ಪಣಜಿ: ಮನುಷ್ಯನ ಬೇಜವಾಬ್ದಾರಿಗೆ ಮೂಕ ಪ್ರಾಣಿಯೊಂದು ಬಲಿಯಾದ ಹೃದಯವಿದ್ರಾವಕ ಘಟನೆಯೊಂದು ಗೋವಾದ (Goa) ಪಣಜಿಯಲ್ಲಿ ನಡೆದಿದೆ. ಮಾಲೀಕನು ತನ್ನ ಸಾಕು ನಾಯಿಯನ್ನು(Dog) ಕಾರಿನೊಳಗೆ ಕೂಡಿ ಹಾಕಿ ಕ್ಯಾಸಿನೋಗೆ ಹೋದ ಪರಿಣಾಮ, ನಾಯಿಯು ಕಾರಿನಲ್ಲೇ ಉಸಿರುಗಟ್ಟಿ ಸಾವನ್ನಪ್ಪಿದೆ (Death).
ಕರ್ನಾಟಕ ಮೂಲದ ವ್ಯಕ್ತಿಯೊಬ್ಬರು ತಮ್ಮ ಗೋಲ್ಡನ್ ರಿಟ್ರೈವರ್ (Golden Retriever) ತಳಿಯ ಸಾಕು ನಾಯಿಯೊಂದಿಗೆ ಗೋವಾ ಪ್ರವಾಸಕ್ಕೆ ಬಂದಿದ್ದರು. ಪಣಜಿಯಲ್ಲಿ ತಮ್ಮ ಕಾರನ್ನು ಪಾರ್ಕ್ ಮಾಡಿದ ಅವರು, ನಾಯಿಯನ್ನು ಕಾರಿನೊಳಗೆ ಕೂಡಿ ಹಾಕಿ ಸಮೀಪದ ಕ್ಯಾಸಿನೋಗೆ ತೆರಳಿದ್ದಾರೆ. ಸುಮಾರು ನಾಲ್ಕು ಗಂಟೆಗಳ ಕಾಲ ನಾಯಿಯು ಕಾರಿನೊಳಗೆ ಲಾಕ್ ಆಗಿತ್ತು. ಗೋವಾದ ವಿಪರೀತ ಸೆಖೆ ಹಾಗೂ ಕಾರಿನೊಳಗೆ ಗಾಳಿಯ ಸಂಚಾರ ಇಲ್ಲದ ಕಾರಣ (Lack of ventilation), ನಾಯಿಯು ತೀವ್ರವಾಗಿ ನರಳಾಡಿದೆ. ಕಾರಿನಿಂದ ಹೊರಬರಲು ನಾಯಿಯು ಹರಸಾಹಸ ಪಟ್ಟಿದ್ದು, ಹತಾಶೆಯಿಂದ ಕಾರಿನ ಮ್ಯಾಟ್‌ಗಳನ್ನು ಕಚ್ಚಿ ಹರಿದು ಹಾಕಿದೆ ಎಂದು ಪ್ರಾಣಿ ದಯಾ ಸಂಘದ ಅಧಿಕಾರಿಗಳು ತಿಳಿಸಿದ್ದಾರೆ. ಮಾಲೀಕರು ವಾಪಸ್ ಬರುವಷ್ಟರಲ್ಲಿ ನಾಯಿಯು ಪ್ರಜ್ಞಾಹೀನ ಸ್ಥಿತಿಯಲ್ಲಿತ್ತು. ತಕ್ಷಣವೇ ಅಧಿಕಾರಿಗಳಿಗೆ ಮಾಹಿತಿ ನೀಡಲಾಯಿತಾದರೂ, ಅಷ್ಟರಲ್ಲೇ ನಾಯಿಯು ಮೃತಪಟ್ಟಿತ್ತು. ಈ ಘಟನೆಗೆ ಸಂಬಂಧಿಸಿದಂತೆ ಗೋವಾ ಪೊಲೀಸರು ಮಾಲೀಕನನ್ನು ವಶಕ್ಕೆ ಪಡೆದಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪ್ರಾಣಿ ಹಿಂಸೆ ತಡೆ ಕಾಯ್ದೆಯಡಿ ಕ್ರಮ ಕೈಗೊಳ್ಳುವ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ. ನಾಯಿಯ ಸಾವಿಗೆ ನಿಖರ ಕಾರಣ ತಿಳಿಯಲು ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದೆ. "ಸಾಕುಪ್ರಾಣಿಗಳನ್ನು ಇಂತಹ ಬಿಸಿಲಿನಲ್ಲಿ ಅಥವಾ ಮುಚ್ಚಿದ ವಾಹನಗಳಲ್ಲಿ ಒಬ್ಬಂಟಿಯಾಗಿ ಬಿಡಬೇಡಿ" ಎಂದು ಪ್ರಾಣಿ ಕಲ್ಯಾಣ ಸಂಸ್ಥೆಗಳು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿವೆ. ಇದನ್ನೂಓದಿ: ಮಂಚದ ಪೆಟ್ಟಿಗೆಯಲ್ಲಿತ್ತು ಮಹಿಳೆಯ ಕೊಳೆತ ಶವ, ದೆಹಲಿಯಲ್ಲಿ ಬೆಚ್ಚಿಬೀಳಿಸುವ ಕೃತ್ಯ

