ಬೆಂಗಳೂರು : ಕನ್ನಡ ಚಿತ್ರರಂಗದ ರಾಕಿ ಭಾಯ್, ರಾಕಿಂಗ್ ಸ್ಟಾರ್ ಯಶ್ (Actor Yash) ಅಭಿನಯದ ಬಹುನಿರೀಕ್ಷಿತ 'ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್' (Toxic) ಸಿನಿಮಾ ಚಿತ್ರಮಂದಿರಗಳಲ್ಲಿ ಧೂಳೆಬ್ಬಿಸುತ್ತಿದೆ. ಗೀತು ಮೋಹನ್ ದಾಸ್ (Geetu Mohandas) ನಿರ್ದೇಶನದ ಈ ಆಕ್ಷನ್ ಡ್ರಾಮಾ ಬಿಡುಗಡೆಯಾದ ಮೊದಲ ದಿನವೇ ಭರ್ಜರಿ ಕಲೆಕ್ಷನ್ ಮಾಡಿ ದಾಖಲೆ ಬರೆದಿತ್ತು.
ಇದೀಗ ಎರಡನೇ ದಿನದ ಬಾಕ್ಸ್ ಆಫೀಸ್ ಗಳಿಕೆಯ ವಿವರಗಳು ಹೊರಬಿದ್ದಿದ್ದು, ದೇಶೀಯ ಹಾಗೂ ವಿದೇಶಿ ಮಾರುಕಟ್ಟೆಗಳಲ್ಲಿ ಸಿನಿಮಾ ತನ್ನ ಪಾರಮ್ಯವನ್ನು ಮುಂದುವರಿಸಿದೆ. ಮೊದಲ ದಿನ ಭಾರತದಲ್ಲೇ 101.10 ಕೋಟಿ ರೂಪಾಯಿ ನೆಟ್ ಕಲೆಕ್ಷನ್ ಮಾಡುವ ಮೂಲಕ 100 ಕೋಟಿ ಕ್ಲಬ್ ಸೇರಿದ 'ಟಾಕ್ಸಿಕ್', ಎರಡನೇ ದಿನವೂ ಉತ್ತಮ ಪ್ರದರ್ಶನ ಕಂಡು ಬಾಕ್ಸ್ ಆಫೀಸ್ ಗಳಿಕೆಯಲ್ಲಿ ಗಟ್ಟಿಯಾಗಿ ನೆಲೆಯೂರಿದೆ. ಸಾಲು ಸಾಲು ರಜಾದಿನಗಳಿಲ್ಲದಿದ್ದರೂ, ಎರಡನೇ ದಿನ ಸಿನಿಮಾ ಭಾರತದಲ್ಲಿ 36.40 ಕೋಟಿ ರೂಪಾಯಿ ನೆಟ್ ಗಳಿಕೆ ಕಂಡಿದೆ. ಇದರೊಂದಿಗೆ ಎರಡೇ ದಿನಗಳಲ್ಲಿ ಭಾರತದಲ್ಲಿ ಚಿತ್ರದ ಒಟ್ಟು ನೆಟ್ ಕಲೆಕ್ಷನ್ 137.50 ಕೋಟಿ ರೂಪಾಯಿಗೆ ಏರಿಕೆಯಾಗಿದೆ. ವಿದೇಶಿ ಮಾರುಕಟ್ಟೆಯಲ್ಲಿ (Overseas Box Office) ಯಶ್ ಕ್ರೇಜ್ ಮತ್ತಷ್ಟು ಹೆಚ್ಚಾಗಿದೆ. ಮೊದಲ ದಿನವೇ ವಿದೇಶಗಳಲ್ಲಿ 20 ಕೋಟಿ ರೂಪಾಯಿ ಗಳಿಸಿದ್ದ ಈ ಸಿನಿಮಾ, ಎರಡನೇ ದಿನ 10 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಇದರೊಂದಿಗೆ ಓವರ್‌ಸೀಸ್‌ನಲ್ಲಿ 'ಟಾಕ್ಸಿಕ್' ಒಟ್ಟು ಗಳಿಕೆ 26.25 ಕೋಟಿ ರೂಪಾಯಿ ದಾಟಿದ್ದು, ವಿದೇಶಗಳ ಹಲವು ಪ್ರಮುಖ ನಗರಗಳಲ್ಲಿ ಪ್ರದರ್ಶನಗಳು ಹೌಸ್‌ಫುಲ್ ಆಗಿ ಸಾಗುತ್ತಿವೆ. ಜಾಗತಿಕವಾಗಿ (Worldwide Gross Collection) ಎರಡು ದಿನಗಳಲ್ಲಿ ಈ ಸಿನಿಮಾ ಒಟ್ಟು 190.75 ಕೋಟಿ ರೂಪಾಯಿ ಬಾಚಿಕೊಳ್ಳುವ ಮೂಲಕ 200 ಕೋಟಿ ಗಡಿಯ ಸಾಗುವ ಹಾದಿಯಲ್ಲಿದೆ. ಭಾಷಾವಾರು ಕಲೆಕ್ಷನ್ ವಿವರ ನೋಡುವುದಾದರೆ, ಮೂಲ ಭಾಷೆಯಾದ ಕನ್ನಡಕ್ಕಿಂತ ಹೆಚ್ಚಾಗಿ ಹಿಂದಿ ಆವೃತ್ತಿಯಲ್ಲೇ ಸಿನಿಮಾ ಭಾರಿ ಮೊತ್ತ ಕಲೆಹಾಕುತ್ತಿದೆ. ಎರಡನೇ ದಿನ ಹಿಂದಿಯಲ್ಲಿ 23 ಕೋಟಿ ರೂಪಾಯಿ, ಕನ್ನಡದಲ್ಲಿ 8.50 ಕೋಟಿ ರೂಪಾಯಿ, ತೆಲುಗಿನಲ್ಲಿ 3 ಕೋಟಿ ರೂಪಾಯಿ, ತಮಿಳಿನಲ್ಲಿ 1.50 ಕೋಟಿ ರೂಪಾಯಿ ಹಾಗೂ ಮಲಯಾಳಂನಲ್ಲಿ 40 ಲಕ್ಷ ರೂಪಾಯಿ ನೆಟ್ ಕಲೆಕ್ಷನ್ ಆಗಿದೆ. ಕೆಜಿಎಫ್ ಸರಣಿಯ ನಂತರ ಯಶ್ ಅವರ ಪ್ಯಾನ್ ಇಂಡಿಯಾ ಕ್ರೇಜ್ ಹಿಂದಿ ಮಾರುಕಟ್ಟೆಯಲ್ಲಿ ಎಷ್ಟು ಪ್ರಬಲವಾಗಿದೆ ಎಂಬುದಕ್ಕೆ ಈ ಅಂಕಿ-ಅಂಶಗಳೇ ಸಾಕ್ಷಿ. ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆ ಅದ್ಧೂರಿಯಾಗಿ ನಿರ್ಮಿಸಿರುವ ಈ ಚಿತ್ರದಲ್ಲಿ ಯಶ್ ಅವರೊಂದಿಗೆ ನಯನತಾರಾ, ಕಿಯಾರಾ ಅಡ್ವಾಣಿ, ಹುಮಾ ಖುರೇಷಿ ಹಾಗೂ ರುಕ್ಮಿಣಿ ವಸಂತ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಪ್ರೇಕ್ಷಕರಿಂದ ಹಾಗೂ ವಿಮರ್ಶಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದರೂ, ಯಶ್ ಅವರ ಮಾಸ್ ಆಕ್ಷನ್ ಅವತಾರ ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಸೆಳೆಯುವಲ್ಲಿ ಯಶಸ್ವಿಯಾಗಿದೆ. ವಾರಾಂತ್ಯದ ದಿನಗಳಲ್ಲಿ ಕಲೆಕ್ಷನ್ ಮತ್ತಷ್ಟು ಜಿಗಿತ ಕಾಣುವ ನಿರೀಕ್ಷೆಯಿದೆ.

