Dailyhunt
TOLLYWOOD: ಸ್ಟಾರ್‌ ಸಿನಿಮಾಗಳಿಗೆ ಶಾಕ್‌ ಕೊಟ್ಟ ಸಿಂಗಲ್ ಸ್ಕ್ರೀನ್ ಮಾಲೀಕರು, ಟಾಕ್ಸಿಕ್‌ಗೆ ಸಂಕಷ್ಟ ಫಿಕ್ಸ್?

TOLLYWOOD: ಸ್ಟಾರ್‌ ಸಿನಿಮಾಗಳಿಗೆ ಶಾಕ್‌ ಕೊಟ್ಟ ಸಿಂಗಲ್ ಸ್ಕ್ರೀನ್ ಮಾಲೀಕರು, ಟಾಕ್ಸಿಕ್‌ಗೆ ಸಂಕಷ್ಟ ಫಿಕ್ಸ್?

Navasamaja.com 1 week ago

ಹೈದರಾಬಾದ್: ಕಳೆದ ಹಲವು ವರ್ಷಗಳಿಂದ ಬಾಡಿಗೆ ಸಮಸ್ಯೆಯಿಂದ ಕಂಗಾಲಾಗಿದ್ದ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳ ಮಾಲೀಕರು ಈಗ ದೊಡ್ಡ ನಿರ್ಧಾರವೊಂದನ್ನು (Tollywood) ಮಾಡಿದ್ದು, ದೊಡ್ಡ ಸಿನಿಮಾಗಳಿಗೆ ಸಮಸ್ಯೆ ಆಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಮಲ್ಟಿಪ್ಲೆಕ್ಸ್ ಮಾದರಿ ಪಾಲನೆ ಮಾಡುವ ನಿರ್ಧಾರ

ತೆಲಂಗಾಣದಲ್ಲಿ ಇನ್ಮುಂದೆ ಚಿತ್ರಮಂದಿರಗಳನ್ನು ಬಾಡಿಗೆಗೆ ನೀಡುವ ಬದಲು, ಮಲ್ಟಿಪ್ಲೆಕ್ಸ್ ಮಾದರಿಯಲ್ಲೇ ಲಾಭ ಹಂಚಿಕೆ ಆಧಾರದ ಮೇಲೆ ಸಿನಿಮಾ ಪ್ರದರ್ಶನ ಮಾಡುವುದಾಗಿ ಮಾಲೀಕರು ಘೋಷಣೆ ಮಾಡಿದ್ದಾರೆ. ಏಪ್ರಿಲ್ 3ರಿಂದಲೇ ಈ ಹೊಸ ನಿಯಮ ಜಾರಿಗೆ ಬರಲಿದ್ದು, ಇದು ದೊಡ್ಡ ಸಿನಿಮಾಗಳಿಗೆ ಭಾರಿ ಪೆಟ್ಟು ನೀಡುವ ಸಾಧ್ಯತೆಯಿದೆ.

ಸಾಮಾನ್ಯವಾಗಿ ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳಲ್ಲಿ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳು ಬಾಡಿಗೆ ಮಾದರಿಯಲ್ಲಿ ಕೆಲಸ ಮಾಡುತ್ತವೆ. ಅಂದರೆ ಚಿತ್ರಮಂದಿರದಲ್ಲಿ ಸಿನಿಮಾ ಓಡಲಿ ಅಥವಾ ಬಿಡಲಿ, ನಿರ್ಮಾಪಕರು ಚಿತ್ರಮಂದಿರಕ್ಕೆ ನಿಗದಿತ ಬಾಡಿಗೆ ಕೊಡುತ್ತಾರೆ. ಆದರೆ ಇನ್ಮುಂದೆ ತೆಲಂಗಾಣದಲ್ಲಿ 60-50-40 ಎಂಬ ಹೊಸ ಸೂತ್ರ ಅನ್ವಯ ಆಗಲಿದೆ. ಇದರ ಪ್ರಕಾರ, ಮೊದಲ ವಾರ ವಿತರಕರಿಗೆ ಶೇ. 60ರಷ್ಟು ಲಾಭ ಹೋದರೆ, ಎರಡನೇ ವಾರ ಶೇ. 50 ಮತ್ತು ಮೂರನೇ ವಾರ ಕೇವಲ ಶೇ. 40ರಷ್ಟು ಮಾತ್ರ ಲಾಭ ಸಿಗಲಿದೆ. ವಾರ ಕಳೆದಂತೆ ಚಿತ್ರಮಂದಿರದ ಮಾಲೀಕರ ಪಾಲೇ ಹೆಚ್ಚಾಗಲಿದೆ. ಹಾಗಾಗಿ ಇದರಿಂದ ದೊಡ್ಡ ಸಿನಿಮಾಗಳಿಗೆ ಲಾಭದ ವಿಚಾರದಲ್ಲಿ ಹೊಡೆತ ಬೀಳುತ್ತದೆ.

ಟಾಕ್ಸಿಕ್‌ ಸಿನಿಮಾಗೆ ಆಗುತ್ತಾ ಸಮಸ್ಯೆ?
ಈ ರೀತಿ ಹೊಸ ಮಾದರಿಯ ವ್ಯವಸ್ತೆ ಜಾರಿಗೆ ಬಂದರೆ ಅನೇಕ ಸಿನಿಮಾಗಳಿಗೆ ಸಮಸ್ಯೆ ಆಗುತ್ತದೆ. ಅದರಲ್ಲೂ ದೊಡ್ಡ ದೊಡ್ಡ ಸಿನಿಮಾಗಳಿಗೆ ಲಾಭ ಕಡಿಮೆ ಸಿಗುತ್ತದೆ. ಸ್ಟಾರ್‌ ನಟರ ಸಿನಿಮಾಗಳು ಸಂಕಷ್ಟ ಅನುಭವಿಸಬೇಕಾಗುತ್ತದೆ. ಸಾಮಾನ್ಯವಾಗಿ ಈ ಸಿಂಗಲ್‌ ಸ್ಕ್ರೀನ್‌ ಚಿತ್ರಮಂದಿರಗಳಿಂದಲೇ ಸ್ಟಾರ್‌ ನಟರ ಸಿನಿಮಾಗೆ ಲಾಭ ಸಿಗುವುದು. ಅಲ್ಲಿಯೂ ಲಾಭ ಹಂಚಿಕೆ ನಿಯಮ ಬಂದರೆ ನಿರ್ಮಾಪಕರಿಗೆ ಕಷ್ಟವಾಗುತ್ತದೆ. ಹಾಗೆಯೇ, ಒಂದು ಷರತ್ತನ್ನ ಸಹ ಮಾಲೀಕರು ಇಟ್ಟಿದ್ದು, ಟಿಕೆಟ್ ದರ ಹೆಚ್ಚಳ ಮಾಡಿದರೆ ಮಾತ್ರ ದೊಡ್ಡ ಸಿನಿಮಾಗಳಿಗೆ ಶೇ. 2.50ರಷ್ಟು ಹೆಚ್ಚಿನ ಪಾಲು ನೀಡುವುದಾಗಿ ಹೇಳಿದ್ದಾರೆ.

ಸದ್ಯ ರಾಕಿಂಗ್‌ ಸ್ಟಾರ್‌ ಯಶ್‌ ಅಭಿನಯದ ಟಾಕ್ಸಿಕ್‌ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಅದರ ಜೊತೆಗೆ ಟಾಲಿವುಡ್‌ ಹೀರೋ ರಾಮ್‌ಚರಣ್‌ ಅಭಿನಯದ ಪೆದ್ದಿ ಸಹ ತೆರೆಗೆ ಅಪ್ಪಳಿಸಲಿದೆ. ಆದರೆ ಈ ಹೊಸ ನಿಯಮದ ಕಾರಣದಿಂದ ಲಾಭದ ವಿಚಾರದಲ್ಲಿ ಹೊಡೆತ ಬೀಳುವ ಸಾಧ್ಯತೆ ಇದೆ. ತೆಲಂಗಾಣದಲ್ಲಿ ಆರಂಭವಾಗಿರುವ ಈ ಬದಲಾವಣೆ ಮುಂದಿನ ದಿನಗಳಲ್ಲಿ ಕರ್ನಾಟಕ ಸೇರಿದಂತೆ ನೆರೆಯ ರಾಜ್ಯಗಳಿಗೂ ಹರಡುತ್ತದೆಯೇ ಎಂಬ ಕುತೂಹಲ ಮೂಡಿದೆ. ಒಂದು ವೇಳೆ ಎಲ್ಲಾ ಕಡೆ ಇದು ಜಾರಿಯಾದರೆ ಚಿತ್ರರಂಗದ ಆರ್ಥಿಕ ಲೆಕ್ಕಾಚಾರವೇ ಅದಲು ಬದಲಾಗಲಿದೆ.

Dailyhunt
Disclaimer: This content has not been generated, created or edited by Dailyhunt. Publisher: Navasamaja