ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ (Actor Yash) ಅಭಿನಯದ ಹಾಗೂ ಗೀತು ಮೋಹನ್‌ದಾಸ್ ನಿರ್ದೇಶನದ ಬಹುನಿರೀಕ್ಷಿತ 'ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್' (Toxic) ಚಿತ್ರವು ಆಗಸ್ಟ್ 26ರಂದು ಜಾಗತಿಕವಾಗಿ ತೆರೆಕಂಡಿದ್ದು, ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿದೆ.
ಸಿನಿಮಾ ಬಿಡುಗಡೆಯಾದ ಬೆನ್ನಲ್ಲೇ ಅದರ ಕಥಾವಸ್ತು, ಆಕ್ಷನ್ ದೃಶ್ಯಗಳು, ನಟ-ನಟಿಯರ ಅಭಿನಯ ಹಾಗೂ ನಿರ್ಮಾಣ ಮೌಲ್ಯದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ (Social Media) ವ್ಯಾಪಕ ಚರ್ಚೆಗಳು ನಡೆಯುತ್ತಿವೆ. ಈ ಎಲ್ಲಾ ಆಕರ್ಷಣೆಗಳ ನಡುವೆ, ಸಿನಿಮಾದ ಅತ್ಯಂತ ಪ್ರಮುಖ ಹಾಗೂ ತೀವ್ರತೆಯಿಂದ ಕೂಡಿದ 'ಜೋಕರ್' ಸನ್ನಿವೇಶದಲ್ಲಿ 'ಟಿಕೆಟ್' ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿರುವ ಪುಟ್ಟ ಬಾಲನಟನ ನಟನೆ ಸಿನಿರಸಿಕರ ವಿಶೇಷ ಗಮನ ಸೆಳೆದಿದೆ. ಪ್ರೇಕ್ಷಕರಿಂದ ಭಾರಿ ಮೆಚ್ಚುಗೆ ವ್ಯಕ್ತ ಈ ಪಾತ್ರಕ್ಕೆ ಜೀವ ತುಂಬಿರುವ ಬಾಲನಟನ ಹೆಸರು ಕಬೀರ್ ಪಹ್ವಾ. 'ಟಾಕ್ಸಿಕ್' ಸಿನಿಮಾದ ಕೆಲವು ಪ್ರಮುಖ ಹಾಗೂ ನಿರ್ಣಾಯಕ ಸನ್ನಿವೇಶಗಳಲ್ಲಿ ಕಬೀರ್ ಕಾಣಿಸಿಕೊಂಡಿದ್ದು, ವಿಶೇಷವಾಗಿ ಜೋಕರ್ ದೃಶ್ಯದಲ್ಲಿ ಅವರು ನೀಡಿದ ಭಾವನಾತ್ಮಕ ಅಭಿನಯಕ್ಕೆ ಪ್ರೇಕ್ಷಕರಿಂದ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಅತ್ಯಂತ ಚಿಕ್ಕ ವಯಸ್ಸಿನಲ್ಲೇ ಗಂಭೀರ ಹಾಗೂ ಕ್ಲಿಷ್ಟಕರ ಸನ್ನಿವೇಶವನ್ನು ತೆರೆಯ ಮೇಲೆ ನಿಭಾಯಿಸಿರುವ ಅವರ ಶೈಲಿ ಮತ್ತು ಮುಖಭಾವಗಳು ಪ್ರೇಕ್ಷಕರನ್ನು ಆಕರ್ಷಿಸಿವೆ. ವರದಿಗಳ ಪ್ರಕಾರ, ಕಬೀರ್ ಪಹ್ವಾ ದೆಹಲಿ ಮೂಲದವರಾಗಿದ್ದು, 2016ರ ಡಿಸೆಂಬರ್ 23ರಂದು ಜನಿಸಿದ ಇವರಿಗೆ ಪ್ರಸ್ತುತ 9 ವರ್ಷ ವಯಸ್ಸು. ತೀರಾ ಬಾಲ್ಯದಲ್ಲೇ ಬಣ್ಣದ ಪ್ರಪಂಚದತ್ತ ಆಕರ್ಷಿತರಾದ ಕಬೀರ್, ಕೇವಲ ಸಿನಿಮಾಗಳಷ್ಟೇ ಅಲ್ಲದೆ ವೆಬ್ ಸರಣಿಗಳಲ್ಲೂ ನಟಿಸುವ ಮೂಲಕ ತಮ್ಮ ನಟನಾ ಪ್ರತಿಭೆಯನ್ನು ಸಾಬೀತುಪಡಿಸಿದ್ದಾರೆ. ಬಾಲನಟರಿಗೆ ಚಿತ್ರರಂಗದಲ್ಲಿ ಸಿಗುವ ಪಾತ್ರಗಳ ಅವಕಾಶ ಸೀಮಿತವಾಗಿದ್ದರೂ, ಕಬೀರ್ ತಮ್ಮ ನಿರಂತರ ಪ್ರಯತ್ನ ಮತ್ತು ನಟನಾ ಸಾಮರ್ಥ್ಯದಿಂದ ವಿವಿಧ ಪ್ರಾಜೆಕ್ಟ್‌ಗಳಲ್ಲಿ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಒಟಿಟಿಯಲ್ಲೂ ಕಬೀರ್ ಮ್ಯಾಜಿಕ್ ಕಬೀರ್ ಪಹ್ವಾ ಈಗಾಗಲೇ ಹಲವು ಪ್ರಮುಖ ಸಿನಿಮಾಗಳು ಹಾಗೂ ಒಟಿಟಿ (OTT) ಯೋಜನೆಗಳಲ್ಲಿ ನಟಿಸಿದ ಅನುಭವ ಹೊಂದಿದ್ದಾರೆ. 'ಹೂ ಆರ್ ಯು ನಾನ' ಎಂಬ ಕಿರುಚಿತ್ರದ ಜೊತೆಗೆ 'ಅಫೀಮು' ಮತ್ತು 'ಲೆಟರ್ಸ್ ಟು ಮಿಸ್ಟರ್ ಖನ್ನಾ' ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಇದರ ಜೊತೆಗೆ ಡಿಜಿಟಲ್ ಜಗತ್ತಿನಲ್ಲೂ ಸಕ್ರಿಯರಾಗಿರುವ ಇವರು, 'ರಾಖ್' ಮತ್ತು 'ಪ್ಯಾರ್ ಕಾ ಪ್ರೊಫೆಸರ್' ಎಂಬ ಜನಪ್ರಿಯ ವೆಬ್ ಸರಣಿಗಳಲ್ಲೂ ವಿಭಿನ್ನ ಪಾತ್ರಗಳನ್ನು ನಿರ್ವಹಿಸಿ ಸೈ ಎನಿಸಿಕೊಂಡಿದ್ದಾರೆ. 'ಟಾಕ್ಸಿಕ್' ಸಿನಿಮಾ ಪ್ರದರ್ಶನ ಕಾಣುತ್ತಿರುವ ಬೆನ್ನಲ್ಲೇ ಕಬೀರ್ ಪಹ್ವಾ ಅವರ ನಟನೆಯ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಮೆಚ್ಚುಗೆಯ ಮಾತುಗಳು ಕೇಳಿಬರುತ್ತಿವೆ. ಅವರ ಮುಖಭಾವ ಮತ್ತು ಪರದೆಯ ಮೇಲಿನ ಉಪಸ್ಥಿತಿಯನ್ನು ಪ್ರಶಂಸಿಸಿರುವ ನೆಟ್ಟಿಗರು, ಈ ಬಾಲನಟ ಭವಿಷ್ಯದಲ್ಲಿ ಕನ್ನಡ ಹಾಗೂ ಭಾರತೀಯ ಚಿತ್ರರಂಗದಲ್ಲಿ ದೊಡ್ಡ ನಟನಾಗಿ ಬೆಳೆಯಲಿದ್ದಾರೆ ಎಂದು ಶುಭ ಹಾರೈಸುತ್ತಿದ್ದಾರೆ.

