ಮಂಗಳೂರು: ಸರ್ಕಾರಿ ಕರ್ತವ್ಯದ ನಿಮಿತ್ತ ಮನೆಗೆ ಬಂದಿದ್ದ ದಲಿತ ಸಮುದಾಯಕ್ಕೆ ಸೇರಿದ ಬಿ.ಎಲ್.ಒ (BLO) ಮಹಿಳೆಯನ್ನು ಜಾತಿ ನಿಂದನೆ ಮಾಡಿ, ಮನೆ ಒಳಗೆ ಬಿಡದೆ ಅಪಮಾನಿಸಿರುವ ಆಘಾತಕಾರಿ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ(Belthangady) ತಾಲೂಕಿನ ಶಿರ್ಲಾಲು ಗ್ರಾಮದಲ್ಲಿ ನಡೆದಿದೆ.
ಎಸ್‌ಐಆರ್ (SIR) ಪ್ರಕ್ರಿಯೆಯ ವೇಳೆ ಜಾತಿ ನಿಂದನೆ ನಡೆಸಿರುವ ಇಂತಹ ಪ್ರಕರಣ ರಾಜ್ಯದಲ್ಲೇ ಇದೇ ಮೊದಲು ಎನ್ನಲಾಗಿದೆ. ನಡೆದಿದ್ದೇನು? "ನಿಮ್ಮ ಜಾತಿಯವರು ಒಳಗೆ ಬರಬಾರದು!" ಅಧಿಕಾರಿಗಳು ಮನೆಯ ಅಂಗಳಕ್ಕೆ ಪ್ರವೇಶಿಸುತ್ತಿದ್ದಂತೆ ತಡೆದ ಮನೆಯ ಯಜಮಾನಿ ಯಶೋಧ ಆಚಾರಿ, "ನೀನು ಅಲ್ಲಿಯೇ ನಿಲ್ಲು, ನಿಮ್ಮ ಜಾತಿಯವರು ಈ ಕಡೆ ಬರಬಾರದು" ಎಂದು ಹೇಳಿ ಬಿಎಲ್‌ಒ ಮಹಿಳೆಯನ್ನು ಮನೆಯ ಸಿಟ್ ಔಟ್ ಪ್ರವೇಶಿಸದಂತೆ ಮೆಟ್ಟಿಲ ಬಳಿಯೇ ತಡೆದು ನಿಲ್ಲಿಸಿದ್ದಾರೆ. ಸಾರ್ವಜನಿಕವಾಗಿ ಎಲ್ಲರೆದುರೇ ಅಂಗಳದಲ್ಲಿ ನಿಲ್ಲಿಸಿ ತನಗೆ ಜಾತಿ ನಿಂದನೆ ಮಾಡಿ ತೀವ್ರ ಅಪಮಾನ ಮಾಡಲಾಗಿದೆ ಎಂದು ನೊಂದ ಮಹಿಳಾ ಅಧಿಕಾರಿ ಆರೋಪಿಸಿದ್ದಾರೆ. ವೇಣೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಸದ್ಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮಹಜರು ನಡೆಸಿದ್ದು, ತನಿಖೆಯನ್ನು ಕೈಗೊಂಡಿದ್ದಾರೆ. ಸರ್ಕಾರಿ ಕರ್ತವ್ಯದಲ್ಲಿದ್ದ ಮಹಿಳಾ ಅಧಿಕಾರಿಗೆ ಜಾತಿ ಆಧಾರದ ಮೇಲೆ ತಾರತಮ್ಯ ಎಸಗಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಸ್ಥಳೀಯ ಅಂಗನವಾಡಿ ಕಾರ್ಯಕರ್ತೆಯೊಬ್ಬರು ಚುನಾವಣಾ ಇಲಾಖೆಯ ಬಿಎಲ್‌ಒ ಆಗಿಯೂ ಹೆಚ್ಚುವರಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅದರಂತೆ ಜುಲೈ 6 ರಂದು ಅವರು ಮತ್ತೊಬ್ಬ ಅಧಿಕಾರಿ (ALO) ಮಾಧವ ಅವರೊಂದಿಗೆ ಶಿರ್ಲಾಲು ಗ್ರಾಮದ ಪಲ್ಲದೋಡಿ ಕಾಳಿಕಾಂಬ ನಿವಾಸಿ ಯಶೋಧ ಆಚಾರಿ ಎಂಬುವರ ಮನೆಗೆ ಎಸ್‌ಐಆರ್ ಪ್ರಕ್ರಿಯೆಯ ಕೆಲಸದ ನಿಮಿತ್ತ ತೆರಳಿದ್ದರು.
ತಮಗೆ ನಡೆದ ಈ ಜಾತಿ ನಿಂದನೆ ಹಾಗೂ ಅವಮಾನದ ಕುರಿತು ಬಿಎಲ್‌ಒ ಮಹಿಳೆಯು ಜುಲೈ 7 ರಂದು ವೇಣೂರು ಪೊಲೀಸ್ ಠಾಣೆಗೆ ತೆರಳಿ ಅಧಿಕೃತವಾಗಿ ದೂರು ನೀಡಿದ್ದಾರೆ. ಬಿ.ಎಲ್.ಒ ನೀಡಿದ ದೂರಿನನ್ವಯ ಪೊಲೀಸರು ಆರೋಪಿ ಮಹಿಳೆ ಯಶೋಧ ಆಚಾರಿ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ದೌರ್ಜನ್ಯ ತಡೆ ಕಾಯ್ದೆ (SC/ST Act-2015) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

