ಸಿವುಟಾ: ಮೊರಾಕೊದಿಂದ(Morocco) ಸ್ಪೇನ್‌ನ(Spain) ಸಣ್ಣ ಕೇಂದ್ರಾಡಳಿತ ಪ್ರದೇಶವಾದ 'ಸಿವುಟಾ' (Ceuta) ಗಡಿಯೊಳಗೆ ಸಾವಿರಾರು ಅಕ್ರಮ ವಲಸಿಗರು(Illegal immigrants) ದಾಳಿವಿಟ್ಟು ನುಗ್ಗಿದ ಪರಿಣಾಮ ಭೀಕರ ಗಡಿ ಬಿಕ್ಕಟ್ಟು ನಿರ್ಮಾಣವಾಗಿದೆ.
ಅಕ್ರಮವಾಗಿ ಗಡಿ ದಾಟಲು ಯತ್ನಿಸುವಾಗ ಕನಿಷ್ಠ 9 ಜನರು ಸಾವನ್ನಪ್ಪಿದ್ದಾರೆ. ಪರಿಸ್ಥಿತಿಯನ್ನು ಹತೋಟಿಗೆ ತರಲು ಸ್ಪೇನ್ ಸರ್ಕಾರವು ಗಡಿಯಲ್ಲಿ ಸೇನೆಯನ್ನು ನಿಯೋಜಿಸಿದೆ. ಗಡಿಯಲ್ಲಿ ಸೃಷ್ಟಿಯಾದ ಗೊಂದಲ "ಇಡೀ ಗಡಿ ವ್ಯವಸ್ಥೆ ಸಂಪೂರ್ಣವಾಗಿ ಕುಸಿದುಬಿದ್ದಿದೆ. ಎಷ್ಟು ಸಾವಿರ ಜನರು ಒಳನುಗ್ಗಿದ್ದಾರೆ ಎಂದು ಕಖಚಿತವಾಗಿ ಹೇಳಲು ಸಾಧ್ಯವಿಲ್ಲ" ಎಂದು ಸ್ಥಳೀಯ ಸಿವಿಲ್ ಗಾರ್ಡ್ ಅಧಿಕಾರಿಗಳ ಸಂಘದ ಮುಖ್ಯಸ್ಥ ರಶೀದ್ ಸ್ಬಿಹಿ ಆತಂಕ ವ್ಯಕ್ತಪಡಿಸಿದ್ದಾರೆ. ಪ್ರಧಾನಿ ಪೆಡ್ರೊ ಸ್ಯಾಂಚೆಜ್ ಹಾಗೂ ಆಂತರಿಕ ಸಚಿವರು ಪರಿಸ್ಥಿತಿಯ ಪರಿಶೀಲನೆಗೆ ಸ್ಥಳಕ್ಕೆ ಧಾವಿಸಿದ್ದಾರೆ. ಜೀವಭಯ ತೊರೆದು ಈಜಿ ಬಂದ ವಲಸಿಗರು
ಸಿವುಟಾದಲ್ಲಿನ ಸ್ಥಳೀಯ ಆಡಳಿತ ಮಂಡಳಿಯು ಗಡಿ ನಿಯಂತ್ರಿಸಲು ಸ್ಪೇನ್‌ನ ಮ್ಯಾಡ್ರಿಡ್ ಕೇಂದ್ರ ಸರ್ಕಾರಕ್ಕೆ ಹೆಚ್ಚುವರಿ ಭದ್ರತಾ ಪಡೆಗಳನ್ನು ಕಳುಹಿಸುವಂತೆ ಮನವಿ ಮಾಡಿತ್ತು. ಗುರುವಾರ ಬೃಹತ್ ಸಂಖ್ಯೆಯಲ್ಲಿ ಆಗಮಿಸಿದ ವಲಸಿಗರು ಗಡಿಯ ತಂತಿಬೇಲಿಯನ್ನು ಮುರಿದು ಒಳನುಗ್ಗಿದ್ದಾರೆ.
ಮೊರಾಕೊ ಗಡಿಗೆ ಹೊಂದಿಕೊಂಡಿರುವ ಸ್ಪೇನ್‌ನ ಈ ಪುಟ್ಟ ಪ್ರದೇಶವನ್ನು ತಲುಪಲು ವಲಸಿಗರು 5 ಕಿಲೋಮೀಟರ್‌ಗೂ ಹೆಚ್ಚು ದೂರ ಸಮುದ್ರದಲ್ಲಿ ಈಜಿಕೊಂಡು ಅಥವಾ ತಂತಿಬೇಲಿ ಜಿಗಿದು ಬರುವ ಸಾಹಸ ಮಾಡುತ್ತಿದ್ದಾರೆ. ಬಂದವರಲ್ಲಿ ಹೆಚ್ಚಿನವರು ಯುವಕರಾಗಿದ್ದರೂ, ಸಣ್ಣ ಮಕ್ಕಳು ಮತ್ತು ಮಹಿಳೆಯರನ್ನೊಳಗೊಂಡ ಕುಟುಂಬಗಳೂ ಇವೆ.
ನೀರಿನಲ್ಲಿ ತೇಲುತ್ತಿರುವ ಶವಗಳು ಪತ್ತೆಯಾಗಿದ್ದು, ಈಗಾಗಲೇ ಕನಿಷ್ಠ ಒಂಬತ್ತು ಮಂದಿ ಜೀವ ಕಳೆದುಕೊಂಡಿದ್ದಾರೆ. ಪ್ರಸ್ತುತ ಸ್ಪೇನ್ ಸೇನೆ ಹಾಗೂ ಪೊಲೀಸರು ಗಡಿಯಲ್ಲಿ ಭದ್ರತೆಯನ್ನು ಬಿಗಿಗೊಳಿಸಿದ್ದು, ಅಕ್ರಮವಾಗಿ ನುಸುಳಿದವರನ್ನು ಹಿಂತಿರುಗಿಸಲು ಮೊರಾಕೊ ಸರ್ಕಾರದೊಂದಿಗೆ ಚರ್ಚಿಸುತ್ತಿದ್ದಾರೆ.
ಐರೋಪ್ಯ ರಾಷ್ಟ್ರಗಳಲ್ಲಿ ಹೆಚ್ಚಿದ ಆತಂಕ
ಈ ದಿಢೀರ್ ನುಸುಳುವಿಕೆ ಯುರೋಪಿನ ಇತರ ದೇಶಗಳಲ್ಲೂ ಆತಂಕ ಸೃಷ್ಟಿಸಿದೆ. ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ತಮ್ಮ ದೇಶದ ಗಡಿ ಭದ್ರತೆಯ ಹಿತದೃಷ್ಟಿಯಿಂದ ಸ್ಪೇನ್ ನಡುವಿನ ಮುಕ್ತ-ಗಡಿ (Schengen) ಒಪ್ಪಂದವನ್ನು ರದ್ದುಗೊಳಿಸುವುದಾಗಿ ಎಚ್ಚರಿಸಿದ್ದಾರೆ.
2021ರ ಮೇ ತಿಂಗಳಿನಲ್ಲೂ ಇಂತಹುದೇ ಘಟನೆ ನಡೆದು ಕೇವಲ ಎರಡೇ ದಿನಗಳಲ್ಲಿ 8,000ಕ್ಕೂ ಹೆಚ್ಚು ವಲಸಿಗರು ಸಿವುಟಾಗೆ ನುಗ್ಗಿದ್ದರು. ಆಫ್ರಿಕಾ ಖಂಡದಿಂದ ಯುರೋಪ್ ದೇಶಗಳಿಗೆ ಅಕ್ರಮವಾಗಿ ಪ್ರವೇಶಿಸಲು ಸಿವುಟಾವನ್ನು ಪ್ರಮುಖ ಹೆಬ್ಬಾಗಿಲನ್ನಾಗಿ ವಲಸಿಗರು ಬಳಸಿಕೊಳ್ಳುತ್ತಿದ್ದಾರೆ.

