Dailyhunt
TRAGEDY : ಆದಿವಾಸಿ ಪ್ರೇಮಿಗಳು ಆತ್ಮಹ*ತ್ಯೆ - ಕಾರಣ ನಿಗೂಢ!

TRAGEDY : ಆದಿವಾಸಿ ಪ್ರೇಮಿಗಳು ಆತ್ಮಹ*ತ್ಯೆ - ಕಾರಣ ನಿಗೂಢ!

Navasamaja.com 1 week ago

ಚಾಮರಾಜನಗರ (Chamarajanagar) ಜಿಲ್ಲೆಯ ಹನೂರು ತಾಲೂಕಿನ ಪೊನ್ನಾಚಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೇರಟ್ಟಿ ಗ್ರಾಮದಲ್ಲಿ ಆದಿವಾಸಿ ಸಮುದಾಯದ (Adivasi Community) ಇಬ್ಬರು ಪ್ರೇಮಿಗಳು ಆತ್ಮಹತ್ಯೆ (Tragedy) ಮಾಡಿಕೊಂಡಿರುವ ದಾರುಣ ಘಟನೆ ನಡೆದಿದೆ.

ಮೃತರನ್ನು ನಕ್ಕುಂದಿ ಗ್ರಾಮದ ನಾಗೇಂದ್ರ (21) ಮತ್ತು ಪಾಲಾರ್ ಗ್ರಾಮದ ನದಿಯಾ (19) ಎಂದು ಗುರುತಿಸಲಾಗಿದ್ದು, ಈ ಸಾವು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಪೊನ್ನಾಚಿ ಗ್ರಾಮದಲ್ಲಿ ಕಳೆದ ಮೂರು ದಿನಗಳಿಂದ ಕುಳ್ಳು ಮಾರಮ್ಮ ದೇವಿಯ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ನಡೆಯುತ್ತಿತ್ತು. ಈ ಸಂಭ್ರಮದಲ್ಲಿ ಪಾಲ್ಗೊಳ್ಳಲು ನಾಗೇಂದ್ರ ತನ್ನ ತಾತ ಶಿವ ಮಾದಯ್ಯ ಅವರ ಮನೆಗೆ ಬಂದಿದ್ದನು. ಆದರೆ, ಸಂಭ್ರಮದ ಮನೆಯಲ್ಲೇ ತಡರಾತ್ರಿ ನಾಗೇಂದ್ರ ಮತ್ತು ನದಿಯಾ ಕೊಠಡಿಯೊಂದರ ಒಳಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮೃತ ನದಿಯಾ ಯಳಂದೂರು ತಾಲೂಕಿನ ಬಿಳಿಗಿರಿರಂಗನ ಬೆಟ್ಟದ ಐಪಿಹೆಚ್ (IPH) ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರು. ಅಲ್ಲಿಂದ ಅವರು ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದರು. ಈ ಬಗ್ಗೆ ಸಂಸ್ಥೆಯವರು ಪೋಷಕರಿಗೆ ಮಾಹಿತಿ ನೀಡಲು ಪ್ರಯತ್ನಿಸಿದರೂ, ಪಾಲಾರ್ ಗ್ರಾಮದಲ್ಲಿ ಸರಿಯಾದ ಮೊಬೈಲ್ ನೆಟ್‌ವರ್ಕ್ ಇಲ್ಲದ ಕಾರಣ ಸುದ್ದಿ ತಲುಪುವುದು ತಡವಾಗಿತ್ತು. ಅಷ್ಟರಲ್ಲೇ ಯುವತಿ ನಾಗೇಂದ್ರನ ಜೊತೆ ಶವವಾಗಿ ಪತ್ತೆಯಾಗಿರುವುದು ಕುಟುಂಬಸ್ಥರಿಗೆ ಆಘಾತ ತಂದಿದೆ.

ವಿಷಯ ತಿಳಿಯುತ್ತಿದ್ದಂತೆ ಮಲೆ ಮಹದೇಶ್ವರ ಬೆಟ್ಟ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಜಗದೀಶ್ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನದಿಯಾ ತಂದೆ ಮಾದೇವ ಅವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಮೃತದೇಹಗಳನ್ನು ವಶಕ್ಕೆ ಪಡೆದು ಚಾಮರಾಜನಗರದ ಸಿಮ್ಸ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ. ಸಾವಿನ ನಿಖರ ಕಾರಣ ತಿಳಿಯಲು ದೇಹದ ಪ್ರಮುಖ ಅಂಗಾಂಗಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.

ಪ್ರೇಮಿಗಳ ಈ ತೀವ್ರ ನಿರ್ಧಾರಕ್ಕೆ ನಿಖರವಾದ ಕಾರಣವೇನು ಎಂಬುದು ಇನ್ನು ನಿಗೂಢವಾಗಿದ್ದು, ಪೊಲೀಸರ ವಿಚಾರಣೆಯ ನಂತರವಷ್ಟೇ ಸತ್ಯಾಂಶ ಹೊರಬರಬೇಕಿದೆ. ಮಲೆ ಮಹದೇಶ್ವರ ಬೆಟ್ಟ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ತನಿಖೆ ಮುಂದುವರಿದಿದೆ.

Dailyhunt
Disclaimer: This content has not been generated, created or edited by Dailyhunt. Publisher: Navasamaja