ಪ್ರಯಾಗ್‌ರಾಜ್: ವಿಶ್ವದ ಪ್ರಸಿದ್ಧ ಸ್ಮಾರಕ ಹಾಗೂ ಪ್ರೇಮದ ಸಂಕೇತ ಎಂದೇ ಹೆಸರಾಗಿರುವ ಆಗ್ರಾದ ತಾಜ್ ಮಹಲ್ (Taj Mahal) ವಿವಾದಕ್ಕೆ ಸಂಬಂಧಿಸಿದಂತೆ ಅಲಹಾಬಾದ್ ಹೈಕೋರ್ಟ್ ಮಹತ್ವದ ಹೆಜ್ಜೆಯಿಟ್ಟಿದೆ. ಮೊಘಲರ ಕಾಲದ ಈ ಐತಿಹಾಸಿಕ ಸ್ಮಾರಕದ ಒಳಗೆ 'ತೇಜೋ ಮಹಾಲಯ' ಎಂಬ ಹಿಂದೂ ದೇವಸ್ಥಾನವಿದೆ ಎಂದು ಸಲ್ಲಿಕೆಯಾಗಿದ್ದ ಅರ್ಜಿಯನ್ನು ವಿಚಾರಣೆಗೆ ಸ್ವೀಕರಿಸಿರುವ ಉನ್ನತ ನ್ಯಾಯಾಲಯ, ಕೇಂದ್ರ ಸರ್ಕಾರ ಮತ್ತು ಭಾರತೀಯ ಪುರಾತತ್ವ ಇಲಾಖೆಗೆ (ASI) ನೋಟಿಸ್ ಜಾರಿ ಮಾಡಿದೆ.
ಅರ್ಜಿದಾರರ ವಾದವೇನು? ಏನಿದು ತಾಜ್‌ಮಹಲ್ ವಿವಾದ? ಕೆಳಹಂತದ ನ್ಯಾಯಾಲಯಗಳಲ್ಲಿ ಸೂಕ್ತ ಪರಿಹಾರ ಸಿಗದ ಕಾರಣ ಅರ್ಜಿದಾರರು ಅಂತಿಮವಾಗಿ ಅಲಹಾಬಾದ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಕೆಳ ನ್ಯಾಯಾಲಯಗಳ ಆದೇಶಗಳು ಈ ಜಾಗದ ಐತಿಹಾಸಿಕ ಸತ್ಯವನ್ನು ಹೊರತರಲು ಬೇಕಾದ ಪ್ರಮುಖ ಪುರಾವೆಗಳ ಸಂಗ್ರಹಣೆಗೆ ತಡೆಯೊಡ್ಡಿವೆ ಎಂದು ಅವರು ಹೈಕೋರ್ಟ್‌ನಲ್ಲಿ ವಾದಿಸಿದ್ದರು. ಇದೀಗ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಹೈಕೋರ್ಟ್, 10 ದಿನಗಳ ಒಳಗೆ ನೋಟಿಸ್ ಪ್ರಕ್ರಿಯೆಗಳನ್ನು ಪೂರ್ಣಗೊಳಿಸುವಂತೆ ಆದೇಶಿಸಿದೆ. ಅಷ್ಟೇ ಅಲ್ಲದೆ, ಮುಂದಿನ ವಿಚಾರಣೆಯೊಳಗೆ ಕೇಂದ್ರ ಸರ್ಕಾರ ಮತ್ತು ಪುರಾತತ್ವ ಇಲಾಖೆ ಸೇರಿದಂತೆ ಎಲ್ಲಾ ಪ್ರತಿವಾದಿಗಳು ಈ ಕುರಿತು ತಮ್ಮ ಆಕ್ಷೇಪಣಾ ಅಫಿಡವಿಟ್ ಸಲ್ಲಿಸುವಂತೆ ಕಟ್ಟುನಿಟ್ಟಿನ ಮಧ್ಯಂತರ ನಿರ್ದೇಶನ ನೀಡಿದೆ.
ಈ ಸೂಕ್ಷ್ಮ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ರೋಹಿತ್ ರಂಜನ್ ಅಗರ್ವಾಲ್ ಅವರಿದ್ದ ಪೀಠವು, ಸಂವಿಧಾನದ 227ನೇ ವಿಧಿಯ ಅಡಿಯಲ್ಲಿ ಈ ಅರ್ಜಿ ನ್ಯಾಯಾಂಗ ಪರಿಶೀಲನೆಗೆ ಅರ್ಹವಾಗಿದೆ ಎಂದು ಅಭಿಪ್ರಾಯಪಟ್ಟಿದೆ. ಹಿರಿಯ ವಕೀಲ ಹರಿ ಶಂಕರ್ ಜೈನ್ ನೇತೃತ್ವದಲ್ಲಿ ಅರ್ಜಿದಾರರು ಕೋರ್ಟ್‌ನಲ್ಲಿ ವಾದ ಮಂಡಿಸಿದ್ದು, ತಾಜ್ ಮಹಲ್ ಆವರಣದೊಳಗೆ ಇರುವ ಧಾರ್ಮಿಕ ಚಿಹ್ನೆಗಳು ಮತ್ತು ವಾಸ್ತುಶಿಲ್ಪದ ಅವಶೇಷಗಳನ್ನು ಪತ್ತೆಹಚ್ಚಲು ವೈಜ್ಞಾನಿಕ ಹಾಗೂ ಭೌತಿಕ ಸಮೀಕ್ಷೆ ಅತ್ಯಗತ್ಯ. ಸಮೀಕ್ಷೆ ನಡೆಸದೆ ಈ ಸ್ಥಳದ ನಿಖರವಾದ ಇತಿಹಾಸವನ್ನು ಮೌಲ್ಯಮಾಪನ ಮಾಡಲು ಸಾಧ್ಯವಿಲ್ಲ ಎಂದು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಟ್ಟಿದ್ದಾರೆ.
ತಾಜ್ ಮಹಲ್ ಸುತ್ತಲಿನ ಈ ಕಾನೂನು ಹೋರಾಟವು ಇಂದಿನದಲ್ಲ, ಇದು 2015 ರಲ್ಲಿ ಆಗ್ರಾದ ಸ್ಥಳೀಯ ನ್ಯಾಯಾಲಯದಲ್ಲಿ ಆರಂಭವಾಗಿತ್ತು. ಆಗ್ರಾದ ಸಿವಿಲ್ ಕೋರ್ಟ್‌ನಲ್ಲಿ ಮೊದಲು ದಾವೆ ಹೂಡಿದ್ದ ಅರ್ಜಿದಾರರು, ತಾಜ್ ಮಹಲ್ ಆವರಣದಲ್ಲಿ ಹಿಂದೂ ಧಾರ್ಮಿಕ ಮೂರ್ತಿಗಳು ಹಾಗೂ ವಾಸ್ತುಶಿಲ್ಪದ ಶೈಲಿಗಳು ಇವೆಯೇ ಎಂಬುದನ್ನು ಸ್ಥಳ ಪರಿಶೀಲನೆ ನಡೆಸಿ ವರದಿ ನೀಡಲು 'ಅಡ್ವೊಕೇಟ್ ಕಮಿಷನರ್' ಅವರನ್ನು ನೇಮಕ ಮಾಡಬೇಕೆಂದು ಕೋರಿದ್ದರು. ಆದರೆ ತಾಂತ್ರಿಕ ಕಾರಣಗಳನ್ನು ನೀಡಿ 2019 ರಲ್ಲಿ ಸಿವಿಲ್ ನ್ಯಾಯಾಧೀಶರು ಈ ಅರ್ಜಿಯನ್ನು ವಜಾಗೊಳಿಸಿದ್ದರು. ಇದರ ವಿರುದ್ಧ ಅರ್ಜಿದಾರರು ಜಿಲ್ಲಾ ನ್ಯಾಯಾಲಯದ ಮೆಟ್ಟಿಲೇರಿದ್ದರಾದರೂ, ಅಲ್ಲಿಯೂ ಏಪ್ರಿಲ್ 4, 2026 ರಂದು ಅರ್ಜಿ ಕಾನೂನುಬದ್ಧವಾಗಿ ಮಾನ್ಯತೆಗೆ ಅರ್ಹವಲ್ಲ ಎಂದು ವಜಾಗೊಳಿಸಲಾಗಿತ್ತು.

