ಬೆಂಗಳೂರು: ಈಗಾಗಲೇ ಪಾಠ, ಬಿಸಿಯೂಟ, ಪರೀಕ್ಷೆ, ಮೌಲ್ಯಮಾಪನ, ಜಾತಿ ಗಣತಿ ಹೀಗೆ ಹತ್ತಾರು ಜವಾಬ್ದಾರಿಗಳಿಂದ ಹೈರಾಣಾಗಿರುವ ರಾಜ್ಯದ ಸರ್ಕಾರಿ ಶಾಲಾ ಶಿಕ್ಷಕರಿಗೆ (Teachers) ಈಗ ಮತ್ತೊಂದು ಹೆಚ್ಚುವರಿ ಕೆಲಸದ ಹೊರೆ ಬಿದ್ದಿದೆ. ಏಪ್ರಿಲ್ 16 ರಿಂದ ರಾಜ್ಯಾದ್ಯಂತ ಆರಂಭವಾಗಲಿರುವ 2027ರ ಜನಗಣತಿ (Census) ಕಾರ್ಯಕ್ಕೆ ಶಿಕ್ಷಣ ಇಲಾಖೆಯು (Department of Education) ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಶಿಕ್ಷಕರನ್ನು ನಿಯೋಜಿಸುತ್ತಿದ್ದು, ಸರ್ಕಾರದ ಈ ನಿರ್ಧಾರಕ್ಕೆ ಶಿಕ್ಷಕ ವಲಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ರಾಜ್ಯದ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರು ಪ್ರಸ್ತುತ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಕರ್ತವ್ಯ ಹಾಗೂ ಮೌಲ್ಯಮಾಪನ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಏಪ್ರಿಲ್ 7ರಿಂದ 12ರವರೆಗೆ ಉತ್ತರ ಪತ್ರಿಕೆಗಳ ಮೌಲ್ಯಮಾಪನ ನಡೆಯಲಿದ್ದು, ಇದು ಮುಗಿದ ತಕ್ಷಣವೇ ಅಂದರೆ ಏಪ್ರಿಲ್ 16ರಿಂದ ಶಿಕ್ಷಕರು ಮನೆ ಮನೆಗೆ ತೆರಳಿ ಜನಗಣತಿಯ ಮಾಹಿತಿ ಸಂಗ್ರಹಿಸಬೇಕಿದೆ. ಬಿರು ಬೇಸಿಗೆಯ ನಡುವೆಯೂ ಬೆಳಗ್ಗೆ ಮತ್ತು ಸಂಜೆ ಸುದೀರ್ಘ ಅವಧಿಯವರೆಗೆ ಕೆಲಸ ಮಾಡಬೇಕಿರುವುದು ಶಿಕ್ಷಕರ ಆತಂಕಕ್ಕೆ ಕಾರಣವಾಗಿದೆ.
ಈ ಹಿಂದಿನ ವರ್ಷಗಳಲ್ಲಿ ಇಂತಹ ಸಮೀಕ್ಷೆಗಳ ಕಾರಣದಿಂದಾಗಿ ಪಠ್ಯಕ್ರಮ ಮುಗಿಸಲು ಶಿಕ್ಷಕರು ಹರಸಾಹಸ ಪಟ್ಟಿದ್ದರು. ಈಗ ಮತ್ತೆ ಅದೇ ಪರಿಸ್ಥಿತಿ ಮರುಕಳಿಸುತ್ತಿದ್ದು, ತಮಗೆ ವಿಶ್ರಾಂತಿಯೇ ಇಲ್ಲದಂತಾಗಿದೆ ಎಂದು ಶಿಕ್ಷಕರು ಅಳಲು ತೋಡಿಕೊಳ್ಳುತ್ತಿದ್ದಾರೆ. ವಿಶೇಷವಾಗಿ 50 ವರ್ಷ ಮೇಲ್ಪಟ್ಟ ಅನಾರೋಗ್ಯ ಪೀಡಿತ ಶಿಕ್ಷಕರಿಗೆ ಹಾಗೂ ಪರೀಕ್ಷಾ ಮೌಲ್ಯಮಾಪನದಲ್ಲಿರುವವರಿಗೆ ಈ ಕಾರ್ಯದಿಂದ ವಿನಾಯಿತಿ ನೀಡಬೇಕು ಎಂಬ ಬೇಡಿಕೆಯನ್ನು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಮುಂದಿಟ್ಟಿದೆ. ಆದರೆ ಈ ಮನವಿಯನ್ನು ಕಂದಾಯ ಇಲಾಖೆ ಪುರಸ್ಕರಿಸಿಲ್ಲ ಎನ್ನಲಾಗಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು, ಶಿಕ್ಷಕರ ಮೇಲಿನ ಕೆಲಸದ ಒತ್ತಡದ ಅರಿವು ನಮಗಿದೆ. ಆದರೆ ಜನಗಣತಿಯು ಅತ್ಯಂತ ಪ್ರಮುಖವಾದ ದತ್ತಾಂಶ ಸಂಗ್ರಹಣಾ ಕಾರ್ಯವಾಗಿದ್ದು, ಇದನ್ನು ಖಾಸಗಿಯವರಿಗೆ ಅಥವಾ ಹೊರಗುತ್ತಿಗೆಗೆ ನೀಡಲು ಸಾಧ್ಯವಿಲ್ಲ. ಹೀಗಾಗಿ ಅನಿವಾರ್ಯವಾಗಿ ಶಿಕ್ಷಕರನ್ನೇ ಬಳಸಿಕೊಳ್ಳಲಾಗುತ್ತಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಒಟ್ಟಿನಲ್ಲಿ, ಬೇಸಿಗೆ ರಜೆಯ ಅವಧಿಯಲ್ಲಿ ನೆಮ್ಮದಿಯಾಗಿ ಇರಬೇಕಿದ್ದ ಶಿಕ್ಷಕರು ಈಗ ಬಿಸಿಲಿನಲ್ಲಿ ಮನೆ ಮನೆ ಅಲೆಯುವ ಅನಿವಾರ್ಯತೆಗೆ ಸಿಲುಕಿದ್ದಾರೆ.

