ಹೈದರಾಬಾದ್: ಕಾಲೇಜು ಕ್ಯಾಂಪಸ್‌ಗಳಲ್ಲಿ (College Promotions) ಸಿನಿಮಾ ಪ್ರಚಾರ ಹಾಗೂ ಖಾಸಗಿ ಕಾರ್ಯಕ್ರಮಗಳಿಗೆ ತೆಲಂಗಾಣ (Telangana) ಸರ್ಕಾರ (Revanth Reddy)ಸಂಪೂರ್ಣ ನಿಷೇಧ ಹೇರಲು ಮುಂದಾಗಿದೆ. ಇತ್ತೀಚಿನ ಕಾರ್ಯಕ್ರಮಗಳಲ್ಲಿ ನಡೆದ ಅವಘಡಗಳ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಸುರಕ್ಷತೆಯ ದೃಷ್ಟಿಯಿಂದ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.
ಖಾಸಗಿ ಕಾಲೇಜುಗಳಿಗೆ ರೇವಂತ್ ರೆಡ್ಡಿ ಸರ್ಕಾರದ ಮೂಗುದಾರ
ಕೆಲವು ಖಾಸಗಿ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಗಳು ವಾಣಿಜ್ಯ ಉದ್ದೇಶದ ಸಿನಿಮಾ ಪ್ರಚಾರ ಹಾಗೂ ಇತರ ಖಾಸಗಿ ಇವೆಂಟ್‌ಗಳಿಗೆ ಅವಕಾಶ ನೀಡಿ, ವಿದ್ಯಾರ್ಥಿಗಳನ್ನು ಅನ್ಯ ಚಟುವಟಿಕೆಗಳಿಗೆ ಬಳಸಿಕೊಳ್ಳುತ್ತಿರುವ ಬಗ್ಗೆ ದೂರುಗಳು ಕೇಳಿಬಂದಿವೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಮುಖ್ಯಮಂತ್ರಿ ರೇವಂತ್ ರೆಡ್ಡಿ ನೇತೃತ್ವದ ಸರ್ಕಾರ, ಶೈಕ್ಷಣಿಕ ಕ್ಯಾಂಪಸ್‌ಗಳನ್ನು ಕೇವಲ ಪಾಠ-ಪ್ರವಚನ ಹಾಗೂ ಕ್ರೀಡಾ ಚಟುವಟಿಕೆಗಳಿಗೆ ಮಾತ್ರ ಸೀಮಿತಗೊಳಿಸಲು ನಿರ್ಧರಿಸಿದೆ.
ವಿದ್ಯಾರ್ಥಿಗಳನ್ನು ವಾಣಿಜ್ಯ ಮತ್ತು ರಾಜಕೀಯ ಪ್ರಚಾರಗಳಿಗೆ ಬಳಸಿಕೊಳ್ಳುವುದರ ವಿರುದ್ಧ ಸರ್ಕಾರ ತೀವ್ರ ಅಸಮಾಧಾನ ಹೊರಹಾಕಿದ್ದು, ಯಾವ ಕಾರ್ಯಕ್ರಮಗಳಿಗೆ ಅನುಮತಿ ನೀಡಬಹುದು ಹಾಗೂ ಯಾವುದನ್ನು ನಿರ್ಬಂಧಿಸಬೇಕು ಎಂಬ ಬಗ್ಗೆ ಸಮಗ್ರ ವರದಿ ಸಲ್ಲಿಸುವಂತೆ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದೆ.
ಕಠಿಣ ನಿರ್ಧಾರಕ್ಕೆ ಕಾರಣವಾಯ್ತು 'ಟಾಕ್ಸಿಕ್' ಮತ್ತು ದಾಂಡಿಯಾ ಅವಘಡ!
ತೆಲಂಗಾಣ ಸರ್ಕಾರದ ಈ ಕಠಿಣ ಹೆಜ್ಜೆಯ ಹಿಂದೆ ಇತ್ತೀಚೆಗೆ ನಡೆದ ಎರಡು ದುರ್ಘಟನೆಗಳು ಪ್ರಮುಖ ಕಾರಣವಾಗಿವೆ ಎನ್ನಲಾಗಿದೆ. ಮಲ್ಲಾರೆಡ್ಡಿ ವಿಶ್ವವಿದ್ಯಾಲಯದ ಮೈದಾನದಲ್ಲಿ ಆಯೋಜಿಸಲಾಗಿದ್ದ 'ಟಾಕ್ಸಿಕ್' ಸಿನಿಮಾದ ಪ್ರಚಾರ ಕಾರ್ಯಕ್ರಮದಲ್ಲಿ ಭಾರಿ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಸೇರಿದ್ದರು. ಈ ವೇಳೆ ಸೌಂಡ್ ಬಾಕ್ಸ್‌ಗಳು ಕುಸಿದು ಬಿದ್ದು ಕೆಲವು ವಿದ್ಯಾರ್ಥಿಗಳು ಗಾಯಗೊಂಡಿದ್ದರು.
ಇದರ ಬೆನ್ನಲ್ಲೇ, ಮತ್ತೊಂದು ಖಾಸಗಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ನಡೆದ 'ದಾಂಡಿಯಾ ನೈಟ್' ಕಾರ್ಯಕ್ರಮದಲ್ಲಿ 80 ಅಡಿ ಎತ್ತರದ ತಾತ್ಕಾಲಿಕ ಲೈಟಿಂಗ್ ಕಂಬ ಉರುಳಿಬಿದ್ದ ಪರಿಣಾಮ ಓರ್ವ ವಿದ್ಯಾರ್ಥಿ ಮೃತಪಟ್ಟು, ಕನಿಷ್ಠ 14 ಮಂದಿ ಗಾಯಗೊಂಡಿದ್ದರು. ಈ ಘಟನೆಗಳು ವಿದ್ಯಾರ್ಥಿಗಳ ಸುರಕ್ಷತೆಯ ಬಗ್ಗೆ ದೊಡ್ಡ ಪ್ರಶ್ನೆ ಹುಟ್ಟುಹಾಕಿದ್ದವು.
ಇಲಾಖೆ ಅನುಮತಿ ಕಡ್ಡಾಯ
ಸಿನಿಮಾ ಬಿಡುಗಡೆಯ ನೆಪದಲ್ಲಿ ಕಾಲೇಜುಗಳಿಗೆ ರಜೆ ಘೋಷಿಸುವ ಪ್ರವೃತ್ತಿಯ ವಿರುದ್ಧ ತೆಲಂಗಾಣ ಉನ್ನತ ಶಿಕ್ಷಣ ಮಂಡಳಿಯು ಈಗಾಗಲೇ ಶಿಕ್ಷಣ ಸಂಸ್ಥೆಗಳಿಗೆ ನೋಟಿಸ್ ಜಾರಿ ಮಾಡಿದೆ. ಪ್ರಚಾರದ ಹೆಸರಿನಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯ ಮತ್ತು ಶಿಸ್ತಿಗೆ ಧಕ್ಕೆ ತರುವುದನ್ನು ಸಹಿಸುವುದಿಲ್ಲ ಎಂದು ಸರ್ಕಾರ ಎಚ್ಚರಿಕೆ ನೀಡಿದೆ.
ಹೊಸ ನಿಯಮಗಳ ಅನ್ವಯ, ಮುಂದಿನ ದಿನಗಳಲ್ಲಿ ಕ್ಯಾಂಪಸ್‌ಗಳಲ್ಲಿ ಯಾವುದೇ ದೊಡ್ಡ ಕಾರ್ಯಕ್ರಮಗಳನ್ನು ಆಯೋಜಿಸುವ ಮುನ್ನ ಶಿಕ್ಷಣ ಇಲಾಖೆ ಹಾಗೂ ಪೊಲೀಸ್ ಇಲಾಖೆಯ ಪೂರ್ವಾನುಮತಿ ಪಡೆಯುವುದನ್ನು ಕಡ್ಡಾಯಗೊಳಿಸಲು ಸರ್ಕಾರ ಸಿದ್ಧತೆ ನಡೆಸಿದೆ.

