ಆಂಧ್ರಪ್ರದೇಶ : ಸಿನಿಮಾ ಲೋಕದಲ್ಲಿ (Film industry) ಮಿಂಚಬೇಕೆಂಬ ಕನಸು ಹೊತ್ತು ಬರುವ ಪ್ರತಿಭಾನ್ವಿತರಿಗೆ 'ಕಾಸ್ಟಿಂಗ್ ಕೌಚ್' (Casting couch) ಎಂಬ ಪಿಡುಗು ಇಂದಿಗೂ ಸವಾಲಾಗಿದೆ. ಇತ್ತೀಚೆಗೆ ವಿದೇಶದಲ್ಲಿ ನೆಲೆಸಿರುವ ಭಾರತೀಯ ಮೂಲದ ಇನ್ಸ್ಟಾಗ್ರಾಂ ಪ್ರಭಾವಿ (Influencer) ಪೀಕು ನೆಮಿಲಿ (Piku Nemali) ಅವರು ತೆಲುಗು ಚಿತ್ರರಂಗದಲ್ಲಿ ತಮಗಾದ ಕಹಿ ಘಟನೆಯನ್ನು ಹಂಚಿಕೊಂಡಿದ್ದಾರೆ.
ತೆಲುಗು ಚಿತ್ರರಂಗದಲ್ಲಿ ಅವಕಾಶಕ್ಕಾಗಿ ಸಹಾಯಕ ನಿರ್ದೇಶಕರೊಬ್ಬರನ್ನು ಸಂಪರ್ಕಿಸಿದಾಗ, ಅವರು 'ಕಮಿಟ್ಮೆಂಟ್' ನೀಡುವಂತೆ ಕೇಳಿದ್ದಾರೆ. ಮೊದಲು ಇದನ್ನು ವೃತ್ತಿಪರ ನಿಷ್ಠೆ ಎಂದು ತಪ್ಪಾಗಿ ಭಾವಿಸಿದ್ದ ಯುವತಿಗೆ, ನಂತರ ಆತ ರೆಸಾರ್ಟ್‌ನಲ್ಲಿ ನಿರ್ಮಾಪಕರನ್ನು ಭೇಟಿಯಾಗಲು ಒತ್ತಾಯಿಸಿದಾಗ ಸಂಚು ಅರಿವಾಗಿದೆ. ಕೂಡಲೇ ಆಕೆ ಅಲರ್ಟ್ ಆಗಿದ್ದಾರೆ.
ಇಂತಹ ಕೆಟ್ಟ ವಾತಾವರಣದಿಂದಾಗಿ ಅನೇಕ ಪ್ರತಿಭೆಗಳು ಚಿತ್ರರಂಗದಿಂದ ದೂರ ಉಳಿಯುತ್ತಿದ್ದಾರೆ ಎಂದು ಪೀಕು ನೆಮಿಲಿ ಬೇಸರ ವ್ಯಕ್ತಪಡಿಸಿದ್ದಾರೆ.ಈ ಕುರಿತು ಪ್ರತಿಕ್ರಿಯಿಸಿರುವ ನಟಿ ಜಾನ್ಸಿ ಅವರು ಲೈಂಗಿಕ ದೌರ್ಜನ್ಯ ತಡೆ ಸಮಿತಿಗೆ ಅಧಿಕೃತ ದೂರು ನೀಡುವಂತೆ ಸಲಹೆ ನೀಡಿದ್ದಾರೆ. ದೂರು ದಾಖಲಾದಲ್ಲಿ ಸಮಿತಿಯು ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಮತ್ತು ಸಂತ್ರಸ್ತರಿಗೆ ನ್ಯಾಯ ಒದಗಿಸುವುದಾಗಿ ಭರವಸೆ ನೀಡಿದೆ.

