Dailyhunt Logo
  • Light mode
    Follow system
    Dark mode
    • Play Story
    • App Story
SIR : 2002ರ ವೋಟರ್ ಲಿಸ್ಟ್‌ನಲ್ಲಿ ಹೆಸರಿಲ್ಲದಿದ್ದರೆ ಆತಂಕ ಬೇಡ, ಇಲ್ಲಿದೆ ಚುನಾವಣಾ ಆಯೋಗದ ಪರ್ಯಾಯ ಮಾರ್ಗ!

SIR : 2002ರ ವೋಟರ್ ಲಿಸ್ಟ್‌ನಲ್ಲಿ ಹೆಸರಿಲ್ಲದಿದ್ದರೆ ಆತಂಕ ಬೇಡ, ಇಲ್ಲಿದೆ ಚುನಾವಣಾ ಆಯೋಗದ ಪರ್ಯಾಯ ಮಾರ್ಗ!

Navasamaja.com 1 week ago

ಬೆಂಗಳೂರು: ರಾಜ್ಯದಲ್ಲಿ(Karnataka) ಪ್ರಸ್ತುತ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಗಣತಿ ನಮೂನೆ ಭರ್ತಿ ಮಾಡಲು 2002ರ ಮತದಾರರ ಪಟ್ಟಿಯಲ್ಲಿ ತಮ್ಮ ಅಥವಾ ಪೋಷಕರ ಹೆಸರುಗಳು ಪತ್ತೆಯಾಗುತ್ತಿಲ್ಲ ಎಂದು ಹಲವು ನಾಗರಿಕರು ದೂರು ನೀಡಿದ್ದರು.

ಈ ಹಿನ್ನೆಲೆಯಲ್ಲಿ ಮತದಾರರ ಆತಂಕ ನಿವಾರಿಸಲು ಚುನಾವಣಾ ಆಯೋಗವು(Election Commission) ಮಹತ್ವದ ಸ್ಪಷ್ಟನೆ ಹಾಗೂ ಪರ್ಯಾಯ ಮಾರ್ಗಗಳನ್ನು ಪ್ರಕಟಿಸಿದೆ.

ನಿಮ್ಮ ಅಥವಾ ನಿಮ್ಮ ಕುಟುಂಬದವರ ಹೆಸರು 2002ರ ಪಟ್ಟಿಯಲ್ಲಿ ಇಲ್ಲದಿದ್ದರೆ ಗಾಬರಿಯಾಗಬೇಕಿಲ್ಲ. ಸಂತತಿ (Progeny) ಅಥವಾ ಸಂಬಂಧಿಕರ (Relative) ಹೆಸರನ್ನು ಮ್ಯಾಪ್ ಮಾಡುವ ಮೂಲಕ ಅಥವಾ ಕ್ಲೈಮ್ಸ್ ಅಂಡ್ ಆಬ್ಜೆಕ್ಷನ್ಸ್ ಅವಧಿಯಲ್ಲಿ ಹೊಸದಾಗಿ ಅರ್ಜಿ ಸಲ್ಲಿಸುವ ಮೂಲಕ ಈ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಹುದು ಎಂದು ಕರ್ನಾಟಕದ ಜಂಟಿ ಮುಖ್ಯ ಚುನಾವಣಾಧಿಕಾರಿ ಎಸ್. ಯೋಗೇಶ್ವರ್ ತಿಳಿಸಿದ್ದಾರೆ.

ಸಂಬಂಧಿಕರ ಹೆಸರು ಮ್ಯಾಪ್ ಮಾಡುವುದು ಹೇಗೆ?
ಒಂದು ವೇಳೆ 2025ರ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರಿದ್ದು, 2002ರ ಪಟ್ಟಿಯಲ್ಲಿ ಸಿಗದಿದ್ದರೆ, 2002ರ ಲಿಸ್ಟ್‌ನಲ್ಲಿ ಹೆಸರಿರುವ ನಿಮ್ಮ ಯಾವುದೇ ಸಂಬಂಧಿಕರ ವಿವರಗಳನ್ನು ನೀವು ನೀಡಬಹುದು. 2002ರ ಮತದಾರರ ಪಟ್ಟಿಯನ್ನು https://voters.eci.gov.in ಜಾಲತಾಣದ ಮೂಲಕ ಪರಿಶೀಲಿಸಬಹುದಾಗಿದೆ.

ನಿಮ್ಮ ತಂದೆ-ತಾಯಿಯ ಹೆಸರು 2002ರ ಪಟ್ಟಿಯಲ್ಲಿ ಇಲ್ಲದಿದ್ದರೂ, ಅವರ ಸಹೋದರ ಅಥವಾ ಸಹೋದರಿಯರು (ಚಿಕ್ಕಪ್ಪ, ದೊಡ್ಡಪ್ಪ, ಅತ್ತೆ, ಮಾವ ಇತ್ಯಾದಿ) ಸೇರಿದಂತೆ ತಂದೆ ಅಥವಾ ತಾಯಿಯ ಕಡೆಯ ಯಾವುದೇ ರಕ್ತಸಂಬಂಧಿಗಳ ಹೆಸರನ್ನು ಮ್ಯಾಪ್ ಮಾಡಬಹುದು. ಈ ಸಂಬಂಧಿಕರು ಭಾರತದ ಯಾವುದೇ ಭಾಗದಲ್ಲಿ ವಾಸಿಸುತ್ತಿದ್ದರೂ ಕೇಂದ್ರಿಕೃತ ಪೋರ್ಟಲ್ ಮೂಲಕ ಬಿಎಲ್‌ಒ (BLO) ಅವರ ವಿವರಗಳನ್ನು ಸುಲಭವಾಗಿ ಪರಿಶೀಲಿಸಲಿದ್ದಾರೆ.

ದಾಖಲೆ ಸಲ್ಲಿಕೆ ಯಾವಾಗ?
ಈ ಸಂಬಂಧವನ್ನು ಸಾಬೀತುಪಡಿಸಲು ಆರಂಭಿಕ ಎಣಿಕೆ ನಮೂನೆಯೊಂದಿಗೆ ಯಾವುದೇ ಹೆಚ್ಚುವರಿ ದಾಖಲೆಗಳನ್ನು ಲಗತ್ತಿಸುವ ಅಗತ್ಯವಿರುವುದಿಲ್ಲ. ಆದರೆ, ಕರಡು ಮತದಾರರ ಪಟ್ಟಿ ಪ್ರಕಟವಾದ ಬಳಿಕ ಪರಿಶೀಲನೆಗಾಗಿ ಒಂದು ವೇಳೆ ನೋಟಿಸ್ ಬಂದರೆ ಮಾತ್ರ, ಚುನಾವಣಾ ಆಯೋಗ ಅನುಮೋದಿಸಿರುವ 12 ಅಧಿಕೃತ ದಾಖಲೆಗಳಲ್ಲಿ ಯಾವುದಾದರೂ ಒಂದನ್ನು ಸಲ್ಲಿಸಬೇಕಾಗುತ್ತದೆ.

ಯಾವುದೇ ದಾಖಲೆ ಇಲ್ಲದಿದ್ದರೆ 'ಹೊಸ ಮತದಾರ'
ಒಂದು ವೇಳೆ 2002ರ ಪಟ್ಟಿಯಲ್ಲಿ ನಿಮ್ಮ ಯಾವುದೇ ಸಂಬಂಧಿಕರ ಹೆಸರೂ ಪತ್ತೆಯಾಗದಿದ್ದರೆ, ಅಂತಹ ವ್ಯಕ್ತಿಯನ್ನು 'ಹೊಸ ಮತದಾರ' ಎಂದು ಪರಿಗಣಿಸಲಾಗುತ್ತದೆ. ಇಂತಹ ನಾಗರಿಕರು ಆತಂಕಪಡುವ ಅಗತ್ಯವಿಲ್ಲ. ಮುಂಬರುವ ಆಗಸ್ಟ್ 5ರಿಂದ ಸೆಪ್ಟೆಂಬರ್ 4ರವರೆಗೆ ನಡೆಯುವ 'ಕ್ಲೈಮ್ಸ್ ಅಂಡ್ ಆಬ್ಜೆಕ್ಷನ್ಸ್' (ಹಕ್ಕುಗಳು ಮತ್ತು ಆಕ್ಷೇಪಣೆಗಳು) ಅವಧಿಯಲ್ಲಿ, ಫಾರ್ಮ್-6, ಕಡ್ಡಾಯ ಘೋಷಣಾ ಪತ್ರ ಹಾಗೂ ಆಯೋಗ ನಿಗದಿಪಡಿಸಿರುವ 12 ದಾಖಲೆಗಳಲ್ಲಿ ಒಂದನ್ನು ಸಲ್ಲಿಸಿ ಅಂತಿಮ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ಸುಲಭವಾಗಿ ಸೇರಿಸಿಕೊಳ್ಳಬಹುದು ಎಂದು ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ.

Dailyhunt
Disclaimer: This content has not been generated, created or edited by Dailyhunt. Publisher: Navasamaja