ಹೈದರಾಬಾದ್: ಆಂಧ್ರಪ್ರದೇಶದ (Andra Pradesh) ಕಲಿಯುಗ ವೈಕುಂಠ ತಿರುಪತಿ (Tirupati) ವೆಂಕಟೇಶ್ವರ ಸ್ವಾಮಿ ದೇಗುಲದ ಪ್ರಸಿದ್ಧ ಲಡ್ಡು ಪ್ರಸಾದದ (Laddu Prasada) ಮಾರಾಟದಲ್ಲಿ ಮೇ ತಿಂಗಳಲ್ಲಿ ಸಾರ್ವಕಾಲಿಕ ಹೊಸ ದಾಖಲೆ (Record) ಸೃಷ್ಟಿಯಾಗಿದೆ.
ಕೇವಲ ಮೇ ಒಂದೇ ತಿಂಗಳ ಅವಧಿಯಲ್ಲಿ ಬರೋಬ್ಬರಿ 1.2 ಕೋಟಿಗೂ ಹೆಚ್ಚು ಲಡ್ಡುಗಳು ಮಾರಾಟವಾಗಿವೆ. ತಿರುಮಲ ಇತಿಹಾಸದಲ್ಲೇ ಇದು ಈವರೆಗಿನ ಅತಿ ಹೆಚ್ಚು ಮಾಸಿಕ ಲಡ್ಡು ಮಾರಾಟದ ದಾಖಲೆಯಾಗಿದೆ. ಈ ಹಿಂದೆ 2024 ರಲ್ಲಿ 1.01 ಕೋಟಿ ಹಾಗೂ 2025 ರಲ್ಲಿ 1.1 ಕೋಟಿ ಲಡ್ಡುಗಳು ಮಾರಾಟವಾಗಿದ್ದೇ ದೊಡ್ಡ ದಾಖಲೆಯಾಗಿತ್ತು, ಈಗ ಈ ಹಿಂದಿನ ಎಲ್ಲಾ ದಾಖಲೆಗಳನ್ನು ಧೂಳೀಪಟ ಮಾಡಲಾಗಿದೆ. ನಕಲಿ ತುಪ್ಪದ ವಂಚನೆ: ದೇಶದ 15 ಕಡೆ ಇ.ಡಿ. ದಿಢೀರ್ ರೇಡ್! ಒಂದೆಡೆ ಲಡ್ಡು ಮಾರಾಟ ದಾಖಲೆ ಬರೆಯುತ್ತಿದ್ದರೆ, ಇನ್ನೊಂದೆಡೆ ತಿರುಮಲ ತಿರುಪತಿ ದೇವಸ್ಥಾನದ (TTD) ಲಡ್ಡು ತಯಾರಿಕೆಗೆ ಬಳಸುವ ತುಪ್ಪದ ಕಲಬೆರಕೆ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇ.ಡಿ.) ಬಿಗಿ ಕ್ರಮ ಕೈಗೊಂಡಿದೆ. ಬುಧವಾರ ದೇಶದ ವಿವಿಧ ರಾಜ್ಯಗಳ ಒಟ್ಟು 15 ಪ್ರಮುಖ ಸ್ಥಳಗಳಲ್ಲಿ ಇ.ಡಿ. ಅಧಿಕಾರಿಗಳು ಏಕಕಾಲಕ್ಕೆ ಬೃಹತ್ ಶೋಧ ನಡೆಸಿದ್ದಾರೆ. ಈ ದಾಳಿಯ ಸಂದರ್ಭದಲ್ಲಿ ಬರೋಬ್ಬರಿ 60 ಲಕ್ಷ ರೂಪಾಯಿ ನಗದು ಹಣವನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ದೆಹಲಿ, ಡೆಹ್ರಾಡೂನ್, ಮುಂಬೈ, ಆಂಧ್ರಪ್ರದೇಶದ ಗುಂಟೂರು ಮತ್ತು ತಮಿಳುನಾಡಿನ ದಿಂಡಿಗಲ್ ಸೇರಿದಂತೆ ದೇಶದ ಹಲವು ಭಾಗಗಳಲ್ಲಿ ಈ ಇ.ಡಿ. ರೇಡ್ ನಡೆದಿದೆ. ಪ್ರಮುಖವಾಗಿ ದಿಂಡಿಗಲ್‌ನಲ್ಲಿರುವ 'ಎಆರ್ ಡೈರಿ ಫುಡ್ ಪ್ರೈವೇಟ್ ಲಿಮಿಟೆಡ್', ಅಹಲ್ಯಾನಗರದ 'ಮಾಲ್ಗಂಗಾ ಮಿಲ್ಕ್ ಆಯಂಡ್ ಆಗ್ರೋ ಪ್ರಾಡಕ್ಟ್ಸ್ ಪ್ರೈವೇಟ್ ಲಿಮಿಟೆಡ್' ಮತ್ತು ರೂರ್ಕಿಯಲ್ಲಿರುವ 'ಭೋಲೆ ಬಾಬಾ ಆರ್ಗಾನಿಕ್ ಡೈರಿ ಮಿಲ್ಕ್ ಪ್ರೈವೇಟ್ ಲಿಮಿಟೆಡ್' ಕಂಪನಿಗಳ ನಿರ್ದೇಶಕರ ಮನೆಗಳು ಹಾಗೂ ಕಚೇರಿ ಆವರಣಗಳ ಮೇಲೆ ಅಧಿಕಾರಿಗಳು ಮುಗಿಬಿದ್ದಿದ್ದಾರೆ. ಅಕ್ರಮ ಹಣದ ಹರಿವಿನ ಮೇಲೆ ಕಣ್ಣಿಟ್ಟ ಇ.ಡಿ ಪವಿತ್ರ ಲಡ್ಡು ಪ್ರಸಾದಕ್ಕೆ ನಕಲಿ ತುಪ್ಪವನ್ನು ಪೂರೈಸಿ ಭಕ್ತರ ಭಾವನೆಗಳ ಜೊತೆ ಆಟವಾಡಿರುವ ಕಂಪನಿಗಳು, ಈ ವಂಚನೆಯಿಂದ ಕೋಟ್ಯಂತರ ರೂಪಾಯಿ ಸಂಪಾದಿಸಿರುವುದು ಬೆಳಕಿಗೆ ಬಂದಿದೆ. ನಕಲಿ ತುಪ್ಪ ಮಾರಾಟ ಮಾಡಿದ್ದರಿಂದ ಬಂದ ಈ ಭಾರಿ ಪ್ರಮಾಣದ ಅಕ್ರಮ ಆದಾಯ ಎಲ್ಲೆಲ್ಲಿಗೆ ಹರಿದು ಹೋಗಿದೆ ಮತ್ತು ಈ ಕಪ್ಪು ಹಣವನ್ನು ಹೇಗೆ ಬಿಳಿ ಮಾಡಲಾಗಿದೆ ಎಂಬ ಮನಿ ಲಾಂಡರಿಂಗ್ ನೆಟ್‌ವರ್ಕ್ ಕುರಿತು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಈಗ ತೀವ್ರ ತನಿಖೆ ನಡೆಸುತ್ತಿದ್ದಾರೆ.

