ಬೆಂಗಳೂರು: ಬಿಡದಿ ಟೌನ್‌ಶಿಪ್ ಯೋಜನೆಗೆ ಭಾರಿ ವಿರೋಧ ವ್ಯಕ್ತವಾಗುತ್ತಿರುವ ಬೆನ್ನಲ್ಲೇ, ರಾಜ್ಯ ಸರ್ಕಾರವು ದಶಕಗಳಿಂದ ನೆನೆಗುದಿಗೆ ಬಿದ್ದಿದ್ದ ಮತ್ತೊಂದು ಬೃಹತ್ ಯೋಜನೆಗೆ (Township) ಜೀವ ನೀಡಲು ಮುಂದಾಗಿದೆ. ಕೆಜಿಎಫ್ ಅಂದರೆ ಕೋಲಾರ ಚಿನ್ನದ ಗಣಿ ಪ್ರದೇಶದಲ್ಲಿ ಸುಸಜ್ಜಿತ ಸಮಗ್ರ ಟೌನ್‌ಶಿಪ್ ನಿರ್ಮಾಣ ಮಾಡಲು ಸರ್ಕಾರ ಹೊಸ ಹೆಜ್ಜೆ ಇಟ್ಟಿದೆ.
ಈ ಮಹತ್ವದ ಯೋಜನೆಗೆ ಸಂಬಂಧಿಸಿದಂತೆ ಸವಿವರವಾದ ವರದಿ ಹಾಗೂ ಮಾರ್ಗಸೂಚಿ ಸಿದ್ಧಪಡಿಸಲು ಅರ್ಹ ಸಲಹೆಗಾರರನ್ನು ನೇಮಿಸಿಕೊಳ್ಳಲು ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮವು (KUIDFC) ಇದೀಗ ಟೆಂಡರ್ ಕರೆದಿದೆ. ಖಾಸಗಿ-ಸಾರ್ವಜನಿಕ ಸಹಭಾಗಿತ್ವದಲ್ಲಿ ಯೋಜನೆ ಯೋಜನೆಯ ಹಿನ್ನೆಲೆ ಮತ್ತು ಉದ್ದೇಶ ಕಳೆದ ವರ್ಷ ಅಂದರೆ 2025ರ ಮಾರ್ಚ್‌ನಲ್ಲಿ ಅಂದಿನ ನಗರಾಭಿವೃದ್ಧಿ ಸಚಿವರಾಗಿದ್ದ ಬಿ.ಎಸ್. ಸುರೇಶ್ ಅವರು ಬಿಜಿಎಂಎಲ್‌ಗೆ ಸೇರಿದ ಜಾಗದಲ್ಲಿ ಈ ಟೌನ್‌ಶಿಪ್ ನಿರ್ಮಿಸುವ ಇಂಗಿತ ವ್ಯಕ್ತಪಡಿಸಿದ್ದರು. ಅದರ ಮುಂದುವರಿದ ಭಾಗವಾಗಿ, ಪ್ರಸ್ತುತ ಬಿಜಿಎಂಎಲ್ ಒಡೆತನದ ಸುಮಾರು 960 ಎಕರೆ ಭೂಮಿ ರಾಜ್ಯ ಸರ್ಕಾರದ ವಶದಲ್ಲಿದೆ. ಇದರಲ್ಲಿ ಮೊದಲ ಹಂತದ ಕಾಮಗಾರಿಗಾಗಿ ಈಗಾಗಲೇ 300 ಎಕರೆ ಜಾಗವನ್ನು ಗುರುತಿಸಲಾಗಿದೆ. ಸದ್ಯ ನಿರ್ಮಾಣ ಹಂತದಲ್ಲಿರುವ ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇ ಹೆದ್ದಾರಿಯ ಸಂಪರ್ಕವನ್ನು ಬಳಸಿಕೊಂಡು, ಈ ಹೊಸ ಟೌನ್‌ಶಿಪ್ ಮೂಲಕ ಕೆಜಿಎಫ್ ಭಾಗಕ್ಕೆ ವಾಣಿಜ್ಯ ಮತ್ತು ಕೈಗಾರಿಕಾ ಹೂಡಿಕೆದಾರರನ್ನು ಆಕರ್ಷಿಸುವುದು ಸರ್ಕಾರದ ಮುಖ್ಯ ಗುರಿಯಾಗಿದೆ.
ಈ ಬೃಹತ್ ಟೌನ್‌ಶಿಪ್ ಅನ್ನು ಸಾರ್ವಜನಿಕ ಹಾಗೂ ಖಾಸಗಿ ಸಹಭಾಗಿತ್ವದ (PPP) ಮಾದರಿಯಲ್ಲಿ ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ. ಟೆಂಡರ್ ಮೂಲಕ ಆಯ್ಕೆಯಾಗುವ ಸಲಹೆಗಾರರು ಈ ಯೋಜನೆಯ ಆರ್ಥಿಕ ಮತ್ತು ತಾಂತ್ರಿಕ ಸಾಧಕ-ಬಾಧಕಗಳ ವರದಿ ಸಿದ್ಧಪಡಿಸಲಿದ್ದಾರೆ. ಇದರೊಂದಿಗೆ ಮಾರುಕಟ್ಟೆಯಲ್ಲಿನ ಬೇಡಿಕೆ, ಅಲ್ಲಿನ ಭೂಮಿಯ ಮೌಲ್ಯಮಾಪನ ಹಾಗೂ ಸರ್ಕಾರಕ್ಕೆ ಲಾಭದಾಯಕವಾಗುವ ಸೂಕ್ತ ಪಿಪಿಪಿ ಮಾದರಿಯನ್ನು ಶಿಫಾರಸು ಮಾಡಲಿದ್ದಾರೆ. ದೇಶ ಹಾಗೂ ವಿದೇಶಗಳಲ್ಲಿ ಯಶಸ್ವಿಯಾಗಿರುವ ಟೌನ್‌ಶಿಪ್‌ಗಳನ್ನು ಅಧ್ಯಯನ ಮಾಡಿ, ಇದನ್ನು ಹಂತ-ಹಂತವಾಗಿ ಹೇಗೆ ಜಾರಿಗೊಳಿಸಬೇಕು ಮತ್ತು ಸರ್ಕಾರದ ಆದಾಯವನ್ನು ಹೇಗೆ ಹೆಚ್ಚಿಸಬೇಕು ಎಂಬ ಬಗ್ಗೆ ಒಂದು ಕರಡು ಯೋಜನೆಯನ್ನು (ಮಾಸ್ಟರ್ ಪ್ಲಾನ್) ಇವರು ರೂಪಿಸಲಿದ್ದಾರೆ.
ರಾಜಧಾನಿ ಬೆಂಗಳೂರಿನಿಂದ ಸುಮಾರು 100 ಕಿಲೋಮೀಟರ್ ದೂರದಲ್ಲಿರುವ ಕೆಜಿಎಫ್, ಒಂದು ಕಾಲದಲ್ಲಿ ದೇಶದ ಪ್ರಮುಖ ಚಿನ್ನದ ಗಣಿ ಕೇಂದ್ರವಾಗಿ ಗುರುತಿಸಿಕೊಂಡಿತ್ತು. 2001ರಲ್ಲಿ ಭಾರತ್ ಗೋಲ್ಡ್ ಮೈನ್ಸ್ ಲಿಮಿಟೆಡ್ (BGML) ಮುಚ್ಚುವುದಕ್ಕೂ ಮುನ್ನ ಇಲ್ಲಿ ಸುಮಾರು 800 ಟನ್ ಚಿನ್ನ ಉತ್ಪಾದಿಸಲಾಗಿತ್ತು. ಆದರೆ ಗಣಿ ಮುಚ್ಚಿದ ನಂತರ ಈ ಭಾಗದಲ್ಲಿ ಯಾವುದೇ ಪ್ರಮುಖ ಕೈಗಾರಿಕೆಗಳು ಬರದೇ ಅಭಿವೃದ್ಧಿ ಕುಂಠಿತಗೊಂಡಿತ್ತು. ಇದರಿಂದಾಗಿ ಇಲ್ಲಿನ ಜನ ಉದ್ಯೋಗ ಅರಸಿ ಪ್ರತಿದಿನ ಬೆಂಗಳೂರಿಗೆ ಅಲೆಯುವಂತಾಗಿದೆ. ಈ ಸಮಸ್ಯೆಗೆ ಮುಕ್ತಿ ಹಾಡಲು ಸರ್ಕಾರ ಈ ಯೋಜನೆ ರೂಪಿಸುತ್ತಿದೆ.

