು ಏಕೆ? ಬಿಜೆಪಿ ಅಥವಾ ಎನ್‍ಡಿಎ ಸರ್ಕಾರಗಳಿದ್ದಾಗ ಕಣ್ಣು ಮುಚ್ಚಿ ಕುಳಿತುಕೊಳ್ಳುವ ಆಯೋಗ, ಕರ್ನಾಟಕ ಸರ್ಕಾರ ತನ್ನ ಭರವಸೆಗಳನ್ನು ಈಡೇರಿಸುವಾಗ ಅಡ್ಡಿಪಡಿಸುತ್ತಿರುವುದು ನೋಡಿದರೆ ಅದರ ತಾರತಮ್ಯ ಎದ್ದು ಕಾಣುತ್ತಿದೆ" ಎಂದು ನೇರವಾಗಿ ಆರೋಪಿಸಿದ್ದಾರೆ.
ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಗುರಿಯಾಗಿಸುವುದು ಕನ್ನಡಿಗರಿಗೆ ಮತ್ತು ಬಡವರಿಗೆ ಮಾಡುವ ಅವಮಾನ. ಎಂತಹ ಅಡೆತಡೆಗಳು ಬಂದರೂ ಪ್ರತಿ ಕನ್ನಡಿಗನಿಗೆ ನೀಡಿದ ಭರವಸೆಯನ್ನು ಈಡೇರಿಸಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಸಿಎಂ ಸಿದ್ದರಾಮಯ್ಯ ದೃಢವಾಗಿ ಹೇಳಿದ್ದಾರೆ. ಚುನಾವಣಾ ಆಯೋಗವು ತಟಸ್ಥವಾಗಿರಬೇಕೇ ಹೊರತು ಒಂದು ಪಕ್ಷದ ಕೈಗೊಂಬೆಯಾಗಬಾರದು ಎಂದು ಸಿದ್ದರಾಂಯ್ಯ ಪೋಸ್ಟ್ ಮಾಡಿದ್ದಾರೆ.

