Dailyhunt Logo
  • Light mode
    Follow system
    Dark mode
    • Play Story
    • App Story
SUGAR PRICE: ಸಕ್ಕರೆ ದರ ಏರಿಕೆಗೆ ಕೇಂದ್ರ ಬ್ರೇಕ್ - ವರ್ತಕರ ದಾಸ್ತಾನು ಮಿತಿ 2,000 ಕ್ವಿಂಟಾಲ್‌ಗೆ ಕಡಿತ

SUGAR PRICE: ಸಕ್ಕರೆ ದರ ಏರಿಕೆಗೆ ಕೇಂದ್ರ ಬ್ರೇಕ್ - ವರ್ತಕರ ದಾಸ್ತಾನು ಮಿತಿ 2,000 ಕ್ವಿಂಟಾಲ್‌ಗೆ ಕಡಿತ

Navasamaja.com 1 week ago

ವದೆಹಲಿ: ಹಬ್ಬಗಳ ಋತು ಹತ್ತಿರವಾಗುತ್ತಿರುವಂತೆಯೇ ಸಕ್ಕರೆ ಬೆಲೆ ಏರಿಕೆಗೆ (Sugar Price Hike) ಕಡಿವಾಣ ಹಾಕಲು ಕೇಂದ್ರ ಸರ್ಕಾರ (Central Govt) ಮುಂದಾಗಿದೆ. ವರ್ತಕರ ಬಳಿ ಇರುವ ಸಕ್ಕರೆ ದಾಸ್ತಾನು ಮಿತಿಯನ್ನು 4,000 ಕ್ವಿಂಟಾಲ್‌ನಿಂದ 2,000 ಕ್ವಿಂಟಾಲ್‌ಗೆ ತಕ್ಷಣದಿಂದ ಜಾರಿಗೆ ಬರುವಂತೆ ಕಡಿತಗೊಳಿಸಿದೆ.

ಸರ್ಕಾರದ ಈ ಕಠಿಣ ಕ್ರಮ ಮತ್ತು ಮಾರುಕಟ್ಟೆಗೆ ಸಕ್ಕರೆ ಪೂರೈಕೆ ಹೆಚ್ಚಾಗಿರುವುದರಿಂದ ಈಗಾಗಲೇ ಸಗಟು ಮಾರುಕಟ್ಟೆಯಲ್ಲಿ ಸಕ್ಕರೆ ದರ ಶೇಕಡಾ 20ರಷ್ಟು ಇಳಿಕೆಯಾಗಿದೆ. ಮುಂಬರುವ ಹಬ್ಬಗಳ ಸಾಲಿನಲ್ಲಿ ಮುಕ್ತ ಮಾರುಕಟ್ಟೆಯಲ್ಲೂ ಸಕ್ಕರೆ ಬೆಲೆ ಗಣನೀಯವಾಗಿ ತಗ್ಗುವ ನಿರೀಕ್ಷೆಯಿದೆ.

ಈ ಹೊಸ ದಾಸ್ತಾನು ನಿಯಮವು ಸೆಪ್ಟೆಂಬರ್ 15ರಿಂದ ನವೆಂಬರ್ 30ರವರೆಗೆ ಜಾರಿಯಲ್ಲಿರಲಿದೆ. ನೂತನ ನಿಯಮದ ಪ್ರಕಾರ, ವ್ಯಾಪಾರಿಗಳು ಸಕ್ಕರೆ ಖರೀದಿಸಿದ ದಿನದಿಂದ 30 ದಿನಗಳಿಗಿಂತ ಹೆಚ್ಚು ಅವಧಿಗೆ ಅದನ್ನು ದಾಸ್ತಾನು ಇಟ್ಟುಕೊಳ್ಳುವಂತಿಲ್ಲ. ಹಾಗೆಯೇ, ದೇಶದ ಯಾವುದೇ ಭಾಗದಲ್ಲೂ ಯಾವುದೇ ಸಮಯದಲ್ಲಿ 2,000 ಕ್ವಿಂಟಾಲ್‌ಗಿಂತ ಹೆಚ್ಚಿನ ಸಕ್ಕರೆಯನ್ನು ಸಂಗ್ರಹಿಸಿಡುವಂತಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

ದೇಶದಲ್ಲಿ ಸಕ್ಕರೆ ಬೆಲೆ ಗಣನೀಯವಾಗಿ ಏರಿಕೆಯಾಗಿತ್ತು. ಆಗಸ್ಟ್ 31ರ ವೇಳೆಗೆ ದೇಶಾದ್ಯಂತ ಸಕ್ಕರೆಯ ಸರಾಸರಿ ಚಿಲ್ಲರೆ ದರ ಪ್ರತಿ ಕೆಜಿಗೆ 63.28 ರೂಪಾಯಿ ಇತ್ತು. ಕಳೆದ ವರ್ಷ ಇದೇ ಅವಧಿಯಲ್ಲಿ ಪ್ರತಿ ಕೆಜಿಗೆ 46.02 ರೂಪಾಯಿ ಇದ್ದು, ಒಂದು ವರ್ಷದಲ್ಲಿ ಶೇಕಡಾ 37ರಷ್ಟು ಏರಿಕೆಯಾಗಿತ್ತು. ಇನ್ನು ಸಗಟು ದರ ಕೂಡ ಶೇಕಡಾ 36.28ರಷ್ಟು ಹೆಚ್ಚಾಗಿ ಪ್ರತಿ ಕೆಜಿಗೆ 58.40 ರೂಪಾಯಿಗೆ ತಲುಪಿತ್ತು.

ಪ್ರಸ್ತುತ ದೇಶದಲ್ಲಿ ವಾರ್ಷಿಕ ಆಂತರಿಕ ಬೇಡಿಕೆಗೆ ಬೇಕಾದ ಸುಮಾರು 280ರಿಂದ 285 ಲಕ್ಷ ಟನ್‌ಗಳಷ್ಟು ಸಕ್ಕರೆ ದಾಸ್ತಾನು ಲಭ್ಯವಿದೆ ಎಂದು ಸರ್ಕಾರ ತಿಳಿಸಿದೆ. ಹೀಗಿದ್ದರೂ ಕೃತಕ ಅಭಾವ ಸೃಷ್ಟಿಸಿ ದರ ಹೆಚ್ಚಿಸುತ್ತಿರುವುದಕ್ಕೆ ಸಕ್ಕರೆ ಮಿಲ್-ಮಾಲೀಕರೇ ಕಾರಣ ಎಂದು ಕೇಂದ್ರ ಸರ್ಕಾರ ಕಿಡಿಕಾರಿದೆ.

Dailyhunt
Disclaimer: This content has not been generated, created or edited by Dailyhunt. Publisher: Navasamaja