Dailyhunt Logo
  • Light mode
    Follow system
    Dark mode
    • Play Story
    • App Story
TECH NEWS : ಹೊಸ ರೂಲ್ಸ್ ಪರಿಚಯಿಸಿದ ಮೆಟಾ.. ಇಲ್ಲಿದೆ ಸಂಪೂರ್ಣ ಮಾಹಿತಿ

TECH NEWS : ಹೊಸ ರೂಲ್ಸ್ ಪರಿಚಯಿಸಿದ ಮೆಟಾ.. ಇಲ್ಲಿದೆ ಸಂಪೂರ್ಣ ಮಾಹಿತಿ

Navasamaja.com 1 week ago

ದಿಹರೆಯದವರು ಸಾಮಾಜಿಕ ಜಾಲತಾಣಗಳಲ್ಲಿ (social Media) ಹೆಚ್ಚು ಸಮಯ ಕಳೆಯುವುದನ್ನು ನಿಯಂತ್ರಿಸಲು ಮೆಟಾ (Meta) ಮಹತ್ವದ ಬದಲಾವಣೆಗಳನ್ನು (Tech News) ತರಲು ಮುಂದಾಗಿದೆ. ಇನ್‌ಸ್ಟಾಗ್ರಾಂ (Instagram) ಮತ್ತು ಫೇಸ್‌ಬುಕ್ (Facebook) ಬಳಸುವ 18 ವರ್ಷದೊಳಗಿನವರಿಗೆ ದಿನಕ್ಕೆ ಎರಡು ಗಂಟೆಗಳ ಬಳಕೆ ಮಿತಿ, ಮಧ್ಯರಾತ್ರಿ ಬಳಕೆಗೆ ನಿರ್ಬಂಧ ಹಾಗೂ ಶಾಲಾ ಸಮಯದಲ್ಲಿ ನೋಟಿಫಿಕೇಶನ್‌ ಸ್ಥಗಿತ ಸೇರಿದಂತೆ ಹಲವು ಹೊಸ ನಿಯಮಗಳು ಜಾರಿಗೆ ಬರಲಿವೆ.

ಅಮೆರಿಕದ 47 ರಾಜ್ಯಗಳು, ಡಿಸ್ಟ್ರಿಕ್ಟ್ ಆಫ್ ಕೊಲಂಬಿಯಾ ಹಾಗೂ ಕೆಲವು ಅಮೆರಿಕನ್ ಪ್ರದೇಶಗಳೊಂದಿಗೆ ಮೆಟಾ ಮಾಡಿಕೊಂಡಿರುವ ಒಪ್ಪಂದದ ಭಾಗವಾಗಿ ಈ ಬದಲಾವಣೆಗಳನ್ನು ತರಲಾಗುತ್ತಿದೆ. ಸಾಮಾಜಿಕ ಜಾಲತಾಣಗಳ ವಿನ್ಯಾಸ ಯುವ ಬಳಕೆದಾರರಲ್ಲಿ ಅತಿಯಾದ ಬಳಕೆಗೆ ಕಾರಣವಾಗುತ್ತಿದೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ಒಪ್ಪಂದ ನಡೆದಿದೆ.

ಹೊಸ ನಿಯಮದ ಪ್ರಕಾರ, 18 ವರ್ಷದೊಳಗಿನವರಿಗೆ ಇನ್‌ಸ್ಟಾಗ್ರಾಂ ಮತ್ತು ಫೇಸ್‌ಬುಕ್ ಬಳಕೆಗೆ ಡಿಫಾಲ್ಟ್ ಆಗಿ ದಿನಕ್ಕೆ ಎರಡು ಗಂಟೆಗಳ ಮಿತಿ ಇರಲಿದೆ. ಆದರೆ ಪೋಷಕರು ತಮ್ಮ ನಿಯಂತ್ರಣ ವ್ಯವಸ್ಥೆಯ ಮೂಲಕ ಹೆಚ್ಚುವರಿ ಸಮಯಕ್ಕೆ ಅವಕಾಶ ನೀಡಬಹುದು. ರಾತ್ರಿ 12ರಿಂದ ಬೆಳಗ್ಗೆ 6ರವರೆಗೆ ಆಯಪ್ ಬಳಕೆಯನ್ನು ನಿರ್ಬಂಧಿಸಲಾಗುತ್ತದೆ.

ಶಾಲಾ ಸಮಯದಲ್ಲೂ ನೋಟಿಫಿಕೇಶನ್‌ಗಳಿಗೆ ಬ್ರೇಕ್ ಬೀಳಲಿದೆ. ಬೆಳಗ್ಗೆ 8ರಿಂದ ಮಧ್ಯಾಹ್ನ 3ರವರೆಗೆ ಹದಿಹರೆಯದ ಬಳಕೆದಾರರಿಗೆ ನೋಟಿಫಿಕೇಶನ್‌ಗಳನ್ನು ಸೈಲೆಂಟ್ ಮಾಡಲಾಗುತ್ತದೆ. ದೀರ್ಘಕಾಲ ಆಯಪ್ ಬಳಸಿದಾಗ ಎಚ್ಚರಿಕೆ ನೀಡುವ ವ್ಯವಸ್ಥೆಯೂ ಬರಲಿದೆ.

ಇನ್ನು ಸ್ಕ್ರಾಲ್ ಮಾಡುವಾಗ ವೀಡಿಯೊಗಳು ಸ್ವಯಂಚಾಲಿತವಾಗಿ ಪ್ಲೇ ಆಗದಂತೆ ಆಟೋಪ್ಲೇ ಆಯ್ಕೆಯನ್ನು ಆಫ್ ಮಾಡಿಕೊಳ್ಳಲು ಅವಕಾಶ ಸಿಗಲಿದೆ. ತಮ್ಮ ಚಟುವಟಿಕೆ ಮತ್ತು ಆಸಕ್ತಿಗಳ ಆಧಾರದ ಮೇಲೆ ಅಲ್ಗಾರಿದಮ್ ಆಯ್ಕೆ ಮಾಡುವ ಫೀಡ್ ಬದಲಿಗೆ ಸಾಮಾನ್ಯ ಫೀಡ್ ವೀಕ್ಷಿಸುವ ಆಯ್ಕೆಯನ್ನೂ ಬಳಕೆದಾರರಿಗೆ ನೀಡಲಾಗುತ್ತದೆ.

ಯುವ ಬಳಕೆದಾರರ ಪೋಸ್ಟ್‌ಗಳಲ್ಲಿ ಲೈಕ್‌ಗಳ ಸಂಖ್ಯೆಯನ್ನು ಮರೆಮಾಡಲಾಗುತ್ತದೆ. ಕಾಸ್ಮೆಟಿಕ್ ಸರ್ಜರಿಯನ್ನು ಹೋಲುವಂತೆ ಮುಖದ ರೂಪ ಬದಲಿಸುವ ಕೆಲವು ಫಿಲ್ಟರ್‌ಗಳು ಮತ್ತು ಎಫೆಕ್ಟ್‌ಗಳ ಬಳಕೆಯ ಮೇಲೂ ನಿರ್ಬಂಧ ಹೇರಲಾಗುತ್ತದೆ.

ಅಪರಿಚಿತ ವಯಸ್ಕರಿಂದ ಕಿಶೋರರಿಗೆ ಬರುವ ಅನಗತ್ಯ ಸಂಪರ್ಕವನ್ನು ತಡೆಯಲು ಮೆಟಾ ಮತ್ತಷ್ಟು ಸುರಕ್ಷತಾ ಕ್ರಮಗಳನ್ನು ಜಾರಿಗೆ ತರಲಿದೆ. ಹಾನಿಕಾರಕ ಕಂಟೆಂಟ್‌ ಕುರಿತು ದೂರು ನೀಡಲು ಹೊಸ ವ್ಯವಸ್ಥೆಯನ್ನೂ ಪರಿಚಯಿಸಲಾಗುತ್ತಿದ್ದು, ಇಂತಹ ಹೆಚ್ಚಿನ ವರದಿಗಳಿಗೆ ತ್ವರಿತವಾಗಿ ಪ್ರತಿಕ್ರಿಯಿಸುವ ಗುರಿಯನ್ನು ಕಂಪನಿ ಹೊಂದಿದೆ.

ಮಕ್ಕಳ ಆನ್‌ಲೈನ್ ಚಟುವಟಿಕೆ ಮೇಲೆ ಪೋಷಕರ ನಿಗಾವನ್ನು ಹೆಚ್ಚಿಸುವ ವ್ಯವಸ್ಥೆಯೂ ಮುಂದುವರಿಯಲಿದೆ. ಮಕ್ಕಳು ಎಷ್ಟು ಸಮಯ ಆಯಪ್ ಬಳಸುತ್ತಿದ್ದಾರೆ, ಏನು ಸರ್ಚ್ ಮಾಡುತ್ತಿದ್ದಾರೆ ಮತ್ತು ವಯಸ್ಕರೊಂದಿಗೆ ನಡೆಸುತ್ತಿರುವ ಸಂವಹನದ ಕುರಿತು ಪೋಷಕರಿಗೆ ಮಾಹಿತಿ ಸಿಗಲಿದೆ.

ಇದರ ಜೊತೆಗೆ ವಯಸ್ಸಿನ ಪರಿಶೀಲನಾ ತಂತ್ರಜ್ಞಾನವನ್ನು ಮತ್ತಷ್ಟು ಬಲಪಡಿಸಲು ಮೆಟಾ ಮುಂದಾಗಿದೆ. 13 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಖಾತೆ ಹೊಂದಿರುವುದನ್ನು ಪತ್ತೆಹಚ್ಚಿ ಅಂತಹ ಖಾತೆಗಳನ್ನು ತೆಗೆದುಹಾಕುವ ಕ್ರಮಕ್ಕೂ ಒತ್ತು ನೀಡಲಾಗುತ್ತದೆ. ಹೊಸ ಸುರಕ್ಷತಾ ಕ್ರಮಗಳು ಮುಂದಿನ ತಿಂಗಳುಗಳಲ್ಲಿ ಹಂತ ಹಂತವಾಗಿ ಜಾರಿಗೆ ಬರಲಿವೆ.

Dailyhunt
Disclaimer: This content has not been generated, created or edited by Dailyhunt. Publisher: Navasamaja