Dailyhunt Logo
  • Light mode
    Follow system
    Dark mode
    • Play Story
    • App Story
SIDDARAMAIAH : ಕೃಷಿ ಭೂಮಿ ಭೂಸ್ವಾಧೀನಕ್ಕೆ ವಿರೋಧ - ಮಾಜಿ ಸಿಎಂ ಸಿದ್ದರಾಮಯ್ಯ ಕಾರ್‌ ಗೆ ರೈತರ ಘೇರಾವ್‌!

SIDDARAMAIAH : ಕೃಷಿ ಭೂಮಿ ಭೂಸ್ವಾಧೀನಕ್ಕೆ ವಿರೋಧ - ಮಾಜಿ ಸಿಎಂ ಸಿದ್ದರಾಮಯ್ಯ ಕಾರ್‌ ಗೆ ರೈತರ ಘೇರಾವ್‌!

Navasamaja.com 1 week ago

ಮೈಸೂರು : ಕಾರ್ಯಕ್ರಮವೊಂದರಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Ex CM Siddaramaiah) ಹಾಗೂ ನಗರಾಭಿವೃದ್ಧಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ (Dr Yateendra Siddaramaiah) ಭಾಗವಹಿಸಿದ್ದ ವೇಳೆ, ಕೃಷಿ ಭೂಮಿ ಸ್ವಾಧೀನ ಪ್ರಕ್ರಿಯೆಯನ್ನು ವಿರೋಧಿಸಿ ಸ್ಥಳೀಯ ರೈತರು ದಿಢೀರ್ ಪ್ರತಿಭಟನೆ ನಡೆಸಿದ ಘಟನೆ ಮೈಸೂರಿನಲ್ಲಿ (Mysore) ನಡೆದಿದೆ.

ತಮ್ಮ ಜೀವನಾಧಾರವಾಗಿರುವ ಫಲವತ್ತಾದ 165 ಎಕರೆ ಕೃಷಿ ಭೂಮಿಯನ್ನು ಉಳಿಸಿಕೊಡುವಂತೆ ಆಗ್ರಹಿಸಿ ಅನ್ನದಾತರು ಸಚಿವರು ಹಾಗೂ ಮಾಜಿ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲು ಯತ್ನಿಸಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಸಂಘವು ಕೆಎನ್‌ಎಸ್ ಬಡಾವಣೆಯಲ್ಲಿ ಆಯೋಜಿಸಿದ್ದ ಪತ್ರಕರ್ತರ ನೂತನ ಭವನದ ಕಟ್ಟಡ ಕಾಮಗಾರಿಗೆ ಚಾಲನೆ, ಪತ್ರಿಕಾ ದಿನಾಚರಣೆ, ಹಿರಿಯ ಪತ್ರಕರ್ತರಿಗೆ ಅಭಿನಂದನೆ ಹಾಗೂ ವಾರ್ಷಿಕ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಸಿದ್ದರಾಮಯ್ಯ ಮತ್ತು ಡಾ. ಯತೀಂದ್ರ ಸಿದ್ದರಾಮಯ್ಯ ಅವರು ಆಗಮಿಸುತ್ತಿದ್ದಂತೆ ಸ್ಥಳದಲ್ಲಿದ್ದ ರೈತರು ದಿಢೀರನೆ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಲು ಆರಂಭಿಸಿದರು. ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಐಎಡಿಬಿ) ಕೈಗೊಂಡಿರುವ ಭೂಸ್ವಾಧೀನ ಪ್ರಕ್ರಿಯೆಯನ್ನು ತಕ್ಷಣವೇ ಕೈಬಿಡುವಂತೆ ಒಕ್ಕೊರಲಿನಿಂದ ಒತ್ತಾಯಿಸಿದರು.
ಕಾರ್ಯಕ್ರಮ ಮುಗಿಸಿ ಸಿದ್ದರಾಮಯ್ಯ ಅವರು ನಿರ್ಗಮಿಸುತ್ತಿದ್ದ ಸಂದರ್ಭದಲ್ಲಿಯೂ ಆಕ್ರೋಶಗೊಂಡ ರೈತರು ಅವರ ಕಾರನ್ನು ಸುತ್ತುವರೆದು ಪ್ರತಿಭಟನೆಯನ್ನು ತೀವ್ರಗೊಳಿಸಿದರು. ಈ ವೇಳೆ ಪರಿಸ್ಥಿತಿಯ ಗಂಭೀರತೆಯನ್ನುರಿತ ಪೊಲೀಸರು ರೈತರನ್ನು ನಿಯಂತ್ರಿಸಿ ಸಿದ್ದರಾಮಯ್ಯ ಅವರ ವಾಹನ ಸುಗಮವಾಗಿ ಚಲಿಸಲು ಅನುವು ಮಾಡಿಕೊಟ್ಟರು.

ಬಳಿಕ, ಕಾರ್ಯಕ್ರಮದ ವೇದಿಕೆಯಲ್ಲಿದ್ದ ನಗರಾಭಿವೃದ್ಧಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಅವರಿಗೆ ನೇರವಾಗಿ ಮನವಿ ಪತ್ರ ಸಲ್ಲಿಸಲು ರೈತರು ಮುಂದಾದರು. ರೈತರ ಕೋರಿಕೆಗೆ ಸ್ಪಂದಿಸಿ ವೇದಿಕೆಯಿಂದ ಕೆಳಗಿಳಿದು ಬಂದ ಸಚಿವರಿಗೆ, ರೈತರ ಬೆಂಬಲಕ್ಕೆ ನಿಂತಿದ್ದ ಬಿಜೆಪಿ ಮುಖಂಡ ಡಾ. ಶುಶ್ರೂತ್ ಗೌಡ ಎದುರಾಗಿ ರೈತರಿಗೆ ಆಗುತ್ತಿರುವ ಅನ್ಯಾಯವನ್ನು ತಕ್ಷಣವೇ ಸರಿಪಡಿಸುವಂತೆ ಒತ್ತಾಯಿಸಿದರು. ಈ ವೇಳೆ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಅವರು "ನೀವ್ಯಾಕೆ ಈ ವಿಚಾರದಲ್ಲಿ ರಾಜಕೀಯ ಮಾಡಲು ಇಲ್ಲಿದ್ದಾರೆ?" ಎಂದು ಪ್ರಶ್ನಿಸಿ ಡಾ. ಶುಶ್ರೂತ್ ಗೌಡ ಅವರೊಂದಿಗೆ ವಾಗ್ವಾದಕ್ಕಿಳಿದರು. ಸ್ಥಳದಲ್ಲಿ ವಾತಾವರಣ ಕಾವೇರುತ್ತಿದ್ದಂತೆ ಜೊತೆಯಲ್ಲಿದ್ದ ಶಾಸಕರಾದ ಡಿ. ರವಿಶಂಕರ್ ಮತ್ತು ದರ್ಶನ್ ಧ್ರುವನಾರಾಯಣ್ ಅವರು ಮಧ್ಯಪ್ರವೇಶಿಸಿ, ಸಚಿವರನ್ನು ಸಮಾಧಾನಪಡಿಸಿ ಮತ್ತೆ ವೇದಿಕೆಗೆ ಕರೆದೊಯ್ದರು.

ಮೈಸೂರು ಮಂಡಕಳ್ಳಿ ವಿಮಾನ ನಿಲ್ದಾಣದ ಸಮೀಪವಿರುವ ವರುಣಾ ವಿಧಾನಸಭಾ ಕ್ಷೇತ್ರದ ಮರಸೆ ಹಾಗೂ ಮದರಗಳ್ಳಿ ಗ್ರಾಮಗಳ ವ್ಯಾಪ್ತಿಯಲ್ಲಿ ವಿದ್ಯುತ್ ಮಾರ್ಗ ನಿರ್ಮಾಣ ಹಾಗೂ ಕೈಗಾರಿಕಾ ಯೋಜನೆಗಳಿಗಾಗಿ 165 ಎಕರೆ ಫಲವತ್ತಾದ ಜಮೀನನ್ನು ಸ್ವಾಧೀನಪಡಿಸಿಕೊಳ್ಳಲು ಕೆಐಎಡಿಬಿ ಮುಂದಾಗಿದೆ. ಪ್ರಸ್ತಾವಿತ ಭೂಮಿಯಲ್ಲಿ ಭತ್ತ, ತೆಂಗು, ಬಾಳೆ ಸೇರಿದಂತೆ ಹಲವು ಸಮೃದ್ಧ ಬೆಳೆಗಳನ್ನು ಬೆಳೆಯಲಾಗುತ್ತಿದ್ದು, ನೂರಾರು ರೈತ ಕುಟುಂಬಗಳು ಇದನ್ನೇ ನೆಚ್ಚಿ ಜೀವನ ನಡೆಸುತ್ತಿವೆ. ಈ ಭೂಮಿಯನ್ನು ಸರ್ಕಾರ ಸ್ವಾಧೀನಪಡಿಸಿಕೊಂಡರೆ ತಮ್ಮ ಬದುಕು ಬೀದಿಗೆ ಬೀಳಲಿದೆ ಎಂದು ರೈತರು ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ.

ತಮಗೆ ಸರ್ಕಾರದ ಯಾವುದೇ ಪರಿಹಾರ ಅಥವಾ ಪರ್ಯಾಯ ವ್ಯವಸ್ಥೆ ಬೇಡವೇ ಬೇಡ, ಬದಲಿಗೆ ತಮ್ಮ ಜೀವನೋಪಾಯವಾಗಿರುವ ಜಮೀನನ್ನು ತಮಗೇ ಉಳಿಸಿಕೊಡಬೇಕು ಎಂದು ಸ್ಥಳೀಯ ಗ್ರಾಮಸ್ಥರು ಮತ್ತು ರೈತ ಹೋರಾಟಗಾರರು ಪಟ್ಟು ಹಿಡಿದಿದ್ದಾರೆ. ಬೇಡಿಕೆ ಈಡೇರದಿದ್ದಲ್ಲಿ ಮುಂಬರುವ ದಿನಗಳಲ್ಲಿ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸುವುದಾಗಿ ಎಚ್ಚರಿಸಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Navasamaja