ಕೊಪ್ಪಳ: ಕೃಷಿ ಹೊಂಡಕ್ಕೆ ಬಟ್ಟೆ ತೊಳೆಯಲು ಹೋಗಿದ್ದ ಇಬ್ಬರು ಅಪ್ರಾಪ್ತ ಬಾಲಕಿಯರು ಕಾಲು ಜಾರಿ ನೀರಿಗೆ ಬಿದ್ದು ಮೃತಪಟ್ಟಿರುವ ಕರಳು ಹಿಂಡುವ ಘಟನೆ (Tragedy) ಕೊಪ್ಪಳ (Koppal) ಜಿಲ್ಲೆಯ ಕುಕನೂರು ತಾಲ್ಲೂಕಿನ ಯರೇಹಂಚಿನಾಳ ಗ್ರಾಮದ ಸಮೀಪ ನಡೆದಿದೆ.
ಗದಗ ಜಿಲ್ಲೆಯ ತಿಮ್ಮಾಪೂರ ಗ್ರಾಮದ ನಿವಾಸಿಗಳಾದ ಲಕ್ಷ್ಮವ್ವ ಹರಣಸಿಕಾರಿ (15) ಹಾಗೂ ಮುತ್ತವ್ವ ಹರಣಸಿಕಾರಿ (8) ಮೃತಪಟ್ಟ ದುರ್ದೈವಿಗಳಾಗಿದ್ದಾರೆ.
ಕಾಲು ಜಾರಿ ಕೃಷಿ ಹೊಂಡಕ್ಕರ ಬಿದ್ದರು!
ಮೃತ ಬಾಲಕಿಯರು ಯರೇಹಂಚಿನಾಳ ಗ್ರಾಮದಿಂದ ಗದಿಗೆ ಹೋಗುವ ರಸ್ತೆ ಪಕ್ಕದಲ್ಲಿರುವ ಸರ್ವೆ ನಂಬರ್ 362 ರ ಕೃಷಿ ಹೊಂಡದ ಬಳಿ ಬಟ್ಟೆ ತೊಳೆಯಲು ತೆರಳಿದ್ದರು. ಈ ವೇಳೆ ನೀರಿಗಿಳಿದಾಗ ಆಕಸ್ಮಿಕವಾಗಿ ಕಾಲು ಜಾರಿ ಹೊಂಡದ ಆಳವಾದ ನೀರಿಗೆ ಬಿದ್ದಿದ್ದಾರೆ. ಒಬ್ಬರನ್ನು ಉಳಿಸಲು ಹೋಗಿ ಮತ್ತೊಬ್ಬರು ನೀರು ಪಾಲಾಗಿದ್ದಾರೆ ಎನ್ನಲಾಗಿದ್ದು, ಇಬ್ಬರೂ ಈಜು ಬಾರದೆ ನೀರಿನಲ್ಲಿ ಮುಳುಗಿ ಉಸಿರುಗಟ್ಟಿ ಕೊನೆಯುಸಿರೆಳೆದಿದ್ದಾರೆ.
ಹೆತ್ತವರ ಸಂಕಟ ನೋಡೋಕ್ಕಾಗ್ತಿಲ್ಲ
ಮೃತ ಬಾಲಕಿಯರ ಕುಟುಂಬಸ್ಥರು ಅತ್ಯಂತ ಬಡವರಾಗಿದ್ದು, ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಕಣ್ಣೆದುರೇ ಆಟ ಆಡಿಕೊಂಡಿರಬೇಕಾದ ಇಬ್ಬರು ಹೆಣ್ಣುಮಕ್ಕಳು ಒಟ್ಟಿಗೇ ಹೆಣವಾಗಿ ಬಿದ್ದಿರುವುದನ್ನು ಕಂಡು ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಬಡ ಕುಟುಂಬಕ್ಕೆ ಆಸರೆಯಾಗಿದ್ದ ಮಕ್ಕಳನ್ನು ಕಳೆದುಕೊಂಡ ಹೆತ್ತವರಿಗೆ ಸರ್ಕಾರ ತಕ್ಷಣವೇ ಸೂಕ್ತ ಪರಿಹಾರ ನೀಡಬೇಕು ಎಂದು ಸ್ಥಳೀಯರು ಹಾಗೂ ಕುಟುಂಬಸ್ಥರು ತೀವ್ರವಾಗಿ ಆಗ್ರಹಿಸಿದ್ದಾರೆ.
ದುರಂತದ ಮಾಹಿತಿ ತಿಳಿಯುತ್ತಿದ್ದಂತೆಯೇ ಕುಕನೂರು ಪೊಲೀಸ್ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸ್ಥಳೀಯರ ನೆರವಿನಿಂದ ಬಾಲಕಿಯರ ಮೃತದೇಹಗಳನ್ನು ಹೊರತೆಗೆಯಲಾಗಿದ್ದು, ಕುಕನೂರು ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗಿದೆ.
ತಿಥಿ ಕಾರ್ಯಕ್ರಮದಲ್ಲಿ ವಿದ್ಯುತ್ ಅವಾಂತರ; ತಂತಿ ತಗುಲಿ ಬಾಲಕ ಸ್ಥಳದಲ್ಲೇ ಸಾ*ವು
ಕೋಲಾರ: ಕುಟುಂಬಸ್ಥರೆಲ್ಲಾ ಒಟ್ಟಿಗೆ ಸೇರಿ ಧಾರ್ಮಿಕ ವಿಧಿವಿಧಾನ ನೆರವೇರಿಸುತ್ತಿದ್ದ ಮನೆಯಲ್ಲಿ ವಿಧಿಯಾಟ ಬೇರೆಯದೇ ಆಗಿತ್ತು. ತಿಥಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ಬಾಲಕನೊಬ್ಬ ಆಕಸ್ಮಿಕವಾಗಿ ವಿದ್ಯುತ್ ತಂತಿ ತಗುಲಿ ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿರುವ ದಾರುಣ ಘಟನೆ ಕೋಲಾರದಲ್ಲಿ ನಡೆದಿದೆ. ಮನೆಯಲ್ಲಿ ಸಡಗರ-ಸಂಭ್ರಮ ಮತ್ತು ಧಾರ್ಮಿಕ ಕಾರ್ಯಕ್ರಮ ನಡೆಯುತ್ತಿದ್ದ ಹಿನ್ನೆಲೆಯಲ್ಲಿ ನೆರೆದಿದ್ದ ಬಂಧುಗಳು, ಬಾಲಕನ ಈ ಹಠಾತ್ ಸಾವಿನಿಂದಾಗಿ ತೀವ್ರ ಆಘಾತಕ್ಕೊಳಗಾಗಿದ್ದು, ಇಡೀ ಕುಟುಂಬ ಕಣ್ಣೀರಿನ ಸಾಗರದಲ್ಲಿ ಮುಳುಗಿದೆ.
ಕೂದಲೆಳೆ ಅಂತರದಲ್ಲಿ ತಪ್ಪಿದ ದೊಡ್ಡ ಅನಾಹುತ!
ಸಯ್ಯದ್ ರೆಹಮಾನ್ ಸಾವನ್ನಪ್ಪಿದ ದುರ್ದೈವಿ ಬಾಲಕ. ಘಟನೆ ಸಂಭವಿಸಿದ ವೇಳೆ ಮೃತ ಸಯ್ಯದ್ ರೆಹಮಾನ್ ಜೊತೆಗೆ ಇಮ್ರಾನ್, ಜಬಿ ಹಾಗೂ ಮತ್ತೊಬ್ಬ ಸಯ್ಯದ್ ಎಂಬ ಮೂವರು ಮಕ್ಕಳು ಸಹ ಅದೇ ಸ್ಥಳದಲ್ಲಿ ಆಟವಾಡುತ್ತಿದ್ದರು ಎಂದು ತಿಳಿದುಬಂದಿದೆ. ಕರೆಂಟ್ ಶಾಕ್ ಹೊಡೆದ ರಭಸಕ್ಕೆ ಇಡೀ ಮನೆ ಮಂದಿ ಬೆಚ್ಚಿಬಿದ್ದಿದ್ದಾರೆ. ಆದರೆ ಅದೃಷ್ಟವಶಾತ್ ರೆಹಮಾನ್ ಜೊತೆಗಿದ್ದ ಉಳಿದ ಮೂವರು ಮಕ್ಕಳು ಯಾವುದೇ ಅಪಾಯವಿಲ್ಲದೆ ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸದ್ಯ ಸ್ಥಳದಲ್ಲಿ ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

