ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ (Actor Yash) ಹಾಗೂ ಪ್ರಸಿದ್ಧ ನಿರ್ದೇಶಕಿ ಗೀತು ಮೋಹನ್‌ದಾಸ್ ಜೋಡಿಯ ಬಹುನಿರೀಕ್ಷಿತ 'ಟಾಕ್ಸಿಕ್' (Toxic) ಸಿನಿಮಾ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿದ್ದು, ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಈ ಮಧ್ಯೆ, ಸಿನಿಮಾ ಬಿಡುಗಡೆಯಾದ ಬೆನ್ನಲ್ಲೇ ಹೊಸದೊಂದು ವಿವಾದ ತಲೆದೂರಿದೆ. ಚಿತ್ರದ ಕುರಿತು ನಕಾರಾತ್ಮಕ ವಿಮರ್ಶೆ (Negative Reviews) ನೀಡಿದ ಯೂಟ್ಯೂಬರ್‌ಗಳು ಮತ್ತು ಸಿನಿಮಾ ವಿಮರ್ಶಕರಿಗೆ ಚಿತ್ರತಂಡವು ಕಾನೂನು ನೋಟಿಸ್ (Legal Notice) ಕಳುಹಿಸುತ್ತಿದೆ ಎಂಬ ಗಂಭೀರ ಆರೋಪಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿವೆ. ಮತ್ತೊಬ್ಬ ಯೂಟ್ಯೂಬರ್‌ಗೂ ನೋಟಿಸ್ ಮೊದಲಿಗೆ ಯೂಟ್ಯೂಬರ್ ಸೂರಜ್ ಕುಮಾರ್ ಎಂಬುವವರು ತಮಗೆ ಬಂದಿರುವ ಲೀಗಲ್ ನೋಟಿಸ್ ಇಮೇಲ್‌ನ ಸ್ಕ್ರೀನ್‌ಶಾಟ್‌ಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುವ ಮೂಲಕ ಈ ವಿಚಾರವನ್ನು ಮುನ್ನೆಲೆಗೆ ತಂದಿದ್ದರು. ಇದೀಗ ಅವರ ಬೆನ್ನಲ್ಲೇ ಮತ್ತೊಬ್ಬ ಜನಪ್ರಿಯ ಸಿನಿಮಾ ವಿಮರ್ಶಕ ಹಾಗೂ ಯೂಟ್ಯೂಬರ್ ಪ್ರಶಾಂತ್ ರಂಗಸ್ವಾಮಿ ಕೂಡ 'ಟಾಕ್ಸಿಕ್' ನಿರ್ಮಾಪಕರಿಂದ ತಮಗೆ ಕಾನೂನು ನೋಟಿಸ್ ಬಂದಿದೆ ಎಂದು ಬಹಿರಂಗಪಡಿಸಿದ್ದಾರೆ. 'ಟಾಕ್ಸಿಕ್' ಸಿನಿಮಾವನ್ನು ರೋಸ್ಟ್ ಮಾಡಿ ವಿಮರ್ಶೆ ನೀಡಿದ್ದ ಪ್ರಶಾಂತ್ ರಂಗಸ್ವಾಮಿ, ತಮ್ಮ 'ಎಕ್ಸ್' (ಟ್ವಿಟರ್) ಖಾತೆಯಲ್ಲಿ "ನನಗೆ ಯಶ್ ಮತ್ತು ಕೆವಿಎನ್ ಪ್ರೊಡಕ್ಷನ್ಸ್ (KVN Productions) ತಂಡದಿಂದ ಟಾಕ್ಸಿಕ್ ರಿವ್ಯೂಗಾಗಿ ಲೀಗಲ್ ನೋಟಿಸ್ ಬಂದಿದೆ" ಎಂದು ಬರೆದುಕೊಂಡು ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ. ಆದರೆ ಸೂರಜ್ ಕುಮಾರ್ ಅವರಂತೆ ಪ್ರಶಾಂತ್ ರಂಗಸ್ವಾಮಿ ನೋಟಿಸ್‌ನ ಯಾವುದೇ ಆಧಾರ ಅಥವಾ ಸ್ಕ್ರೀನ್‌ಶಾಟ್‌ಗಳನ್ನು ಇನ್ನೂ ಸಾರ್ವಜನಿಕವಾಗಿ ಹಂಚಿಕೊಂಡಿಲ್ಲ.
ಇದಕ್ಕೂ ಮುನ್ನ ಸೂರಜ್ ಕುಮಾರ್ ಹಂಚಿಕೊಂಡಿದ್ದ ನೋಟಿಸ್‌ನಲ್ಲಿ, ಖಾಸಗಿ ಕಂಪನಿಯೊಂದು ಕೆವಿಎನ್ ಪ್ರೊಡಕ್ಷನ್ಸ್ ಪರವಾಗಿ ಈ ಇಮೇಲ್ ಕಳುಹಿಸಿರುವುದಾಗಿ ತಿಳಿಸಿತ್ತು. 'ಟಾಕ್ಸಿಕ್' ಚಿತ್ರತಂಡದ ಪರವಾಗಿ ನ್ಯಾಯಾಲಯ ನೀಡಿರುವ ಆದೇಶವನ್ನು ಜಾರಿಗೆ ತರಲು ತಮಗೆ ಪೂರ್ಣ ಅಧಿಕಾರ ನೀಡಲಾಗಿದೆ ಎಂದು ಆ ಕಂಪನಿಯು ಇಮೇಲ್‌ನಲ್ಲಿ ಉಲ್ಲೇಖಿಸಿತ್ತು.
ಮಧ್ಯಂತರ ತಡೆಯಾಜ್ಞೆ ತಂದಿರುವ ಸಿನಿಮಾ ತಂಡ
ವಾಸ್ತವವಾಗಿ, ಸಿನಿಮಾ ತೆರೆಕಾಣುವ ಕೆಲವೇ ದಿನಗಳ ಮೊದಲು, ಅಂದರೆ ಆಗಸ್ಟ್ 22ರಂದು 'ಟಾಕ್ಸಿಕ್' ನಿರ್ಮಾಣ ಸಂಸ್ಥೆಯು ಕೋರ್ಟ್‌ನಿಂದ ಮಧ್ಯಂತರ ತಡೆಯಾಜ್ಞೆಯನ್ನು ಪಡೆದುಕೊಂಡಿತ್ತು. ಸಿನಿಮಾದ ವಿರುದ್ಧ ಆಧಾರರಹಿತ, ಸುಳ್ಳು, ಮಾನಹಾನಿಕರ ಅಥವಾ ಅವಹೇಳನಕಾರಿ ವಿಷಯಗಳನ್ನು ಪ್ರಸಾರ ಮಾಡದಂತೆ ತಡೆಯಲು ನ್ಯಾಯಾಲಯ ಈ ಆದೇಶ ನೀಡಿತ್ತು. ಆದರೆ ಇದೀಗ ಚಿತ್ರತಂಡವು ಈ ಆದೇಶವನ್ನು ದುರ್ಬಳಕೆ ಮಾಡಿಕೊಂಡು, ನೈಜ ವಿಮರ್ಶೆ ಮತ್ತು ಅಭಿಪ್ರಾಯ ಹಂಚಿಕೊಳ್ಳುವ ಯೂಟ್ಯೂಬರ್‌ಗಳ ಧ್ವನಿಯನ್ನು ಅಡಗಿಸಲು ನೋಟಿಸ್ ಕಳುಹಿಸುತ್ತಿದೆ ಎಂಬ ಆರೋಪ ಕೇಳಿಬರುತ್ತಿದೆ.

